ಬ್ಯಾಂಕಾಕ್: ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನ ಹೊರವಲಯದಲ್ಲಿ ಮಂಗಳವಾರ ಮಕ್ಕಳನ್ನು ಪ್ರವಾಸ ಕರೆದೊಯ್ಯುತ್ತಿದ್ದ ಶಾಲಾ ಬಸ್‌ಗೆ ಬೆಂಕಿ ತಗುಲಿದ್ದು ವಿದ್ಯಾರ್ಥಿಗಳು, ಶಿಕ್ಷಕರು ಸೇರಿ 23 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್‌ನಲ್ಲಿ ಆರು ಶಿಕ್ಷಕರು ಸೇರಿ 44 ಪ್ರಯಾಣಿಕರಿದ್ದರು. ಉಥಾಯಿ ಠಾನಿ ಪ್ರಾಂತ್ಯದ ಶಾಲೆಯೊಂದರಿಂದ ಹೊರಟಿದ್ದರು.
ಸಚಿವ ಅನುಟಿನ್ ಚರ್ನ್‌ವಿರಾಕುಲ್, ‘ಬಸ್‌ನಿಂದ 21 ಜನರು ಪಾರಾಗಿದ್ದಾರೆ. ಬಸ್‌ನ ಸುತ್ತಲೂ ದಟ್ಟಣೆಯ ಹೊಗೆ ಆವರಿಸಿತ್ತು. ಇದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಯಿತು. ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು’ ಎಂದು ತಿಳಿಸಿದರು.
ಸುಟ್ಟ ಸ್ಥಿತಿಯಲ್ಲಿದ್ದ ಪುಟ್ಟಮಕ್ಕಳ ದೇಹ ಸೇರಿ ಹಲವರ ದೇಹಗಳನ್ನು ಹೊರತೆಗೆಯಲಾಗಿದೆ. ಟಯರ್ ಸ್ಫೋಟಗೊಂಡಿದ್ದ ಅವಗಢಕ್ಕೆ ಕಾರಣ ಎನ್ನಲಾಗಿದೆ. ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು ಹಾಗೂ ದಟ್ಟ ಹೊಗೆ ಆವರಿಸಿದ್ದ ವಿಡಿಯೊ ಜಾಲತಾಣದಲ್ಲಿ ಹಂಚಿಕೆಯಾಗಿದೆ.
‘ಶೋಧ ನಡೆದಿದೆ. ಸಾವಿನ ಒಟ್ಟು ಸಂಖ್ಯೆ ಖಚಿತವಾಗಿಲ್ಲ. ಬಸ್ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಕಾರ್ಯ ಮುಂದುವರಿದಿದೆ’ ಎಂದು ಸಚಿವರು ಹೇಳಿದರು.