ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ: ಇರಾನ್‌ಗೆ ಪಾಕಿಸ್ತಾನ ಎಚ್ಚರಿಕೆ

Published 17 ಜನವರಿ 2024, 5:56 IST
Last Updated 17 ಜನವರಿ 2024, 5:56 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಬಲೂಚಿಸ್ತಾನ್‌ ಪ್ರಾಂತ್ಯದ ಭಯೋತ್ಪಾದಕ ನೆಲೆಗಳ ಮೇಲೆ ಇರಾನ್‌ ನಡೆಸಿರುವ ಕ್ಷಿಪಣಿ ಮತ್ತು ಡ್ರೋನ್‌ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪಾಕಿಸ್ತಾನ, ಇದಕ್ಕೆ ಗಂಭೀರ ಪರಿಣಾಮಗಳನ್ನು ಎದರಿಸಬೇಕಾಗುತ್ತದೆ ಎಂದು ಬುಧವಾರ ಎಚ್ಚರಿಸಿದೆ.

ಇರಾಕ್‌ ಮತ್ತು ಸಿರಿಯಾ ಮೇಲೆ ಕ್ಷಿಪಣಿ ದಾಳಿ ನಡೆಸಿದ ಮಾರನೇ ದಿನ, ಪಾಕ್‌ನ ಬಲೂಚಿಸ್ತಾನದಲ್ಲಿ ನೆಲೆಸಿರುವ ಜೈಶ್‌ ಅಲ್‌ ಅದ್ಲ್‌ ಉಗ್ರಗಾಮಿ ಗುಂಪಿಗೆ ಸೇರಿದ ಎರಡು ನೆಲೆಗಳ ಮೇಲೆ ಇರಾನ್‌ ಪಡೆ ದಾಳಿ ನಡಸಿತ್ತು. ಈ ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.

ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪಾಕಿಸ್ತಾನವು ಇರಾನಿನ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ದಾಖಲಿಸಿದೆ.

ಕ್ಷಿಪಣಿ ದಾಳಿ ಖಂಡಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ, ‘ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ವಾಯುನೆಲೆ ನಿಯಮಗಳನ್ನು ಇರಾನ್‌ ಉಲ್ಲಂಘಿಸಿದೆ. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಯಾವುದೇ ವಿಚಾರವನ್ನು ಪಾಕಿಸ್ತಾನ ಸಹಿಸುವುದಿಲ್ಲ. ಇಂತಹ ಕೃತ್ಯಗಳನ್ನು ಒಪ್ಪಲಾಗುವುದಿಲ್ಲ. ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು’ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ. 

ಜೈಶ್‌ ಅಲ್‌–ಅದ್ಲ್‌ ಭಯೋತ್ಪಾದಕ ಗುಂಪಿನ ಎರಡು ಪ್ರಮುಖ ಭದ್ರಕೋಟೆಗಳನ್ನು ನಿರ್ದಿಷ್ಟವಾಗಿ ಗುರಿಯಾಗಿಸಿ ದಾಳಿ ನಡೆಸಿ, ಅವುಗಳನ್ನು ನಾಶಗೊಳಿಸಲಾಗಿದೆ ಎಂದು ಇರಾನ್‌ನ ತಸ್ನಿಮ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗುರಿಯಾಗಿಸಿದ ಈ ಪ್ರದೇಶವನ್ನು ‘ಗ್ರೀನ್‌ ಮೌಂಟೇನ್‌’ ಎಂದು ಕರೆಯಲಾಗುತ್ತದೆ ಎಂದೂ ಅದು ಹೇಳಿದೆ.

ಈ ಉಗ್ರ ಸಂಘಟನೆಯು ಈ ಹಿಂದೆ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಇರಾನ್‌ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ಇರಾನ್‌ ದಾಳಿಯನ್ನು ಪಾಕಿಸ್ತಾನ ನದ ವಿವಿಧ ರಾಜಕೀಯ ಪಕ್ಷಗಳು ಖಂಡಿಸಿವೆ. ‘ಭಾರತ, ಅಫ್ಘಾನಿಸ್ತಾನದ ಬಳಿಕ ಇರಾನ್‌ ಜೊತೆಗೆ ನಮ್ಮ ಸಂಬಂಧಗಳು ಗಂಭೀರವಾಗಿ ಕ್ಷೀಣಿಸಿರುವುದು ಕಳವಳ ಮೂಡಿಸಿದೆ. ಇದು ನಮ್ಮ ವಿದೇಶಾಂಗ ನೀತಿ ಮತ್ತು ರಕ್ಷಣಾ ನೀತಿಗಳ ವಿಫಲತೆಯ ಬಗ್ಗೆ ತಿಳಿಸುತ್ತದೆ’ ಎಂದು ಪಾಕಿಸ್ತಾನದ ಪ್ರಮುಖ ವಿರೋಧ ಪಕ್ಷ ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್‌ (ಪಿಟಿಐ) ದೂರಿದೆ. 

ಪರಸ್ಪರ ಶಾಂತಿ ಕಾಯ್ದುಕೊಳ್ಳಲು ಚೀನಾ ಕರೆ (ಬೀಜಿಂಗ್‌ ವರದಿ): ಸಂದಿಗ್ಧ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಮತ್ತು ಇರಾನ್‌ ರಾಷ್ಟ್ರಗಳು ಪರಸ್ಪರ ಶಾಂತಿ ಕಾಯ್ದುಕೊಳ್ಳಬೇಕು ಎಂದು ಚೀನಾ ಕರೆ ನೀಡಿದೆ.

‘ಇರಾನ್‌ ಮತ್ತು ಪಾಕಿಸ್ತಾನ ಎರಡೂ ನೆರೆಹೊರೆ ದೇಶಗಳಾಗಿದ್ದು, ಪ್ರಮುಖ ಇಸ್ಲಾಮಿಕ್‌ ರಾಷ್ಟ್ರಗಳಾಗಿವೆ. ಯುಎನ್‌ ಚಾರ್ಟರ್‌ ಮತ್ತು ಅಂತರರಾಷ್ಟ್ರೀಯ ಕಾನೂನಿನ ಉದ್ದೇಶಗಳು ಮತ್ತು ತತ್ವಗಳಿಗೆ ಬದ್ಧವಾಗಿ ಎರಡೂ ದೇಶಗಳು ಸಂಬಂಧಗಳನ್ನು ನಿರ್ವಹಿಸಬೇಕು. ಎಲ್ಲ ದೇಶಗಳ ಸಾರ್ವಭೌಮತ್ವ, ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು ಎಂಬುದನ್ನು ಚೀನಾ ನಂಬುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೊ ನಿಂಗ್ ಪ್ರತಿಕ್ರಿಯಿಸಿದ್ದಾರೆ. 

ರಾಯಭಾರಿ ವಾಪಸ್ ಕರೆಸಿದ ಪಾಕ್‌

ಇರಾನ್‌ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪಾಕಿಸ್ತಾನ, ಇರಾನ್‌ನಿಂದ ತನ್ನ ರಾಯಭಾರಿಯನ್ನು ವಾಪಸ್‌ ಕರೆಸಿಕೊಂಡಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ನಿಗದಿಯಾಗಿದ್ದ ಎಲ್ಲಾ ಉನ್ನತ ಮಟ್ಟದ ದ್ವಿಪಕ್ಷೀಯ ಭೇಟಿಗಳನ್ನು ಸ್ಥಗಿತಗೊಳಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಪಾಕ್‌ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮುಮ್ತಾಜ್‌ ಜಹ್ರಾ ಬಲೂಚ್‌ ಅವರು, ಇರಾನ್‌ನ ಅಪ್ರಚೋದಿತ ದಾಳಿಯು ಪಾಕ್‌ನ ಸಾರ್ವಭೌಮತ್ವ, ಅಂತರರಾಷ್ಟ್ರೀಯ ಕಾನೂನುಗಳು, ವಿಶ್ವಸಂಸ್ಥೆಯ ಚಾರ್ಟರ್‌ನ ಉದ್ದೇಶಗಳು ಮತ್ತು ತತ್ವಗಳ ಉಲ್ಲಂಘನೆಯಾಗಿದೆ ಎಂದಿದ್ದಾರೆ. 

ಪಾಕಿಸ್ತಾನದಲ್ಲಿರುವ ಇರಾನ್‌ನ ರಾಯಭಾರಿ ತಮ್ಮ ದೇಶಕ್ಕೆ ತೆರಳುತ್ತಿದ್ದು, ಅವರೂ ಸದ್ಯಕ್ಕೆ ಹಿಂತಿರುಗುವ ಅಗತ್ಯವಿಲ್ಲ ಎಂದು ಮುಮ್ತಾಜ್‌ ಹೇಳಿದ್ದಾರೆ.

‘ಪಾಕ್‌–ಇರಾನ್‌ಗೆ ಸಂಬಂಧಿಸಿದ ವಿಷಯ’

ನವದೆಹಲಿ: ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆ ಜೈಶ್‌ ಅಲ್‌–ಅದ್ಲ್‌ನ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿರುವುದಕ್ಕೆ ಬುಧವಾರ ಪ್ರತಿಕ್ರಿಯಿಸಿರುವ ಭಾರತ, ‘ತನ್ನ ರಕ್ಷಣೆಗಾಗಿ ರಾಷ್ಟ್ರಗಳು ಕ್ರಮ ಕೈಗೊಂಡಿರುವುದು ಅರ್ಥವಾಗುವಂಥದ್ದು’ ಎಂದು ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರಣಧೀರ ಜೈಸ್ವಾಲ್‌, ‘ಇದು ಇರಾನ್‌ ಮತ್ತು ಪಾಕಿಸ್ತಾನ ನಡುವಿನ ವಿಷಯ. ಆ ರಾಷ್ಟ್ರಗಳು ತಮ್ಮ ರಕ್ಷಣೆಗೆ ಕ್ರಮ ತೆಗೆದುಕೊಂಡಿವೆ‘ ಎಂದು ಹೇಳಿದ್ದಾರೆ.

‘ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT