ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೀನ್‌ಗೆ ಅಧಿಕೃತ ಮಾನ್ಯತೆ ನೀಡಲು ನಾರ್ವೆ, ಸ್ಪೇನ್, ಐರ್ಲೆಂಡ್ ತೀರ್ಮಾನ

ನಾರ್ವೆ ಮತ್ತು ಐರ್ಲೆಂಡ್‌ನಲ್ಲಿ ಇರುವ ತನ್ನ ರಾಯಭಾರಿಗಳು ವಾಪಸಾಗಬೇಕು ಎಂದು ಇಸ್ರೇಲ್ ಸೂಚಿಸಿದೆ.
Published 22 ಮೇ 2024, 12:46 IST
Last Updated 22 ಮೇ 2024, 12:46 IST
ಅಕ್ಷರ ಗಾತ್ರ

ಟೆಲ್ ಅವೀವ್: ಪ್ಯಾಲೆಸ್ಟೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡುವುದಾಗಿ ನಾರ್ವೆ, ಸ್ಪೇನ್ ಮತ್ತು ಐರ್ಲೆಂಡ್‌ ಹೇಳಿವೆ. ಈ ಐತಿಹಾಸಿಕ ಘೋಷಣೆಯನ್ನು ಪ್ಯಾಲೆಸ್ಟೀನಿನ ಜನ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಆದರೆ, ಈ ಘೋಷಣೆಯನ್ನು ಇಸ್ರೇಲ್ ಖಂಡಿಸಿದೆ. ನಾರ್ವೆ ಮತ್ತು ಐರ್ಲೆಂಡ್‌ನಲ್ಲಿ ಇರುವ ತನ್ನ ರಾಯಭಾರಿಗಳು ವಾಪಸಾಗಬೇಕು ಎಂದು ಇಸ್ರೇಲ್ ಸೂಚಿಸಿದೆ.

ಪ್ಯಾಲೆಸ್ಟೀನ್ ರಾಷ್ಟ್ರಕ್ಕೆ ಅಧಿಕೃತ ಮಾನ್ಯತೆಯನ್ನು ಮೇ 28ರಂದು ನೀಡಲಾಗುತ್ತದೆ. ಈ ನಡುವೆ ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇತಾಮರ್ ಬೆನ್–ಗ್ವಿರ್ ಅವರು ಜೆರುಸಲೇಂನಲ್ಲಿ ಅಲ್–ಅಕ್ಸಾ ಮಸೀದಿ ಪ್ರದೇಶಕ್ಕೆ ಪ್ರಚೋದನಕಾರಿ ಭೇಟಿ ನೀಡಿದ್ದಾರೆ. ಈ ಸ್ಥಳವು ಟೆಂಪಲ್ ಮೌಂಟ್ ಎಂದು ಯಹೂದಿಯರು ನಂಬಿದ್ದಾರೆ. ಈ ಭೇಟಿಯು ಈ ಪ್ರದೇಶದಲ್ಲಿ ಬಿಕ್ಕಟ್ಟನ್ನು ತೀವ್ರಗೊಳಿಸುವ ಸಾಧ್ಯತೆ ಇದೆ.

ಪ್ಯಾಲೆಸ್ಟೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡುವ ತೀರ್ಮಾನವನ್ನು ನಾರ್ವೆ ಮೊದಲು ಪ್ರಕಟಿಸಿತು. ನಾರ್ವೆ ಪ್ರಧಾನಿ ಯೂನಸ್ ಗಾರ್ ಸ್ತೋರ ಅವರು, ‘ಮಾನ್ಯತೆ ಇಲ್ಲವಾದರೆ ಮಧ್ಯಪ್ರಾಚ್ಯದಲ್ಲಿ ಶಾಂತಿ ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಪ್ಯಾಲೆಸ್ಟೀನ್ ರಾಷ್ಟ್ರವನ್ನು ಮಾನ್ಯ ಮಾಡುವ ಮೂಲಕ ನಾರ್ವೆ, ಅರಬ್ ಶಾಂತಿ ಯೋಜನೆಯನ್ನು ಬೆಂಬಲಿಸುತ್ತಿದೆ ಎಂದು ಹೇಳಿದ್ದಾರೆ.

ದೀರ್ಘಾವಧಿಗೆ ಶಾಂತಿ ನೆಲೆಸಬೇಕು ಎಂದಾದರೆ ದ್ವಿರಾಷ್ಟ್ರ ಸೂತ್ರದ ಪಾಲನೆ ಅಗತ್ಯ ಹಾಗೂ ಪ್ಯಾಲೆಸ್ಟೀನ್‌ ರಾಷ್ಟ್ರಕ್ಕೆ ಮಾನ್ಯತೆ ನೀಡುವ ಯೋಚನೆ ತಮಗೆ ಇದೆ ಎಂಬ ಮಾತನ್ನು ಐರೋಪ್ಯ ಒಕ್ಕೂಟದ ಹಲವು ದೇಶಗಳು ಈಚೆಗೆ ಹೇಳಿವೆ. ಈಗಿನ ತೀರ್ಮಾನವು ಇಸ್ರೇಲ್‌ ಅನ್ನು ಇನ್ನಷ್ಟು ಏಕಾಂಗಿಯಾಗಿಸಬಹುದು, ಯುರೋಪಿನ ಇನ್ನಷ್ಟು ದೇಶಗಳು ಪ್ಯಾಲೆಸ್ಟೀನ್‌ಗೆ ಮಾನ್ಯತೆ ನೀಡುವುದಕ್ಕೆ ಇಂಬು ಕೊಡಬಹುದು.

‘ಈ ಕ್ರಮವು ಗತಕಾಲವನ್ನು, ಪ್ಯಾಲೆಸ್ಟೀನ್‌ನಲ್ಲಿ ಮೃತಪಟ್ಟವರ ಜೀವವನ್ನು ಮರಳಿ ತರುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಆದರೆ ಇದು ಪ್ಯಾಲೆಸ್ಟೀನ್ ನಾಗರಿಕರ ವರ್ತಮಾನ ಮತ್ತು ಭವಿಷ್ಯಕ್ಕೆ ಬಹುಮುಖ್ಯವಾಗಿರುವ ಘನತೆ ಹಾಗೂ ಭರವಸೆಯನ್ನು ತರುತ್ತದೆ’ ಎಂದು ಸ್ಪೇನ್ ಪ‍್ರಧಾನಿ ಪೆಡ್ರೊ ಸ್ಯಾಂಚೆಸ್ ಹೇಳಿದ್ದಾರೆ.

ಪ್ಯಾಲೆಸ್ಟೀನ್ ರಾಷ್ಟ್ರಕ್ಕೆ ಅಂದಾಜು 140 ದೇಶಗಳು ಈಗಾಗಲೇ ಮಾನ್ಯತೆ ನೀಡಿವೆ. ಈಗ ನಾರ್ವೆ, ಸ್ಪೇನ್ ಮತ್ತು ಐರ್ಲೆಂಡ್ ತೆಗೆದುಕೊಂಡಿರುವ ನಿರ್ಧಾರವು ಫ್ರಾನ್ಸ್ ಮತ್ತು ಜರ್ಮನಿಯ ಮೇಲೆ ತಮ್ಮ ನಿಲುವು ಮರುಪರಿಶೀಲಿಸಬೇಕಾದ ಒತ್ತಡವನ್ನು ಹೆಚ್ಚುಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT