ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ನಿಧಿ ಸಂಗ್ರಹಣೆ ಮತ್ತು ಪ್ರಚಾರವನ್ನು ಬಿರುಸಿನಿಂದ ನಡೆಸುತ್ತಿದ್ದು, ಹಲವು ರಾಜ್ಯಗಳಲ್ಲಿ ವ್ಯಾಪಕ ಬೆಂಬಕ ದೊರೆಯುತ್ತಿದೆ.
ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಭಾನುವಾರ ನಿಧಿಸಂಗ್ರಹಣೆ ವೇಳೆ ಮಾತನಾಡಿದ ಕಮಲಾ, ‘ನವೆಂಬರ್ 5ರಂದು ನಡೆಯಲಿರುವ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಗೆಲ್ಲುತ್ತೇನೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಕಮಲಾ ಅವರ ಪ್ರಚಾರ ಕಾರ್ಯಕ್ಕೆ ಸುಮಾರು ₹101 ಕೋಟಿ ನಿಧಿ ಸಂಗ್ರಹವಾಗಿದೆ.
ರಾಜ್ಯ ಮತ್ತು ರಾಷ್ಟ್ರೀಯ ಸಮೀಕ್ಷೆಗಳ ಮೇಲುಸ್ತುವಾರಿ ವಹಿಸಿರುವ ರಿಯಲ್ ಕ್ಲಿಯರ್ ಪಾಲಿಟಿಕ್ಸ್ ಪ್ರಕಾರ, ಎಲ್ಲ ಸಮೀಕ್ಷೆಗಳಲ್ಲಿಯೂ ಕಮಲಾ ಅವರು ಟ್ರಂಪ್ ಅವರಿಗಿಂತ 0.5 ಶೇಕಡ ಪಾಯಿಂಟ್‌ಗಳ ಮುನ್ನಡೆ ಸಾಧಿಸಿದ್ದಾರೆ.
‘ಕಮಲಾ ಅವರು ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ ಮತ್ತು ಮಿಚಿಗನ್ ರಾಜ್ಯಗಳಲ್ಲಿ 4 ಶೇಕಡ ಪಾಯಿಂಟ್‌ಗಳ ಮುನ್ನಡೆ ಸಾಧಿಸಿದ್ದಾರೆ’ ಎಂದು ನ್ಯೂಯಾರ್ಕ್ ಟೈಮ್ಸ್ ಈಚೆಗೆ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಿದೆ.