ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Hamas War: ಉತ್ತರ ಆಯ್ತು, ದಕ್ಷಿಣ ಗಾಜಾದತ್ತ ಇಸ್ರೇಲ್ ಚಿತ್ತ

ಉತ್ತರ ಗಾಜಾ ಮೇಲಿನ ದಾಳಿ ಅಂತ್ಯದ ಸುಳಿವು ನೀಡಿದ ಸೇನೆ
Published 7 ಜನವರಿ 2024, 14:52 IST
Last Updated 7 ಜನವರಿ 2024, 14:52 IST
ಅಕ್ಷರ ಗಾತ್ರ

ಜೆರುಸಲೇಂ: ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ಸೇನೆ ನಡುವಿನ ಸಂಘರ್ಷವು ಭಾನುವಾರ ನಾಲ್ಕನೇ ತಿಂಗಳಿಗೆ ಕಾಲಿಟ್ಟಿತು. ಹಮಾಸ್‌ನ ಸೇನಾ ಮೂಲಸೌಕರ್ಯಗಳನ್ನು ನೆಲಸಮಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿರುವ ಇಸ್ರೇಲ್, ಉತ್ತರ ಗಾಜಾ ಮೇಲಿನ ದಾಳಿಯನ್ನು ಮುಕ್ತಾಯಗೊಳಿಸುವ ಸುಳಿವನ್ನು ನೀಡಿದೆ. 

ಈ ಕುರಿತು ಮಾತನಾಡಿದ ಇಸ್ರೇಲ್ ಸೇನಾ ಪಡೆಯ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗೇರಿ ಅವರು, ‘ಇಸ್ರೇಲ್–ಗಾಜಾ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಪಡೆಗಳು ಯುದ್ಧವನ್ನು ಮುಂದುವರಿಸಲಿವೆ. ಜೊತೆಗೆ ಗಡಿಯಲ್ಲಿ ಬೇಲಿ ಹಾಕುವ ಮೂಲಕ ಕೇಂದ್ರ ಮತ್ತು ದಕ್ಷಿಣ ಗಾಜಾ ಗುರಿಯಾಗಿಸಿ ಕಾರ್ಯಾಚರಣೆ ಮುಂದುವರಿಸಲಿವೆ’ ಎಂದಿದ್ದಾರೆ. 

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು, ಇಸ್ರೇಲ್ ಭೇಟಿ ನೀಡುವ ಮುನ್ನವೇ ಇಸ್ರೇಲ್ ಸೇನೆಯ ಈ ಹೇಳಿಕೆ ಹೊರಬಿದ್ದಿದೆ.

ಇಬ್ಬರು ಪತ್ರಕರ್ತರ ಸಾವು: ಪ್ಯಾಲೆಸ್ಟೀನ್‌ ಪ್ರದೇಶದ ಮೇಲೆ ಇಸ್ರೇಲ್‌ ಪಡೆಗಳು ನಡೆಸಿರುವ ವೈಮಾನಿಕ ದಾಳಿಯಲ್ಲಿ ಇಬ್ಬರು ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ಹಮಾಸ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಎಎಫ್‌ಪಿ ಸುದ್ದಿ ಸಂಸ್ಥೆಯ ವಿಡಿಯೋ ಸ್ಟ್ರಿಂಜರ್ ಮುಸ್ತಫಾ ತುರಿಯಾ ಮತ್ತು ‘ಅಲ್ ಜಜೀರಾ’ ಟಿ.ವಿ ವಾಹಿನಿಯ ಪತ್ರಕರ್ತ ಹಮ್ಜಾ ವಾಯೆಲ್‌ ದಹ್‌ದೌಹ್ ಮೃತಪಟ್ಟವರು.

ರಫಾದಲ್ಲಿ ಇಸ್ರೇಲ್‌ ದಾಳಿಯಿಂದ ಹಾನಿಗೀಡಾಗಿದ್ದ ಮನೆಯೊಂದರ ವಿಡಿಯೊ ಚಿತ್ರೀಕರಿಸಿ ಭಾನುವಾರ ಕಾರಿನಲ್ಲಿ ಮರಳುತ್ತಿದ್ದಾಗ ಇವರ ಮೇಲೆ ವಾಯು ದಾಳಿ ನಡೆದಿ‌ದೆ ಎಂದು ಸಚಿವಾಲಯ ತಿಳಿಸಿದೆ.

ಹಮ್ಜಾ ಅವರ ತಂದೆ ವಾಯೆಲ್‌ ಅಲ್‌ ದಹ್‌ದೌಹ್ ಅವರು ‘ಅಲ್ ಜಜೀರಾ’ದ ಬ್ಯುರೊ ಮುಖ್ಯಸ್ಥರಾಗಿದ್ದು, ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಈಚೆಗೆ ಗಾಯಗೊಂಡಿದ್ದರು. ವಾಯೆಲ್‌ ‌ಅವರ ಪತ್ನಿ ಹಾಗೂ ಇತರ ಇಬ್ಬರು ಮಕ್ಕಳು ದಾಳಿಯಲ್ಲಿ ಮೃತಪಟ್ಟಿದ್ದರು.

ಇಸ್ರೇಲ್ ದಾಳಿಗೆ 31 ಮಂದಿ ಸಾವು

ಇಸ್ರೇಲ್ ಸೇನೆಯು ಶನಿವಾರ ತಡರಾತ್ರಿ ಮತ್ತು ಭಾನುವಾರ ಹಮಾಸ್ ಬಂಡುಕೋರರನ್ನು ಗುರಿಯಾಗಿಸಿಕೊಂಡು ನಡೆಸಿದ ವೈಮಾನಿಕ ದಾಳಿಗಳಲ್ಲಿ ಒಟ್ಟಾರೆ 31 ಮಂದಿ ಮೃಪಟ್ಟಿದ್ದಾರೆ.

ಶನಿವಾರ ತಡರಾತ್ರಿ ಖಾನ್ ಯೂನಿಸ್ ನಗರದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 12 ಮಕ್ಕಳು ಸೇರಿದಂತೆ 18 ಮಂದಿ ಮೃತಪಟ್ಟಿದ್ದು ಅವರನ್ನು ಭಾನುವಾರ ನಾಸ್ಸೆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯಲ್ಲಿ ಇಲ್ಲಿನ ನಿರಾಶ್ರಿತರ ಕೇಂದ್ರದಲ್ಲಿದ್ದ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 

ಖಾನ್ ಯೂನಿಸ್ ಮತ್ತು ರಫಾ ಪ್ರದೇಶದ ದಕ್ಷಿಣ ನಗರದಲ್ಲಿ ನಡೆದ ಮತ್ತೊಂದು ವೈಮಾನಿಕ ದಾಳಿಯಲ್ಲಿ ಕನಿಷ್ಠ ಏಳು ಮಂದಿ ಬಲಿಯಾಗಿದ್ದು ಅವರನ್ನು ಹತ್ತಿರದ ಯುರೋಪಿಯನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್‌ನ ಪತ್ರಕರ್ತರೊಬ್ಬರು ಮಾಹಿತಿ ನೀಡಿದ್ದಾರೆ. 

ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ನಡೆದ ದಾಳಿಯಲ್ಲಿ ಆರು ಮಂದಿ ಪ್ಯಾಲೆಸ್ಟೀನ್ ಪ್ರಜೆಗಳು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT