ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ ಪ್ರಜೆಯ ಶೇ 99ರಷ್ಟು ಮೂಳೆ ಮುರಿದಿದ್ದ ಉದ್ರಿಕ್ತರು; ಮರಣೋತ್ತರ ವರದಿ ಬಹಿರಂಗ

ಆರೋಪಿಗಳಿಗೆ ಶಿಕ್ಷೆ–ಪ್ರಧಾನಿ ಇಮ್ರಾನ್‌ ಖಾನ್‌ ಭರವಸೆ
Last Updated 5 ಡಿಸೆಂಬರ್ 2021, 12:43 IST
ಅಕ್ಷರ ಗಾತ್ರ

ಲಾಹೋರ್‌ (ಪಿಟಿಐ): ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಶುಕ್ರವಾರ ನಡೆದ ಶ್ರೀಲಂಕಾ ಪ್ರಜೆ ಪ್ರಿಯಾಂತ ಕುಮಾರ್‌ ದಿಯಾವಾದಾನ ಮೇಲಿನ ಹಲ್ಲೆಯಿಂದ ಅವರ ದೇಹದ ಬಹುತೇಕ ಮೂಳೆಗಳು ಮುರಿದು ಹೋಗಿದ್ದು, ಅವರ ದೇಹ ಶೇ 99ರಷ್ಟು ಸುಟ್ಟುಹೋಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯನ್ನು ಉಲ್ಲೇಖಿಸಿ ಮಾಧ್ಯಮವೊಂದು ಭಾನುವಾರ ವರದಿ ಮಾಡಿದೆ.

ತೆಹ್ರೀಕ್‌–ಇ–ಲಬ್ಬೈಕ್‌ ಪಾಕಿಸ್ತಾನ (ಟಿಎಲ್‌ಪಿ) ಸಂಘಟನೆಯ ಉದ್ರಿಕ್ತರ ಗುಂಪು ಶುಕ್ರವಾರ ಗಾರ್ಮೆಂಟ್ಸ್‌ ಕಾರ್ಖಾನೆಯೊಂದರ ಮೇಲೆ ದಾಳಿ ಮಾಡಿದ್ದರು. ಧರ್ಮನಿಂದೆಯ ಆರೋಪದ ಮೇಲೆ ಅಲ್ಲಿಯ 40 ವರ್ಷದ ವ್ಯವಸ್ಥಾಪಕ ದಿಯಾವಾದಾನ ಅವರನ್ನು ಹೊಡೆದು, ಬೆಂಕಿ ಹಚ್ಚಿ ಕೊಂದಿದ್ದರು.

ದಿಯಾವಾದಾನ ಅವರು ತಲೆಬರುಡೆ ಮತ್ತು ದವಡೆ ಭಾಗಕ್ಕೆ ಬಲವಾದ ಹೊಡೆತದಿಂದ ಸಾವನ್ನಪ್ಪಿದ್ದಾರೆ. ಅವರ ದೇಹ ಶೇ 99 ರಷ್ಟು ಸುಟ್ಟು ಹೋಗಿದೆ. ಕಾಲು ಹೊರತುಪಡಿಸಿ ಅವರ ಬಹುತೇಕ ಮೂಳೆ ಮುರಿತಗೊಂಡಿವೆ ಎಂದು ಮರಣೋತ್ತರ ಪರೀಕ್ಷಾ ವರದಿ ಹೇಳಿರುವುದಾಗಿ ‘ಜಿಯೊ ನ್ಯೂಸ್‌’ ವರದಿ ಮಾಡಿದೆ.

‘ಉದ್ರಿಕ್ತ ಗುಂಪು ಶ್ರೀಲಂಕಾ ಪ್ರಜೆಯ ಮೇಲೆ ಹಲ್ಲೆ ನಡೆಸುವಾಗ ವ್ಯಕ್ತಿಯೊಬ್ಬರು ರಕ್ಷಿಸಲು ಮುಂದಾಗುತ್ತಿರುವುದನ್ನು ವಿಡಿಯೊವೊಂದು ತೋರಿಸಿದೆ. ದಿಯಾವಾದಾನ ಮೃತಪಟ್ಟ ನಂತರ ಅವರ ದೇಹಕ್ಕೆ ಬೆಂಕಿ ಹಚ್ಚದಂತೆ ಮತ್ತೊಬ್ಬ ವ್ಯಕ್ತಿ ಮನವಿ ಮಾಡಿದ್ದಾರೆ. ಆದರೆ ಉದ್ರಿಕ್ತರ ಗುಂಪು ಅವರನ್ನು ದೂರಕ್ಕೆ ತಳ್ಳಿತು’ ಎಂದು ಮಾಧ್ಯಮಗಳು ಹೇಳಿವೆ.

ಘಟನೆಯ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹೆಚ್ಚಾದ ಹಿನ್ನೆಲೆ ಭಯೋತ್ಪಾದನೆಯ ನಂಟು ಹೊಂದಿರುವ 800 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹತ್ಯೆ ನಡೆಸಿದ ಆರೋಪ ಹೊತ್ತಿರುವ 118 ಮಂದಿಯ ಪೈಕಿ ಪ್ರಮುಖ 13 ಮಂದಿ ಶಂಕಿತರನ್ನು ಬಂಧಿಸಲಾಗಿದೆ.

ಹಿನ್ನೆಲೆ: ‘ಪ್ರಿಯಾಂತ ಕುಮಾರ್‌ ದಿಯಾವಾದಾನ ಅವರು ಇಸ್ಲಾಮ್‌ನ ಪವಿತ್ರ ಶ್ಲೋಕಗಳುಳ್ಳ ಪೋಸ್ಟರ್‌ವೊಂದನ್ನು ಹರಿದು ಹಾಕುವ ಮೂಲಕ ಧರ್ಮ ನಿಂದನೆ ಮಾಡಿದ್ದಾರೆ ಎಂಬ ವರದಿ ಮೇಲೆ 800ಕ್ಕೂ ಹೆಚ್ಚು ಉದ್ರಿಕ್ತ ಜನರ ಗುಂಪೊಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಜಮಾಯಿಸಿತ್ತು. ಕಟ್ಟಡದ ಮೇಲ್ಭಾಗದಲ್ಲಿದ್ದ ದಿಯಾವಾದಾನ ಅವರನ್ನು ಎಳೆದೊಯ್ದು ತೀವ್ರವಾಗಿ ಥಳಿಸಲಾಗಿತು. ಭಾರಿ ಹೊಡೆತದಿಂದ ದಿಯಾವಾದಾನ ಅವರು 11.28ರ ಹೊತ್ತಿಗೆ ಮೃತಪಟ್ಟಿದ್ದಾರೆ. ಬಳಿಕ ಉದ್ರಿಕ್ತ ಗುಂಪು ಅವರ ದೇಹಕ್ಕೆ ಬೆಂಕಿ ಹಚ್ಚಿದೆ’ ಎಂದು ಪಂಜಾಬ್ ಪ್ರಾಂತ್ಯದ ಐಜಿಪಿ ರಾವ್‌ ಸರ್ದಾರ್‌ ಅಲಿ ಖಾನ್‌ ಹೇಳಿದರು.

ಕೊಲಂಬೊ ವರದಿ: ‘ಶ್ರೀಲಂಕಾ ಪ್ರಜೆಯ ಹತ್ಯೆಗೆ ನ್ಯಾಯ ದೊರೆಯಲಿದೆ. ಉದ್ರಿಕ್ತ ಗುಂಪಿನ ಆರೋಪಿಗಳಿಗೆ ಯಾವುದೇ ಕರುಣೆಯಿಲ್ಲದೆ ಶಿಕ್ಷೆ ನೀಡಲಾಗುವುದು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರಿಗೆ ಭರವಸೆ ನೀಡಿದ್ದಾರೆ’ ಎಂದು ಅಧ್ಯಕ್ಷರ ಕಚೇರಿ ಭಾನುವಾರ ಇಲ್ಲಿ ತಿಳಿಸಿದೆ.

ಈ ಸಂಬಂಧ ಇಮ್ರಾನ್‌ ಖಾನ್‌ ಅವರು ರಾಜಪಕ್ಸೆ ಅವರಿಗೆ ದೂರವಾಣಿ ಕರೆ ಮಾಡಿದ್ದು, ಘಟನೆ ಸಂಬಂಧ ಇದುವರೆಗೆ 113 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿರುವುದಾಗಿ ಕಚೇರಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT