ಮಾರ್ಜಾಯೂನ್ (ಲೆಬನಾನ್): ಲೆಬನಾನ್ ಮೇಲೆ ಇಸ್ರೇಲ್ ಸೋಮವಾರ ನಡೆಸಿದ ದಾಳಿಯಲ್ಲಿ 35 ಮಕ್ಕಳು, 58 ಮಹಿಳೆಯರು ಸೇರಿದಂತೆ 492 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ಇಸ್ರೇಲ್–ಹಿಜ್ಬುಲ್ಲಾ ಬಂಡುಕೋರರ ನಡುವೆ 2006ರ ನಂತರ ನಡೆಯುತ್ತಿರುವ ಬೃಹತ್ ಸಂಘರ್ಷ ಇದಾಗಿದೆ. ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವ ಮುನ್ನ, ದಕ್ಷಿಣ ಹಾಗೂ ಪೂರ್ವ ಲೆಬನಾನ್‌ನ ನಿವಾಸಿಗಳು ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಸೇನೆಯು ಎಚ್ಚರಿಕೆ ನೀಡಿದೆ.
ಅಪಾರ ಸಂಖ್ಯೆಯ ಲೆಬನಾನಿಯರು ದಕ್ಷಿಣಕ್ಕೆ ಪಲಾಯನ ಮಾಡುತ್ತಿದ್ದು, ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.
‘ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ. ಇದೀಗ ದಯವಿಟ್ಟು ನೀವಿರುವ ಸ್ಥಳಗಳಿಂದ ಹೊರಬನ್ನಿ. ನಮ್ಮ ಕಾರ್ಯಾಚರಣೆಯು ಮುಗಿಯುತ್ತಿದ್ದಂತೆ, ನಿಮ್ಮ ಮನೆಗಳಿಗೆ ಸುರಕ್ಷಿತವಾಗಿ ಮರಳಬಹುದು’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್‌ನ ನಿವಾಸಿಗಳಿಗೆ ಧ್ವನಿ ಮುದ್ರಿತ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.
‘ಹಿಜ್ಬುಲ್ಲಾ ಬಂಡುಕೋರರನ್ನು ಲೆಬನಾನ್‌ನಿಂದ ಹೊರಹಾಕಲು ಇಸ್ರೇಲ್ ಎಲ್ಲವನ್ನೂ ಮಾಡಲಿದೆ. ಅಗತ್ಯವಿದ್ದರೆ ಆಕ್ರಮಣಕ್ಕೂ ಸಿದ್ಧ. ಸೋಮವಾರದ ದಾಳಿಯು ಸಾಕಷ್ಟು ಹಾನಿ ಮಾಡಿದೆ’ ಎಂದು ಸೇನಾ ವಕ್ತಾರ, ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ.
‘ವರ್ಷದಿಂದಲೂ ಹಿಜ್ಬುಲ್ಲಾ ಬಂಡುಕೋರರು ಸುಮಾರು 9 ಸಾವಿರ ರಾಕೆಟ್‌ಗಳು ಮತ್ತು ಡ್ರೋನ್‌ಗಳನ್ನು ಇಸ್ರೇಲ್ ಮೇಲೆ ಉಡಾಯಿಸಿದ್ದಾರೆ. ಇಸ್ರೇಲ್ ಸೇನೆಯು ಸೋಮವಾರ ಒಂದೇ ದಿನ ಉಗ್ರರ 1,300 ಗುರಿಗಳನ್ನು ನಾಶಗೊಳಿಸಿದೆ’ ಎಂದಿದ್ದಾರೆ.
1.5 ಲಕ್ಷದಷ್ಟು ರಾಕೆಟ್‌ಗಳು ಹಾಗೂ ಕ್ಷಿಪಣಿಗಳನ್ನು ಹಿಜ್ಬುಲ್ಲಾ ಉಗ್ರರು ಹೊಂದಿದ್ದಾರೆ ಎಂದು ಅಂದಾಜಿಸಿರುವ ಇಸ್ರೇಲ್, ‘ದಕ್ಷಿಣ ಲೆಬನಾನ್‌ನನ್ನು ಯುದ್ಧ ವಲಯವನ್ನಾಗಿ ಮಾಡಲಾಗುತ್ತಿದೆ’ ಎಂದು ದೂರಿದೆ.