ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್ ಆರೋಗ್ಯ ಸ್ಥಿತಿ ಗಂಭೀರ; ಯುಎಇಯಲ್ಲಿ ಚಿಕಿತ್ಸೆ

Last Updated 10 ಜೂನ್ 2022, 13:15 IST
ಅಕ್ಷರ ಗಾತ್ರ

ಲಾಹೋರ್‌/ ದುಬೈ: ಪಾಕಿಸ್ತಾನದ ಮಾಜಿ ಅಧ್ಯಕ್ಷ, ನಿವೃತ್ತ ಮಿಲಿಟರಿ ಜನರಲ್‌ ಪರ್ವೇಜ್‌ ಮುಷರಫ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಯುಎಇಯ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್‌ ವ್ಯವಸ್ಥೆಯಡಿ ಚಿಕಿತ್ಸೆ ನಡೆದಿದೆ. ಈ ಬಗ್ಗೆ ಮಾಜಿ ಸಚಿವ ಫವಾದ್‌ ಚೌಧರಿ ಶುಕ್ರವಾರ ಮಾಹಿತಿ ನೀಡಿದ್ದಾರೆ.

ಜನರಲ್‌ ಪರ್ವೇಜ್‌ ಮುಷರಫ್‌ (78) ಅವರು 1999ರಿಂದ 2008ರ ವರೆಗೂ ಪಾಕಿಸ್ತಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದರು.

ಮುಷರಫ್‌ ಕುಟುಂಬದವರು ಟ್ವಿಟರ್‌ ಮೂಲಕ ಮಾಹಿತಿ ನೀಡಿದ್ದು, ಮುಷರಫ್‌ ಅವರು ವೆಂಟಿಲೇಟರ್‌ ವ್ಯವಸ್ಥೆಯಡಿ ಇಲ್ಲ ಎಂದಿದ್ದಾರೆ.

'ಅವರು ಕಳೆದ 3 ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಅಮೈಲಾಯ್ಡೊಸಿಸ್‌ (ಅತಿಯಾದ ಪ್ರೊಟೀನ್‌ ಉತ್ಪಾದನೆಯಾಗಿ ದೇಹದ ಹಲವು ಅಂಗಗಳಲ್ಲಿ ಸೇರುವುದು) ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ಅವರು ತಲುಪಿದ್ದಾರೆ ಹಾಗೂ ಅಂಗಾಂಗಳು ಸರಿಯಾಗಿ ಕಾರ್ಯಾಚರಿಸುತ್ತಿಲ್ಲ....' ಎಂದು ಪ್ರಕಟಿಸಲಾಗಿದೆ.

'ಮುಷರಫ್‌ ಅವರ ಮಗ ಬಿಲಾಲ್‌ ಜೊತೆಗೆ ದುಬೈನಲ್ಲಿ ಮಾತನಾಡಿದ್ದೇನೆ. ಮುಷರಫ್‌ ಅವರಿಗೆ ವೆಂಟಿಲೇಟರ್‌ ವ್ಯವಸ್ಥೆಯಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ' ಎಂದು ಚೌಧರಿ ಹೇಳಿದ್ದಾರೆ. ಇಮ್ರಾನ್‌ ಖಾನ್‌ ಸರ್ಕಾರದಲ್ಲಿ ಮಾಹಿತಿ ಸಚಿವರಾಗಿದ್ದ ಚೌಧರಿ ಅವರು ಮುಷರಫ್‌ ಅವರಿಗೆ ಮಾಧ್ಯಮ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು.

ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಆಲ್‌ ಪಾಕಿಸ್ತಾನ್ ಮುಸ್ಲಿಂ ಲೀಗ್‌ನ ಅಧ್ಯಕ್ಷ ಇಫ್ಜಾಲ್‌ ಸಿದ್ದಿಖಿ, 'ಜನರಲ್‌ ಪರ್ವೇಜ್ ಮುಷರಫ್‌ ಅವರು ಮನೆಯಲ್ಲೇ ಇದ್ದಾರೆ. ಅವರಿಗೆ ಸ್ವಲ್ಪ ಅನಾರೋಗ್ಯ ಕಾಡಿದೆ. ಸುಳ್ಳು ಸುದ್ದಿಗಳ ಕಡೆಗೆ ಗಮನ ಕೊಡಬೇಡಿ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ' ಎಂದಿದ್ದಾರೆ.

ಇದನ್ನೂ ಓದಿ–

ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಿಜಿರ್‌ ಭುಟ್ಟೊ ಅವರ ಹತ್ಯೆ ಪ್ರಕರಣದಲ್ಲಿ ಮುಷರಫ್‌ ತಲೆಮರೆಸಿಕೊಂಡಿದ್ದರು. ದೇಶದ್ರೋಹ ಪ್ರಕರಣವನ್ನು ಎದುರಿಸುತ್ತಿರುವ ಅವರು 2016ರಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ.

2007ರಲ್ಲಿ ಸಂವಿಧಾನವನ್ನು ತೆಗೆದು ಹಾಕುವ ಮೂಲಕ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದರು. ಆ ವಿಚಾರದಲ್ಲಿ ಅವರು ರಾಷ್ಟ್ರದ್ರೋಹ ಪ್ರಕರಣ ಎದುರಿಸುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸೆಯ ಕಾರಣಗಳಿಂದ ಮಾರ್ಚ್‌ 2016ರಲ್ಲಿ ದುಬೈಗೆ ತೆರಳಿರುವ ಮುಷರಫ್‌ ಮತ್ತೆ ಪಾಕಿಸ್ತಾನಕ್ಕೆ ಹಿಂದಿರುಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT