ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಿಯಾಗಿ 3ನೇ ಇನ್ನಿಂಗ್ಸ್‌ ಆರಂಭಿಸಿದ ಮೋದಿ: ಪಾಕ್ ಪ್ರಧಾನಿ ಶೆಹಬಾಜ್ ಶುಭಾಶಯ

Published 10 ಜೂನ್ 2024, 11:05 IST
Last Updated 10 ಜೂನ್ 2024, 11:05 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ತಮ್ಮ ಸತತ ಮೂರನೇ ಇನ್ನಿಂಗ್ಸ್‌ ಅನ್ನು ಆರಂಭಿಸಿದ್ದಾರೆ. ಇದೇ ವೇಳೆ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಶುಭಾಶಯಗಳನ್ನು ಕೋರಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನೆರೆಯ ರಾಷ್ಟ್ರ ಪಾಕಿಸ್ತಾನವನ್ನು ಹೊರತುಪಡಿಸಿ ಬಾಂಗ್ಲಾದೇಶ, ನೇಪಾಳ, ಭೂತಾನ್, ಶ್ರೀಲಂಕಾ, ಮಾಲ್ದೀವ್ಸ್‌ನ ನಾಯಕರಿಗೆ ಆಹ್ವಾನ ನೀಡಲಾಗಿತ್ತು.

ಸಮಾರಂಭಕ್ಕೆ ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು, ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’, ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜಗನ್ನಾಥ್, ಭೂತಾನ್ ಪ್ರಧಾನಿ ಶೆರಿಂಗ್ ತೊಬ್ಗೆ, ಬಾಂಗ್ಲಾದೇಶದ ಅಧ್ಯಕ್ಷೆ ಶೇಖ್ ಹಸೀನಾ, ಸೆಷೆಲ್ಸ್ ಉಪಾಧ್ಯಕ್ಷ ಅಹಮದ್ ಆಫಿಫ್ ಅವರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ಬಗ್ಗೆ ಈಚೆಗೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ, ಮಾತುಕತೆಯ ಮೂಲಕ ವಿವಾದ ಬಗೆಹರಿಸುವುದರೊಂದಿಗೆ ಭಾರತದೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ಬಯಸುತ್ತಿರುವುದಾಗಿ ಹೇಳಿಕೊಂಡಿತ್ತು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಕಚೇರಿಯ ವಕ್ತಾರರಾದ ಮುಮ್ತಾಜ್‌ ಜಹ್ರಾ ಬಲೋಚ್, 'ಭಾರತದಿಂದ ಎದುರಾಗುವ ತೊಂದರೆಗಳ ಹೊರತಾಗಿಯೂ ಪಾಕಿಸ್ತಾನವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ಹೇಳಿದ್ದರು.

'ಭಾರತ ಸೇರಿದಂತೆ ತನ್ನ ಎಲ್ಲ ನೆರೆಹೊರೆಯ ರಾಷ್ಟ್ರಗಳೊಂದಿಗೆ ಪಾಕಿಸ್ತಾನ ಯಾವತ್ತೂ ಉತ್ತಮ ಬಾಂಧವ್ಯವನ್ನು ಬಯಸುತ್ತಿದೆ. ಜಮ್ಮು ಮತ್ತು ಕಾಶ್ಮೀರ ಬಿಕ್ಕಟ್ಟು ಸೇರಿದಂತೆ ಎಲ್ಲ ಸಮಸ್ಯೆಗಳನ್ನು ರಚನಾತ್ಮಕ ಮಾತುಕತೆ ಮೂಲಕ ಇತ್ಯರ್ಥಗೊಳಿಸುವುದನ್ನು ಪ್ರತಿಪಾದಿಸಿದ್ದೇವೆ' ಎಂದು ಹೇಳಿದ್ದರು.

'ಶಾಂತಿಯುತ ಸಹಬಾಳ್ವೆಯಲ್ಲಿ ಪಾಕಿಸ್ತಾನ ನಂಬಿಕೆ ಹೊಂದಿದೆ. ಈ ನಿಟ್ಟಿನಲ್ಲಿ ಮಾತುಕತೆ ಮೂಲಕ ವಿವಾದ ಬಗೆಹರಿಸಲು ಭಾರತ ಉತ್ತಮ ವಾತಾವರಣ ಸೃಷ್ಟಿಸುವ ನಿರೀಕ್ಷೆಯಿದೆ' ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT