ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ವಿವಾಹ: ಶಿಕ್ಷೆಗೆ ತಡೆ ಕೋರಿದ್ದ ಇಮ್ರಾನ್ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

Published 27 ಜೂನ್ 2024, 12:34 IST
Last Updated 27 ಜೂನ್ 2024, 12:34 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಅಕ್ರಮ ವಿವಾಹ ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನದ ಜಿಲ್ಲಾ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.

ಇದ್ದತ್ ಪ್ರಕರಣ ಎಂದೇ ಹೇಳಲಾದ ಇದರಲ್ಲಿ ದಂಪತಿಗೆ ಏಳು ವರ್ಷ ಜೈಲು ಹಾಗೂ 5 ಲಕ್ಷ ಪಾಕಿಸ್ತಾನದ ರೂಪಾಯಿ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಕಳೆದ ಫೆ. 3ರಂದು ಆದೇಶಿಸಿತ್ತು. ಇಸ್ಲಾಂನಲ್ಲಿ ಮರು ವಿವಾಹಕ್ಕೆ ಸಿದ್ಧವಾಗುವ ಮಹಿಳೆಯು ಪತಿಯಿಂದ ವಿಚ್ಛೇದನ ಪಡೆಯುವವರೆಗೂ ಅಥವಾ ಪತಿ ಮೃತರಾಗುವವರೆಗೂ ಕಾಯಬೇಕಾದ್ದು ಕಡ್ಡಾಯ ಎಂದು ಹೇಳಲಾಗಿದೆ. ಈ ಅಂಶವನ್ನೇ ಪ್ರಮುಖವಾಗಿಟ್ಟುಕೊಂಡ ನ್ಯಾಯಾಲಯ, ವಾದ ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿತ್ತು.

ಗುರುವಾರ ಆದೇಶ ಪ್ರಕಟಿಸುವಾಗ ನ್ಯಾಯಾಲಯದ ಆವರಣ ಕಿಕ್ಕಿರಿದು ತುಂಬಿತ್ತು. ದಂಪತಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿದರು. ರಾವಲ್‌ಪಿಂಡಿಯಲ್ಲಿರುವ ಅದಿಯಾಲ ಜೈಲಿನಲ್ಲಿರುವ ದಂಪತಿಯ ಬಿಡುಗಡೆಯ ನಿರೀಕ್ಷೆಯಲ್ಲಿದ್ದವರಿಗೆ, ಈ ಆದೇಶ ತೀವ್ರ ನಿರಾಸೆ ಮೂಡಿಸಿತು. 71 ವರ್ಷದ ಇಮ್ರಾನ್ ಖಾನ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಇವರ ಪತ್ನಿ ಬುಶ್ರಾ (49) ವಿರುದ್ಧವೂ ಹಲವು ಪ್ರಕರಣಗಳಿವೆ.

ಬುಶ್ರಾ ಅವರ ಮಾಜಿ ಪತಿ ಖಾವರ್ ಮನೇಕಾ ಅವರು ದಂಪತಿ ವಿರುದ್ಧ 2023ರ ನವೆಂಬರ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಇದ್ಧತ್‌ನ ಅವಧಿಯಲ್ಲಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆಯನ್ನು ಬೀಬಿ ಗಮನಿಸದೇ 2018ರಲ್ಲಿ ವಿವಾಹವಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಇಮ್ರಾನ್ ಖಾನ್‌ ಜೊತೆಗಿನ ವಿವಾಹವನ್ನು ಅಸಿಂಧು ಎಂದು ಘೋಷಿಸಲು ನ್ಯಾಯಾಲಯವನ್ನು ಕೋರಿದ್ದರು.

ಇಮ್ರಾನ್ ಖಾನ್ ಅವರಿಗೆ ಬೀಬಿ ಧಾರ್ಮಿಕ ಮಾರ್ಗದರ್ಶಕರಾಗಿದ್ದರು. ನಿರಂತರ ಭೇಟಿಯಲ್ಲಿ ಈ ಜೋಡಿ ನಡುವೆ ಪ್ರಾಮಾಂಕುರವಾಗಿತ್ತು. ನಂತರ ಬೀಬಿ ಅವರು ತಮ್ಮ ಮಾಜಿ ಪತಿಯೊಂದಿಗಿನ 28 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಬೀಬಿ ಅವರಿಗೆ ಮೊದಲ ವಿವಾಹದಲ್ಲಿ ಐವರು ಮಕ್ಕಳಿದ್ದಾರೆ. ಇಮ್ರಾನ್ ಖಾನ್ ಅವರಿಗೆ ಬೀಬಿ ಮೂರನೇ ಪತ್ನಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT