ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಮೇಲೆ ಅಣು ಬಾಂಬ್‌: ಹೇಳಿಕೆ ನೀಡಿದ ಇಸ್ರೇಲ್‌ನ ಸಚಿವ ಅಮಾನತು

Published 5 ನವೆಂಬರ್ 2023, 23:30 IST
Last Updated 5 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಜೆರುಸಲೇಂ: ಹಮಾಸ್ ಆಡಳಿತದ ಗಾಜಾ ಪಟ್ಟಿಯ ಮೇಲೆ ಅಣು ಬಾಂಬ್ ಹಾಕುವುದು ಒಂದೇ ಆಯ್ಕೆ ಎಂದು ಇಸ್ರೇಲ್‌ನ ಬಲಪಂಥೀಯ ಓಟ್‌ಜ್ಮಾ ಯೆಹುದಿತ್‌ ಪಕ್ಷದ ಸಚಿವ ಭಾನುವಾರ ಹೇಳಿಕೆ ನೀಡಿದ್ದಾರೆ.

 ಈ ಹೇಳಿಕೆ ನೀಡಿರುವ ಜೆರುಸಲೇಂ ವ್ಯವಹಾರಗಳು ಮತ್ತು ಪಾರಂಪಾರಿಕ ಖಾತೆ ಸಚಿವ ಅಮಿಚೈ ಎಲಿಯಾಹು ಅವರನ್ನು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಅನಿರ್ದಿಷ್ಟಾವಧಿಗೆ ಸರ್ಕಾರಿ ಸಭೆಗಳಿಂದ ಅಮಾನತುಗೊಳಿಸಿದ್ದಾರೆ. ಇದನ್ನು ಪ್ರಧಾನಿ ಕಚೇರಿಯು ಖಚಿತಪಡಿಸಿದೆ.

ರೇಡಿಯೋ ಸಂದರ್ಶನವೊಂದರಲ್ಲಿ ಸಚಿವ ಅಮಿಚೈ ಎಲಿಯಾಹು ಅವರು ಇಂತಹ ಹೇಳಿಕೆ ನೀಡಿದ್ದು, ಅವರ ಹೇಳಿಕೆಗಳು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರನ್ನು ಕೆರಳಿಸಿತು. ಸಚಿವರ ವಜಾಗೊಳಿಸುವಂತೆಯೂ ಪ್ರಧಾನಿ ಮೇಲೆ ಒತ್ತಡ ಹೇರಲು ಕಾರಣವಾಯಿತು.

ತಮ್ಮ ಹೇಳಿಕೆ ಕೋಲಾಹಲ ಎಬ್ಬಿಸಿದ ನಂತರ ಅಮಿಚೈ ಎಲಿಯಾಹು ಅವರು, ಅದೊಂದು ರೂಪಕವಾಗಿ ನೀಡಿದ ಹೇಳಿಕೆ ಎಂದು ತಾವು ಮೊದಲು ನೀಡಿದ ಹೇಳಿಕೆಯಿಂದ ಹಿಂದೆ ಸರಿದರು.

‘ಎಲ್ಲ ಒತ್ತೆಯಾಳುಗಳು ಮರಳುವವರೆಗೂ ಕದನ ವಿರಾಮವಿಲ್ಲ’:

ಪಾಲೆಸ್ಟೀನ್‌ನ ಹಮಾಸ್‌ ಉಗ್ರರು ಅ.7ರಂದು ಭಯೋತ್ಪಾದಕ ದಾಳಿ ನಡೆಸಿ ಒತ್ತೆ ಇರಿಸಿಕೊಂಡಿರುವ 240ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ವಾಪಸ್‌ ಕಳುಹಿಸುವವರೆಗೂ  ಗಾಜಾದಲ್ಲಿ ಕದನ ವಿರಾಮ ಘೋಷಣೆ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಸ್ಪಷ್ಟವಾಗಿ ಹೇಳಿದ್ದಾರೆ.

ಕದನ ವಿರಾಮದ ತೀರ್ಮಾನಕ್ಕೆ ಬರುವಂತೆ ಪ್ರಮುಖ ನಾಯಕರು ಕೊಡುತ್ತಿರುವ ಕರೆಗಳನ್ನು ನೆತನ್ಯಾಹು ಅವರು ತಿರಸ್ಕರಿಸಿದ್ದಾರೆ.

ಕತಾರ್, ಸೌದಿ, ಈಜಿಪ್ಟ್, ಜೋರ್ಡಾನ್ ಮತ್ತು ಸಂಯುಕ್ತ ಅರಬ್ ಸಂಸ್ಥಾನದ ವಿದೇಶಾಂಗ ಸಚಿವರು ಶನಿವಾರ ಜೋರ್ಡಾನ್‌ನ ಅಮ್ಮನ್‌ನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರನ್ನು ಭೇಟಿಯಾಗಿ ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಇಸ್ರೇಲ್‌ ಮನವೊಲಿಸಲು ಒತ್ತಾಯಿಸಿದ್ದರು. 

ಇಸ್ರೇಲ್‌ ಆಕ್ರಮಿತ ಪಶ್ಚಿಮ ದಂಡೆಗೆ ಬ್ಲಿಂಕನ್‌ ಅವರು ಅನಿರೀಕ್ಷಿತ ಭೇಟಿ ನೀಡಿದ ಸಮಯದಲ್ಲಿ ಬ್ಲಿಂಕನ್ ಅವರನ್ನು ಭೇಟಿಯಾದ ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮೂದ್ ಅಬ್ಬಾಸ್, ತಕ್ಷಣವೇ ಕದನ ವಿರಾಮಕ್ಕೆ ಬರುವಂತೆ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT