ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕ್: ಒಮ್ಮತಕ್ಕೆ ಬರಲು ಪಿಎಂಎಲ್– ಪಿಪಿಪಿ ವಿಫಲ

Published 20 ಫೆಬ್ರುವರಿ 2024, 15:49 IST
Last Updated 20 ಫೆಬ್ರುವರಿ 2024, 15:49 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯ ಅಧಿಕಾರ ಹಂಚಿಕೆ ಸೂತ್ರದ ಕುರಿತು ಒಮ್ಮತಕ್ಕೆ ಬರಲು ಪಿಎಂಎಲ್-ಎನ್ ಮತ್ತು ಪಿಪಿಪಿ ವಿಫಲವಾಗಿವೆ. ಉಭಯ ಪಕ್ಷಗಳ ಉನ್ನತ ನಾಯಕರ ನಡುವಿನ ಐದನೇ ಸುತ್ತಿನ ಮಾತುಕತೆಯ ಬಳಿಕವೂ ಸ್ಪಷ್ಟ ತೀರ್ಮಾನ ಹೊರಬಿದ್ದಿಲ್ಲ.

ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಹಿರಿಯ ನಾಯಕರಾದ ಸೆನೆಟರ್ ಇಶಾಕ್ ದಾರ್ ಅವರ ನಿವಾಸದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಎರಡೂ ಪಕ್ಷಗಳ ಪ್ರಮುಖರು ಭಾಗವಹಿಸಿದ್ದರು. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಿಯೋಗದಲ್ಲಿ ಮುರಾದ್ ಅಲಿ ಶಾ, ಕಮರ್ ಜಮಾನ್, ನದೀಮ್ ಅಫ್ಜಲ್ ಚಾನ್ ಮತ್ತು ಇತರರು ಇದ್ದರು ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪತ್ರಿಕೆ ಮಂಗಳವಾರ ವರದಿ ಮಾಡಿದೆ.

ಫೆಬ್ರುವರಿ 8ರಂದು ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸಮ್ಮಿಶ್ರ ಸರ್ಕಾರ ರಚನೆಗಾಗಿ ಪಿಎಂಎಲ್‌–ಎನ್ ಮತ್ತು ಪಿಪಿಪಿ ಸಮನ್ವಯ ಸಮಿತಿಗಳ ನಡುವೆ ಈ ಹಿಂದೆಯೂ ಮಾತುಕತೆ ನಡೆದಿತ್ತು. ಸೋಮವಾರ ಮೂರು ತಾಸು ನಡೆದ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ನಾಯಕರಿಗೆ ಸಾಧ್ಯವಾಗಲಿಲ್ಲ.

ಪಿಪಿಪಿಯ ನಾಯಕರೊಂದಿಗೆ ಬುಧವಾರ ಮಾತುಕತೆ ಮುಂದುವರಿಸಲಾಗುವುದು ಎಂದು ಪಿಎಂಎಲ್-ಎನ್ ಪ್ರಕಟಿಸಿದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಪಿಎಂಎಲ್-ಎನ್ ನಾಯಕ ಅಜಮ್ ನಜೀರ್ ತರಾರ್ ಅವರು, ಸದ್ಯ ನಡೆಯುತ್ತಿರುವ ಮಾತುಕತೆ ಸಕಾರಾತ್ಮಕ ಹಾದಿಯಲ್ಲಿದೆ. ಪಿಪಿಪಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೆಲವು ನಿರ್ಧಾರಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT