ಜೆರುಸಲೇಂ: ಇಸ್ರೇಲ್‌ನಲ್ಲಿ ನಿರ್ಮಾಣ ಚಟುವಟಿಕೆಗಳು ಬಹುತೇಕ ಸ್ಥಗಿತವಾಗಿದ್ದು, ಕಾರ್ಮಿಕ ಕೊರತೆ ಎದುರಾಗಿದೆ. ಭಾರತ ಸೇರಿದಂತೆ ವಿದೇಶಗಳಿಂದ ಕಾರ್ಮಿಕರನ್ನು ಕರೆತರಬೇಕು ಎಂದು ಗುತ್ತಿಗೆದಾರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
‘ಹೇಗಾದರೂ ಸರಿ ನಮಗೆ ಈಗ ತುರ್ತಾಗಿ ಕಾರ್ಮಿಕರು ಬೇಕಾಗಿದ್ದಾರೆ. ಈ ಅಗತ್ಯವನ್ನು ಈಡೇರಿಸಲು ಸರ್ಕಾರ ಭಾರತವು ಸೇರಿದಂತೆ ವಿವಿಧೆಡೆಯಿಂದ ಕಾರ್ಮಿಕರನ್ನು ಕರೆತರಬೇಕು ಎಂದು’ ಇಸ್ರೇಲಿ ಗುತ್ತಿಗೆದಾರರ ಸಂಘವು ತಿಳಿಸಿದೆ.
ನಿರ್ಮಾಣ ಚಟುವಟಿಕೆಗಳಿಗಾಗಿ ಈಗ ಕೊರತೆ ಇರುವ ಕಾರ್ಮಿಕರು ಯಾವ ಸ್ಥಳದಿಂದ ಬರಬೇಕು ಎಂಬುದನ್ನು ಸರ್ಕಾರ ನಿರ್ಧರಿಸಬೇಕು. ಭಾರತದಿಂದ ಹೆಚ್ಚಿನ ಕಾರ್ಮಿಕರನ್ನು ಕರೆತಂದು ಈ ಕೊರತೆ ನೀಗಿಸಬಹುದು ಎಂದೂ ಹೇಳಿದೆ.
ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಇಸ್ರೇಲ್‌ನ ಆರ್ಥಿಕತೆಯ ಸಚಿವ ನಿರ್ ಬರ್ಕತ್, ಅವರು ನಿರ್ಮಾಣವಲಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಭಾರತದಿಂದ ಕಾರ್ಮಿಕರನ್ನು ನೇಮಿಸಿಕೊಳ್ಳುವ ಕುರಿತು ಚರ್ಚಿಸಿದ್ದರು.
ಮೂಲಗಳ ಪ್ರಕಾರ, ಸುಮಾರು 1.6 ಲಕ್ಷ ಕಾರ್ಮಿಕರನ್ನು ಕರೆತರುವ ಕುರಿತು ಆಗ ಚರ್ಚೆಯಾಗಿತ್ತು. ಇಸ್ರೇಲ್ ಕಾರ್ಮಿಕರ ಕೊರತೆ ಇರುವ ಕ್ಷೇತ್ರಗಳಿಗೆ ನಿರ್ಮಾಣ ಉದ್ಯಮವು ವಿದೇಶಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಿದೆ.
ಈ ವಲಯದ ದೊಡ್ಡ ಸಂಖ್ಯೆಯ ಅಂದರೆ ಸುಮಾರು 80 ಸಾವಿರದಷ್ಟು ಕಾರ್ಮಿಕರು ಪ್ಯಾಲೆಸ್ಟೀನ್ ಕಡೆಯಿಂದ ಬರುತ್ತಾರೆ. ಉಳಿದಂತೆ ಚೀನಾದಿಂದ ಸುಮಾರು 7 ಸಾವಿರ, ಪೂರ್ವ ಯುರೋಪ್‌ನಿಂದ ಸುಮಾರು 6 ಸಾವಿರ ಜನ ಬರುತ್ತಾರೆ.
ಕಾರ್ಮಿಕರ ಕೊರತೆಗೆ ಗಾಜಾದಲ್ಲಿ ಹಮಾಸ್ ಉಗ್ರವಾದಿಗಳ ಜೊತೆಗೆ ನಡೆಯುತ್ತಿರುವ ಯುದ್ಧ ಸ್ಥಿತಿಯೂ ಕಾರಣವಾಗದೆ.
ಇಸ್ರೇಲ್‌ನಲ್ಲಿ ಸುಮಾರು 20 ಸಾವಿರ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಆರೈಕೆ, ಸಹಾಯಕರಾಗಿದ್ದಾರೆ. ಯುದ್ಧ ಆರಂಭವಾದ ಬಳಿಕವೂ ಹೆಚ್ಚಿನವರು ಇಸ್ರೇಲ್‌ನಲ್ಲಿಯೇ ಉಳಿಯಲು ನಿರ್ಧರಿಸಿದ್ದರು. ‘ಭದ್ರತೆ‘ ಇದೆ ಹಾಗೂ ‘ಆಕರ್ಷಕ ವೇತನ’ ಇದೆ ಎಂಬುದು ಹೀಗೆ ಉಳಿಯಲು ಕಾರಣವಾಗಿದೆ.
ಕದನ ವಿರಾಮ ಇಲ್ಲ
ಕದನ ವಿರಾಮದ ಸಾಧ್ಯತೆಗಳನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತೊಮ್ಮೆ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಹಮಾಸ್ ಬಂಡುಕೋರರು ಮಕ್ಕಳು ವಯಸ್ಕರು ಸೇರಿ 240 ಜನರನ್ನು ಒತ್ತೆ ಇರಿಸಿಕೊಂಡಿದ್ದಾರೆ. ‘ಕದನ ವಿರಾಮ ಕುರಿತು ಹಲವು ವದಂತಿಗಳಿವೆ. ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಹಮಾಸ್ ಇರಿಸಿಕೊಂಡಿರುವ ಒತ್ತೆಯಾಳುಗಳ ಬಿಡುಗಡೆಯಾಗದೇ ಕದನ ವಿರಾಮ ಘೋಷಣೆ ಪ್ರಶ್ನೆಯೇ ಇಲ್ಲ’ ಎಂದು ನೇತನ್ಯಾಹು ಹೇಳಿದ್ದಾರೆ. ಒಂದು ಮೂಲಗಳ ಪ್ರಕಾರ ಮೂರು ದಿನಗಳ ಕದನ ವಿರಾಮ ಘೋಷಣೆಗೆ ಪ್ರತಿಯಾಗಿ ಆರು ಮಂದಿ ಅಮೆರಿಕನ್ನರು ಸೇರಿದಂತೆ 12 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಜೊತೆಗೆ ಮಾತುಕತೆ ನಡೆಯುತ್ತಿದೆ. ಗಾಜಾದಿಂದ ಪ್ಯಾಲೆಸ್ಟೀನಿಯರ ಗುಳೆ: ಇಸ್ರೇಲ್ ಸೇನೆ ಗುರುವಾರ ಗಾಜಾ ನಗರದ ಮೇಲೆ ವಾಯುದಾಳಿ ನಡೆಸಿದೆ. ಆತಂಕಕ್ಕೀಡಾಗಿರುವ ಸಾವಿರಾರು ಪ್ಯಾಲೆಸ್ಟೀನಿಯರು ರಕ್ಷಣೆ ಬಯಸಿ ನಗರದಿಂದ ನಿರ್ಗಮಿಸುತ್ತಿದ್ದಾರೆ. ಜಖಂಗೊಂಡ ಕಟ್ಟಡಗಳು ರಸ್ತೆಗಳಲ್ಲಿ ಬಿಕೊ ಎನ್ನವ ಸ್ಥಿತಿ ಇದೆ. ಕಟ್ಟಡದ ಮೇಲೆ ಇಸ್ರೇಲ್ ಧ್ವಜಗಳು ರಾರಾಜಿಸುತ್ತಿವೆ. ಒಟ್ಟು ಸ್ಥಿತಿಯನ್ನು ರೆಡ್‌ಕ್ರಾಸ್ ಅಂತರರಾಷ್ಟ್ರೀಯ ಸಮಿತಿ ಮುಖ್ಯಸ್ಥ ಟಾಮ್ ಪೊಟೊಕರ್ ‘ಮಹಾದುರಂತ’ ಎಂದು ಬಣ್ಣಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.