ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಯಾಚರಣೆ ವಿಸ್ತರಿಸಲು ಮುಂದಾದ ಇಸ್ರೇಲ್‌

ರಫಾ ತೊರೆಯಲು ಹೊಸ ಆದೇಶ * ರಾತ್ರಿಯಿಡೀ ನಡೆದ ದಾಳಿಯಲ್ಲಿ 19 ಜನರ ಸಾವು
Published 11 ಮೇ 2024, 11:49 IST
Last Updated 11 ಮೇ 2024, 11:49 IST
ಅಕ್ಷರ ಗಾತ್ರ

ರಫಾ (ಗಾಜಾ ಪಟ್ಟಿ): ಇಸ್ರೇಲ್‌ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ತಯಾರಿ ನಡೆಸಿದ್ದು, ಈ ಸಂಬಂಧ ಗಾಜಾದ ದಕ್ಷಿಣದ ನಗರವಾದ ರಫಾವನ್ನು ತೊರೆಯುವಂತೆ ಜನರಿಗೆ ಸೂಚಿಸಿದೆ. ಉತ್ತರ ಗಾಜಾದಲ್ಲಿ ಮತ್ತೆ ಗುಂಪುಗೂಡುತ್ತಿರುವ ಹಮಾಸ್‌ ಪ್ರದೇಶದತ್ತ ತೆರಳುತ್ತಿರುವುದಾಗಿ ಇಸ್ರೇಲ್‌ ಹೇಳಿದೆ.

ರಫಾದ ಹೊರವಲಯದಲ್ಲಿ ಇಸ್ರೇಲ್‌ ಪಡೆ ಮತ್ತು ಪ್ಯಾಲೆಸ್ಟೀನ್‌ ಬಂಡುಕೋರರ ನಡುವೆ ಭಾರೀ ಘರ್ಷಣೆ ಮುಂದುವರಿದಿದೆ. ಇದರಿಂದ ಅಗತ್ಯ ವಸ್ತುಗಳ ಕೊರತೆ ಕಾಡುತ್ತಿದ್ದು, ಈ ಭಾಗದಿಂದ 1.10 ಲಕ್ಷಕ್ಕೂ ಹೆಚ್ಚು ಜನರನ್ನು ತೆರಳುವಂತೆ ಒತ್ತಾಯಿಸಿದೆ.

19 ಜನರ ಸಾವು: ಜವೈದಾ, ಮಘಜಿ ಮತ್ತು ದೇರ್‌ ಅಲ್‌ ಬಲಾಹ್‌ ಪಟ್ಟಣಗಳಲ್ಲಿ ರಾತ್ರಿಯಿಡೀ ನಡೆದಿರುವ ಮೂರು ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 19 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಎಂಟು ಮಹಿಳೆಯರು, ಎಂಟು ಮಕ್ಕಳು ಸೇರಿದ್ದಾರೆ ಎಂದು ದೇರ್‌ ಅಲ್‌ ಬಲಾಹ್‌ನ ಆಸ್ಪತ್ರೆ ತಿಳಿಸಿದೆ. 

ಗಾಜಾದಲ್ಲಿ ಇಸ್ರೇಲ್‌ನ ಬಾಂಬ್‌ ದಾಳಿ, ಸೇನಾ ಆಕ್ರಮಣಗಳಿಂದಾಗಿ ಇಲ್ಲಿಯವರೆಗೆ 34,800ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಗಾಜಾ ಬಹುಪಾಲು ನಾಶವಾಗಿದ್ದು, ಶೇ 80ರಷ್ಟು ಜನರು ಮನೆಗಳನ್ನು ತೊರೆದಿದ್ದಾರೆ.

ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ (ವಾಷಿಂಗ್ಟನ್‌ ವರದಿ): ಅಮೆರಿಕ ಒದಗಿಸಿದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌, ಗಾಜಾದ ಮೇಲೆ ಬಳಸುವ ಮೂಲಕ ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಬೈಡನ್‌ ಆಡಳಿತ ಶುಕ್ರವಾರ ಹೇಳಿದೆ.

ಆದರೆ ಈ ಸಂಬಂಧ ಸಾಕ್ಷ್ಯವು ಅಪೂರ್ಣವಾಗಿದ್ದು, ಯುದ್ಧಕಾಲದ ಪರಿಸ್ಥಿತಿಗಳಿಂದಾಗಿ ನಿರ್ದಿಷ್ಟ ವಾಯುದಾಳಿಗಳನ್ನು ಖಚಿತವಾಗಿ ನಿರ್ಧರಿಸಲು ಅಮೆರಿಕ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಅದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT