ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಲ್ಲಿ ಭಾರತೀಯ ಮೂಲದ ಯುವತಿ ಸಾವು: ಗಹಗಹಿಸಿ ನಕ್ಕ ಅಮೆರಿಕ ಪೊಲೀಸ್ ಅಧಿಕಾರಿ!

ಆಂಧ್ರಪ್ರದೇಶದ ಕಡಪಾ ಮೂಲದ ಜಾಹ್ನವಿ ಕಂಡುಲಾ ಸಿಯಾಟಲ್‌ನಲ್ಲಿ ಪೊಲೀಸ್ ಗಸ್ತು ವಾಹನಕ್ಕೆ ಸಿಲುಕಿ ಸಾವು ಪ್ರಕರಣ
Published 13 ಸೆಪ್ಟೆಂಬರ್ 2023, 11:23 IST
Last Updated 13 ಸೆಪ್ಟೆಂಬರ್ 2023, 11:23 IST
ಅಕ್ಷರ ಗಾತ್ರ

ಸಿಯಾಟಲ್: ಅಮೆರಿಕದ ವಿವಿಧ ರಾಜ್ಯಗಳಲ್ಲಿನ ಪೊಲೀಸರ ದರ್ಪದ ಸುದ್ದಿಗಳು ಆಗಾಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತವೆ. ಈಗ ಇಂತದೇ ಸಂಗತಿ ಬೆಳಕಿಗೆ ಬಂದಿದೆ.

2023 ರ ಜನವರಿ 26 ರಂದು ಅಮೆರಿಕದ ಸಿಯಾಟಲ್‌ನಲ್ಲಿ ಪೊಲೀಸ್ ಗಸ್ತು ವಾಹನಕ್ಕೆ ಸಿಲುಕಿ ಮೃತಪಟ್ಟಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ ಅವರ ಸಾವಿನ ಬಗ್ಗೆ ಸಿಯಾಟಲ್ ಉನ್ನತ ಪೊಲೀಸ್ ಅಧಿಕಾರಿಗಳು ನಡೆದುಕೊಂಡಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಸಿಯಾಟಲ್ ಪೊಲೀಸ್ ಕಮಿಷನರ್ ಉನ್ನತ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ಅಧಿಕೃತವಾಗಿ ಸಿಯಾಟಲ್ ಪೊಲೀಸರು ಘಟನೆಗೆ ಸಂಬಂಧಿಸಿದ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಇದರ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ

ಸಿಯಾಟಲ್ ಪೊಲೀಸ್ ಆಫೀಸರ್ಸ್‌ ಗಿಲ್ಡ್‌ನ ಉಪಾಧ್ಯಕ್ಷ ಡೇನಿಯಲ್ ಆಡೆರರ್, ಜಾಹ್ನವಿ ಕಂಡುಲಾ ಸಾವಿನ ಪ್ರಕರಣದ ಬಗ್ಗೆ ಮಾತನಾಡುತ್ತಾ, ‘ಅವಳು ಸತ್ತಳು, 11 ಸಾವಿರ ಡಾಲರ್‌ನ ಚೆಕ್ ಬರೆದು ಬಿಸಾಕೋಣ, ಒಹ್ ಅವಳಿಗೆ 26 ವರ್ಷ ವಯಸ್ಸು ಅಲ್ವಾ, ಹಾಗಾದರೆ ಹೆಚ್ಚಿನ ಬೆಲೆಯಿಲ್ಲ’ ಎಂದು ಗಹಗಹಿಸಿ ನಕ್ಕು ದರ್ಪದಿಂದ ಮಾತನಾಡಿದ್ದು ಪೊಲೀಸ್ ಬಾಡಿ ಕ್ಯಾಮ್ ವಿಡಿಯೊದಲ್ಲಿ ದಾಖಲಾಗಿದೆ.

ಈ ವಿಡಿಯೊ ಸಂಭಾಷಣೆ ಜಾಹ್ನವಿ ಸಾವಿನ ಕೆಲ ಘಂಟೆಗಳ ನಂತರ ನಡೆದಿದ್ದು ಎಂದು ಗೊತ್ತಾಗಿದೆ. ಜಾಹ್ನವಿ ವಯಸ್ಸನ್ನು ಆ ಪೊಲೀಸ್ ಅಧಿಕಾರಿ ತಪ್ಪಾಗಿ ಉಚ್ಚರಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಈ ವಿಡಿಯೊ ಕಳೆದ ಜುಲೈನಲ್ಲಿ ಹರಿದಾಡಿತ್ತು. ಆದರೆ, ಅಂದು ಸಿಯಾಟಲ್ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿರಲಿಲ್ಲ. ಇದೀಗ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸಿಯಾಟಲ್‌ನ ಸೌತ್ ಲೇಕ್ ಯೂನಿಯನ್‌ನಲ್ಲಿರುವ ನಾರ್ಥ್ ಈಸ್ಟ್‌ ವಿಶ್ವವಿದ್ಯಾಲಯದ ಆವರಣದಲ್ಲಿ 'ಇನ್‌ಫಾರ್ಮೆಶನ್ಸ್‌ ಸಿಸ್ಟಮ್‌' ಪದವಿ ಓದುತ್ತಿದ್ದ 23 ವರ್ಷದ ಹಾಗೂ ಆಂಧ್ರಪ್ರದೇಶದ ಕಡಪಾ ಮೂಲದ ಜಾಹ್ನವಿ ಕಂಡುಲಾ ಅವರು ರಸ್ತೆ ದಾಟುವಾಗ ಪೊಲೀಸ್ ಗಸ್ತು ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದರು.

ಅಂದು ಪೊಲೀಸ್ ಅಧಿಕಾರಿ ಕೇವಿನ್ ಡೇವ್ ಎನ್ನುವರು ಕಾರು ಚಲಾಯಿಸುತ್ತಿದ್ದರು, ಅವರು ಅಗ್ನಿ ಅವಘಡ ನಡೆದಿದ್ದ ಸ್ಥಳಕ್ಕೆ ವೇಗವಾಗಿ ಹೋಗುತ್ತಿದ್ದರು ಎಂದು ಪ್ರಾಥಮಿಕ ವರದಿಗಳು ಹೇಳಿದ್ದವು. ಕೇವಿನ್ ವೇಗವಾಗಿ ಹೋಗುತ್ತಿದ್ದರೂ ನಿಯಂತ್ರಣ ಕಳೆದುಕೊಳ್ಳುವ ವೇಗದಲ್ಲಿ ಇರಲಿಲ್ಲ ಎಂದೂ ಸಿಯಾಟಲ್ ಪೊಲೀಸರು ತಿಳಿಸಿದ್ದರು.

ಇನ್ನು ಜಾಹ್ನವಿ ಕಂಡುಲಾ ಅವರ ಸಾವಿನ ಬಗ್ಗೆ ದರ್ಪ ಮೆರೆದಿರುವ ಪೊಲೀಸ್ ಅಧಿಕಾರಿ ಡೇನಿಯಲ್ ಆಡೆರರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಕೇಳಿ ಬರುತ್ತಿವೆ. ಇದು ಜನಾಂಗೀಯ ದೌರ್ಜನ್ಯದ ಮನೋಭಾವ ಎಂದಿದ್ದಾರೆ. ಅಮೆರಿಕದ ಪೊಲೀಸ್ ಅಧಿಕಾರಿಗಳ ದರ್ಪಕ್ಕೆ ಮಿತಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT