ಕಠ್ಮಂಡು: ನೇಪಾಳದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನೇಪಾಳ ಸರ್ಕಾರವು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.
ಬುಧವಾರ ಮತ್ತು ಗುರುವಾರ ಕೋಸಿ ಮತ್ತು ಬಾಗ್ಮತಿ ಪ್ರಾಂತ್ಯಗಳು ಹಾಗೂ ಕಠ್ಮಂಡು ಕಣಿವೆಯಲ್ಲಿ ಭಾರಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅಧಿಕಾರಿಗಳು ಮತ್ತು ವಿಪತ್ತು ನಿರ್ವಹಣಾ ಸಂಸ್ಥೆಗಳು ಹೆಚ್ಚು ಎಚ್ಚರಿಕೆ ವಹಿಸುವಂತೆ ಗೃಹ ಸಚಿವ ರಮೇಶ್ ಲೇಖಕ ಹೇಳಿದ್ದಾರೆ.
ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆಗಳ ಪರಿಸ್ಥಿತಿಗಳನ್ನು ಗಮನಿಸಿದ ಗೃಹ ಸಚಿವರು, ‘ಪ್ರಯಾಣಿಕರು ಸಂಚರಿಸುವಾಗ ಎಚ್ಚರಿಕೆ ವಹಿಸಬೇಕು’ ಎಂದಿದ್ದಾರೆ.
‘ಪ್ರವಾಹ ಪೀಡಿತ ಪ್ರದೇಶಗಳಿಂದ ಇದುವರೆಗೆ 13,071 ಜನರನ್ನು ರಕ್ಷಿಸಲಾಗಿದೆ’ ಎಂದು ಗೃಹ ಸಚಿವಾಲಯದ ವಕ್ತಾರ ರಿಷಿರಾಮ್ ತಿವಾರಿ ತಿಳಿಸಿದ್ದಾರೆ.
ಮಳೆಯಿಂದ ಉಂಟಾಗುವ ಸಮಸ್ಯೆಗಳನ್ನು ನಿಯಂತ್ರಿಸಲು ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರು ಸೇರಿದಂತೆ 20,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.