ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Hamas War: ಗಾಜಾಪಟ್ಟಿ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್‌ ಪಡೆಗಳು

Published 12 ಡಿಸೆಂಬರ್ 2023, 13:39 IST
Last Updated 12 ಡಿಸೆಂಬರ್ 2023, 13:39 IST
ಅಕ್ಷರ ಗಾತ್ರ

ಜೆರುಸಲೇಂ: ಹಮಾಸ್ ಬಂಡುಕೋರರನ್ನು ಗುರಿಯಾಗಿಸಿಕೊಂಡು ಗಾಜಾಪಟ್ಟಿ ಮೇಲೆ ಇಸ್ರೇಲ್‌ ಪಡೆಗಳು ಮಂಗಳವಾರವೂ ತೀವ್ರ ದಾಳಿ ನಡೆಸಿದವು.

ಹಮಾಸ್–ಇಸ್ರೇಲ್‌ ಮಧ್ಯೆ ಸಂಘರ್ಷ ಏರ್ಪಟ್ಟು 67 ದಿನಗಳು ಕಳೆದಿವೆ. ಇಸ್ರೇಲ್‌ ಪಡೆಗಳು ವೆಸ್ಟ್‌ ಬ್ಯಾಂಕ್‌ ಮೇಲೆ ಮಂಗಳವಾರ ನಡೆಸಿದ ದಾಳಿಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ ಆರೋಗ್ಯ ಸಚಿವಾಲಯ ತಿಳಿಸಿದೆ.

‘ಡ್ರೋನ್‌ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇಸ್ರೇಲ್‌ ಸೇನೆಯು ಜೆನಿನ್‌ ಕ್ಯಾಂಪ್‌ ಮೇಲೆಯೂ ತೀವ್ರ ದಾಳಿ ಮುಂದುವರಿಸಿದೆ. ಆಂಬುಲೆನ್ಸ್‌ಗಳ ಪ್ರವೇಶಕ್ಕೆ ಅಡ್ಡಿ ಮಾಡುತ್ತಿದೆ’ ಎಂದು ಪ್ಯಾಲೆಸ್ಟೀನಿಯನ್‌ ರೆಡ್‌ ಕ್ರೆಸೆಂಟ್‌ ಸೊಸೈಟಿ ಹೇಳಿದೆ. ಇಸ್ರೇಲ್‌ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಆಸ್ಪತ್ರೆ ಮೇಲೆ ದಾಳಿ’: ಉತ್ತರ ಪ್ಯಾಲೆಸ್ಟೀನ್ ಗಡಿಯಲ್ಲಿನ ಆಸ್ಪತ್ರೆ ಮೇಲೆ ಇಸ್ರೇಲ್‌ ಪಡೆಗಳು ದಾಳಿ ನಡೆಸಿವೆ ಎಂದು ಗಾಜಾಪಟ್ಟಿಯ ಆರೋಗ್ಯ ಸಚಿವಾಲಯ ತಿಳಿಸಿದೆ. ‘ಕಮಲ್‌ ಅದ್ವಾನ್‌ ಆಸ್ಪತ್ರೆ ಮೇಲೆ ಆಕ್ರಮಣ ಮಾಡಿ ಬಾಂಬ್ ದಾಳಿ ನಡೆಸಲಾಗಿದೆ’ ಎಂದು ವಕ್ತಾರ ಅಶ್ರಫ್‌–ಅಲ್‌–ಕುದ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಇಸ್ರೇಲ್‌ ಯುದ್ಧವಿಮಾನವು ಗಾಜಾದಾದ್ಯಂತ ಇರುವ ರಾಕೆಟ್‌ ಉಡಾವಣಾ ನೆಲೆಗಳ ಮೇಲೆ ದಾಳಿ ನಡೆಸಿದೆ. ಭೂ ಸೇನೆಯು 250 ರಾಕೆಟ್‌ ಮತ್ತು ಶೆಲ್‌ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದೆ’ ಎಂದು ಇಸ್ರೇಲ್‌ ಸೇನೆ ತಿಳಿಸಿದೆ. ಹಮಾಸ್‌ ಬಂಡುಕೋರರನ್ನು ಸದೆಬಡಿಯಲು ಇನ್ನೂ ಹಲವು ತಿಂಗಳುಗಳ ಕಾಲ ಹೋರಾಡಲು ಸಿದ್ಧ ಎಂದು ಅದು ತಿಳಿಸಿದೆ.

ಈ ಮಧ್ಯೆ ಇಸ್ರೇಲ್‌ ಕಡೆಗೆ ಸಾಗುತ್ತಿದ್ದ ನಾರ್ವೆ ದೇಶದ ಧ್ವಜ ಇದ್ದ ಅನಿಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಹೌತಿ ಬಂಡುಕೋರರು ದಾಳಿಯ ಹೊಣೆ ಹೊತ್ತಿದ್ದಾರೆ.

ತುರ್ತು ಸಭೆ: ಗಾಜಾದಲ್ಲಿ  ಮಾನವೀಯ ನೆಲೆಯಲ್ಲಿ  ತಕ್ಷಣವೇ ಕದನ ವಿರಾಮ ಘೋಷಣೆ ಮಾಡಬೇಕು ಎಂಬ ನಿರ್ಣಯವನ್ನು ಮತಕ್ಕೆ ಹಾಕಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಂಗಳವಾರ ತುರ್ತು ಸಭೆ ಕರೆದಿದೆ.

ಇದಕ್ಕೂ ಮುನ್ನ ಶುಕ್ರವಾರ, ಕದನವಿರಾಮ ಘೋಷಣೆ ಹಾಗೂ ಹಮಾಸ್‌ನಿಂದ ಒತ್ತೆಯಾಳುಗಳ ಬೇಷರತ್‌ ಬಿಡುಗಡೆಗೆ ಆಗ್ರಹಪಡಿಸುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮತಕ್ಕೆ ಹಾಕಲಾಗಿದ್ದ ನಿರ್ಣಯದ ಅನುಮೋದನೆಯನ್ನು ಅಮೆರಿಕ ತನ್ನ ‘ವಿಟೊ’ ಪರಮಾಧಿಕಾರ ಬಳಸಿ ತಡೆಹಿಡಿದಿತ್ತು.

ಇಸ್ರೇಲ್‌– ಹಮಾಸ್‌ ಬಂಡುಕೋರರ ನಡುವಿನ ಯುದ್ಧದಲ್ಲಿ ಈವರೆಗೆ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 18 ಸಾವಿರಕ್ಕೆ ತಲುಪಿದೆ. ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT