ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರ್ಸ್‌ ಆಗಿ ಬ್ರಿಟನ್‌ಗೆ ತೆರಳಿದ್ದ ಕೇರಳದ ಯುವಕ ಈಗ ಜನಪ್ರತಿನಿಧಿ

Published 5 ಜುಲೈ 2024, 15:38 IST
Last Updated 5 ಜುಲೈ 2024, 15:38 IST
ಅಕ್ಷರ ಗಾತ್ರ

ತಿರುವನಂತಪುರ: ಬ್ರಿಟನ್‌ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಲೇಬರ್ ಪಾರ್ಟಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಕೇರಳದ ಕೋಟಯಂ ಜಿಲ್ಲೆಯ ಕುಟುಂಬವೊಂದರಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.

ಲೇಬರ್ ಪಾರ್ಟಿಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದ ಈ ಕುಟುಂಬದ ಸೋಜನ್‌ ಜೋಸೆಫ್‌ ಚುನಾವಣೆಯಲ್ಲಿ ಜಯಗಳಿಸಿದ್ದು ಬ್ರಿಟನ್‌ ಸಂಸತ್ತು ಪ್ರವೇಶಿಸಿದ್ದ ಮಲಯಾಳಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇವರು ಕೆಂಟ್‌ನ ಆ್ಯಷ್‌ಫೋರ್ಡ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮೂಲತಃ ಕೋಟಯಂ ಜಿಲ್ಲೆಯ ಎಟ್ಟುಮಾನೂರ್‌ ಪಟ್ಟಣ ಸಮೀಪದ ಓಣಂತುರುತ್ತು ಗ್ರಾಮದ ನಿವಾಸಿ. ಮಗನ ಗೆಲುವು, ಸೂಜನ್‌ ಅವರ ತಂದೆ, 86 ವರ್ಷ ವಯಸ್ಸಿನ ಸಿ.ಟಿ.ಜೋಸೆಫ್‌ ಅವರ ಖುಷಿಯನ್ನು ಇಮ್ಮಡಿಗೊಳಿಸಿದೆ.

46 ವರ್ಷ ವಯಸ್ಸಿನ ಸೋಜನ್‌ ಅವರು ಡೇಮಿಯನ್‌ ಗ್ರೀನ್‌ ಅವರನ್ನು ಪರಾಭವಗೊಳಿಸಿದ್ದಾರೆ. ತೆರೇಸಾ ಮೇ ಸರ್ಕಾರದಲ್ಲಿ ಡೇಮಿಯನ್‌ ಅವರು ಸಚಿವರಾಗಿದ್ದವರು. ಆ್ಯಷ್‌ಫೋರ್ಡ್‌ ಕ್ಷೇತ್ರ ಕನ್ಸರ್ವೇಟಿವ್ ಪಕ್ಷದ ಭದ್ರಕೋಟೆ ಎಂಬ ಹಿನ್ನೆಲೆಯಲ್ಲಿ ಈ ಫಲಿತಾಂಶವು ಮಹತ್ವ ಪಡೆದಿದೆ.

‘ಫಲಿತಾಂಶ ಹೊರಬಿದ್ದ ಹಿಂದೆಯೇ ಸೋಜನ್‌ ಕರೆ ಮಾಡಿದ್ದರು. ಆತನ ಗೆಲುವು ನಮಗೆ ಹೆಚ್ಚಿನ ಖುಷಿಯನ್ನು ನೀಡಿದೆ’ ಎಂದು ಸೋಜನ್‌ ಅವರ ಬಾಮೈದುನ ಜೋ ಪಲತ್ತುಂಕಲ್‌ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜೋಸೆಫ್‌ –ಅಲೆಕುಟ್ಟಿ ಅವರಿಗೆ ಒಟ್ಟು ಏಳು ಮಂದಿ ಮಕ್ಕಳು. ಸೋಜನ್‌ ಕಿರಿಯವರು. ಕೋಟಯಂನಲ್ಲಿ ಶಾಲೆ, ಕಾಲೇಜು ಶಿಕ್ಷಣ ಪೂರೈಸಿದ್ದು, ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ನರ್ಸಿಂಗ್ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು.

ನರ್ಸ್ ಆಗಿ ಇಂಗ್ಲೆಂಡ್‌ಗೆ 2001ರಲ್ಲಿ ತೆರಳಿದ್ದರು. ಪ್ರಸ್ತುತ ಅವರು ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ಹೆಡ್‌ ನರ್ಸ್ ಆಗಿದ್ದಾರೆ. ಅವರ ಪತ್ನಿ ಬ್ರಿಟಾ ಕೂಡಾ ನರ್ಸ್. ದಂಪತಿಗೆ ಮೂವರು ಮಕ್ಕಳಿದ್ದಾರೆ. ಇವರ ಅನೇಕ ಸಂಬಂಧಿಕರು ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. 

ಕುಟುಂಬಕ್ಕೆ ಅಷ್ಟೇ ಅಲ್ಲದೇ ಸೋಜನ್‌ ಅವರ ಗೆಲುವು ಬ್ರಿಟನ್‌ನಲ್ಲಿ ನೆಲೆಸಿರುವ ಅಸಂಖ್ಯ ಮಲಯಾಳಿಗರಿಗೂ ಸಂತಸ ಉಂಟು ಮಾಡಿದೆ. ಅಲ್ಲಿ ನೆಲೆಸಿರುವ ಹೆಚ್ಚಿನ ಮಲಯಾಳಿಗರು ನರ್ಸಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಗಮನಾರ್ಹವಾಗಿದೆ. 

ಸೂಜನ್‌ ಜೋಸೆಫ್‌
ಸೂಜನ್‌ ಜೋಸೆಫ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT