ಲಖನೌ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಪೂರ್ವಜರು ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯಲ್ಲಿ ಹೊಂದಿದ್ದ ಜಮೀನು ₹ 1.38 ಕೋಟಿಗೆ ಹರಾಜಾಗಿದೆ.
ಜಿಲ್ಲೆಯ ಕೋತನಾ ಗ್ರಾಮದ ಬಳಿ ಸುಮಾರು 13 ‘ಬಿಗಾಸ್’ (ಎಂಟು ಎಕರೆಗೂ ಹೆಚ್ಚು) ಜಮೀನು ಗುರುವಾರ ಆನ್‌ಲೈನ್‌ನಲ್ಲಿ ಹರಾಜು ಆಗಿದೆ ಎಂದು ಬಾಗಪತ್‌ನ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
'ಶತ್ರುಗಳ ಆಸ್ತಿ' ಎಂದು ನೋಂದಾಯಿಸಲಾಗಿದ್ದ ಭೂಮಿಯ ಮೂಲ ಬೆಲೆಯನ್ನು ₹ 39 ಲಕ್ಷಕ್ಕಿಂತ ಸ್ವಲ್ಪ ಹೆಚ್ಚಿಗೆ ನಿಗದಿಪಡಿಸಲಾಗಿತ್ತು. ಆದರೆ, ಅದು ₹ 1.38 ಕೋಟಿಗೆ ಹರಾಜು ಆಗಿದ್ದು, ಮೂವರು ವ್ಯಕ್ತಿಗಳು ಖರೀದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಜಮೀನಿನ ಮಾಲೀಕರಲ್ಲಿ ಡಾ. ಜಾವೇದ್ ಮುಷರಫ್, ಪರ್ವೇಜ್ ಮುಷರಫ್ ಅವರ ಸಹೋದರ ಮತ್ತು ಮುಷರಫ್ ಕುಟುಂಬದ ಇತರ ಕೆಲವು ಸದಸ್ಯರು ಸೇರಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಷರಫ್ ಅವರ ತಂದೆ ಸೈಯದ್ ಮುಷರಫುದ್ದೀನ್ ಮತ್ತು ತಾಯಿ ಜರೀನಾ ಅವರು 1943ರಲ್ಲಿ ದೆಹಲಿಗೆ ವಲಸೆ ಹೋಗುವ ಮೊದಲು ಕೋತನಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪರ್ವೇಜ್ ಮುಷರಫ್ ದೆಹಲಿಯಲ್ಲಿ ಜನಿಸಿದವರು. 1947ರಲ್ಲಿ ದೇಶ ವಿಭಜನೆಯ ನಂತರ ಈ ಕುಟುಂಬವು ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡಿತು ಎಂದು ಅಧಿಕಾರಿ ಹೇಳಿದ್ದಾರೆ.