ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಸಾವಿಗೆ ಪುಟಿನ್ ಅವರೇ ಕಾರಣ: ಜೋ ಬೈಡನ್

Published 17 ಫೆಬ್ರುವರಿ 2024, 3:19 IST
Last Updated 17 ಫೆಬ್ರುವರಿ 2024, 3:19 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಲೆಕ್ಸಿ ನವಾಲ್ನಿ ಅವರ ಸಾವಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆರೋಪಿಸಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಲೆಕ್ಸಿ ನವಾಲ್ನಿ ನಿಧನದಿಂದ ನನಗೆ ಆಶ್ಚರ್ಯವಾಗಲಿಲ್ಲ. ಆದರೆ, ಆಕ್ರೋಶಗೊಂಡಿದ್ದೇನೆ. ನವಾಲ್ನಿ ನಿಧನದಿಂದಾಗಿ ರಷ್ಯಾದ ಆಡಳಿತ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು’ ಎಂದು ಎಚ್ಚರಿಸಿದ್ದಾರೆ.

‘ಏನಾಯಿತು ಎಂದು ನಮಗೆ ನಿಖರವಾಗಿ ತಿಳಿದಿಲ್ಲ. ಆದರೆ, ನವಾಲ್ನಿ ಸಾವಿನ ಹಿಂದೆ ಪುಟಿನ್ ಮತ್ತು ಅವರ ಸಹಚರರ ಕೈವಾಡವಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ಗುಡುಗಿದ್ದಾರೆ.

ಪುಟಿನ್ ಸರ್ಕಾರದ ಭ್ರಷ್ಟಾಚಾರ ಮತ್ತು ಹಿಂಸಾಚಾರದ ವಿರುದ್ಧ ಧ್ವನಿಯೆತ್ತಿದ್ದ ವಿರೋಧ ಪಕ್ಷದ ನಾಯಕನಿಗೆ ಸಂದ ಗೌರವ ಇದಾಗಿದೆ. ನವಾಲ್ನಿ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೈಡನ್ ತಿಳಿಸಿದ್ದಾರೆ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಡಳಿತದಲ್ಲಿನ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದ ಹಾಗೂ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ (47) ಅವರು ಶುಕ್ರವಾರ ಕಾರಾಗೃಹದಲ್ಲಿ ಮೃತಪಟ್ಟಿದ್ದಾರೆ.

ಶುಕ್ರವಾರ ಬೆಳಿಗ್ಗೆ ವಾಯುವಿಹಾರ ಮಾಡುತ್ತಿದ್ದಾಗ ಅವರು ಅನಾರೋಗ್ಯಕ್ಕೆ ತುತ್ತಾಗಿ ಪ್ರಜ್ಞೆ ಕಳೆದುಕೊಂಡರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಬಂದಿತ್ತು. ಆದರೆ, ಅಷ್ಟು ಹೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ರಷ್ಯಾದ ಕಾರಾಗೃಹ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.

ಅವರ ಸಾವಿನ ಸುದ್ದಿಯನ್ನು ಅಧ್ಯಕ್ಷ ಪುಟಿನ್ ಅವರಿಗೆ ತಿಳಿಸಲಾಗಿದೆ ಎಂದು ಕ್ರೆಮ್ಲಿನ್ ವಕ್ತಾರ ತಿಳಿಸಿದ್ದಾರೆ.

’ನವಾಲ್ನಿ ಅವರು ಮೃತಪಟ್ಟಿದ್ದಾರೆ ಎಂಬ ವಿಚಾರ ನಮಗೆ ಗೊತ್ತಾಗಿಲ್ಲ. ಅವರನ್ನು ಬಂಧಿಸಿಟ್ಟ ಕಾರಾಗೃಹಕ್ಕೆ ಅವರ ವಕೀಲರು ತೆರಳುತ್ತಿದ್ದಾರೆ‘ ಎಂದು ನವಾಲ್ನಿ ಅವರ ವಕ್ತಾರರು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ವಿಧ್ವಂಸಕ ಕೃತ್ಯದ ಆರೋಪದಲ್ಲಿ 19 ವರ್ಷ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದ ನವಾಲ್ನಿ ಅವರನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ವ್ಲಾದಿಮಿರ್ ಪ್ರಾಂತ್ಯದಲ್ಲಿರುವ ರಷ್ಯಾ ಕೇಂದ್ರೀಯ ಕಾರಾಗೃಹದಿಂದ ಭಾರಿ ಬಿಗಿ ಭದ್ರತೆ ಇರುವ ಕಾರಾಗೃಹವೊಂದಕ್ಕೆ ಸ್ಥಳಾಂತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT