ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ ವಿಮಾನ ಪತನ: ಐವರು ಭಾರತೀಯರೂ ಸೇರಿ 68 ಮಂದಿ ಸಾವು

Last Updated 15 ಜನವರಿ 2023, 21:15 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳದ ಪೊಖರಾದಲ್ಲಿ ಪ್ರಯಾಣಿಕ ವಿಮಾನವೊಂದು ಭಾನುವಾರ ಬೆಳಿಗ್ಗೆ ಪತನವಾಗಿದ್ದು, 68 ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಐವರು ಭಾರತೀಯರೂ ಸೇರಿದ್ದಾರೆ. ದೇಶದಲ್ಲಿ 30 ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ವಿಮಾನ ಅಪಘಾತ ಇದಾಗಿದೆ. ಪತನದ ವೇಳೆ ವಿಮಾನದಲ್ಲಿ 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು.

ನಾಲ್ವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ತಾಂತ್ರಿಕ ತೊಂದರೆಯಿಂದ ಅಥವಾ ಪೈಲಟ್‌ ಅಜಾಗರೂಕತೆಯಿಂದ ಈ ವಿಮಾನ ಪತನವಾಗಿರಬಹುದು ಎಂದು ಮೂಲಗಳು ಹೇಳಿವೆ. ಅವಘಡದ ಬೆನ್ನಲ್ಲೇ ದೇಶದಲ್ಲಿನ ಎಲ್ಲಾ ವಿಮಾನಗಳ ಸುರಕ್ಷತಾ ಪರಿಶೋಧನೆಗೆ ಸರ್ಕಾರವು ಆದೇಶಿಸಿದೆ.

‘ಯೇತಿ ಏರ್‌ಲೈನ್ಸ್‌ಗೆ ಸೇರಿದ ಎಟಿಆರ್–72 ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಭಾನುವಾರ ಬೆಳಿಗ್ಗೆ 10.25ಕ್ಕೆ ಹೊರಟಿತ್ತು. ಕಠ್ಮಂಡುವಿನಿಂದ 160 ಕಿ.ಮೀ. ದೂರದಲ್ಲಿರುವ ಪ್ರವಾಸಿ ನಗರ ಪೊಖರಾದಲ್ಲಿ ಬೆಳಿಗ್ಗೆ 10.40ರ ವೇಳೆಗೆ ಈ ವಿಮಾನ ಇಳಿಯಬೇಕಿತ್ತು. ಆದರೆ, ವಿಮಾನ ನಿಲ್ದಾಣದಿಂದ ಕೆಲವೇ ನೂರು ಮೀಟರ್‌ ದೂರದಲ್ಲಿದ್ದಾಗ ವಿಮಾನವು ನೆಲಕ್ಕೆ ಅಪ್ಪಳಿಸಿದೆ’ ಎಂದು ನೇಪಾಳ ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.

‘ಫೊಖರಾದ ನೂತನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಟಿಆರ್‌–72 ವಿಮಾನ ಇಳಿಯಬೇಕಿತ್ತು. ರನ್‌ವೇ ತಲುಪಲು ಕೇವಲ 12ರಿಂದ 15 ಸೆಕೆಂಡ್‌ಗಳಿರುವಾಗ ವಿಮಾನ ಪತನವಾಗಿದೆ. ನೂತನ ವಿಮಾನ ನಿಲ್ದಾಣ ಮತ್ತು ಹಳೆಯ ವಿಮಾನ ನಿಲ್ದಾಣದ ಮಧ್ಯೆ ಹರಿಯುವ ಸೇಟಿ ನದಿಯ ದಂಡೆಗೆ ವಿಮಾನ ಅಪ್ಪಳಿಸಿದೆ’ ಎಂದು ಸಚಿವಾಲಯವು ಹೇಳಿದೆ.

‘ಪತನದ ನಂತರ ವಿಮಾನ ಎರಡು ತುಂಡಾಗಿದೆ. ಒಂದು ತುಂಡು ನದಿ ದಂಡೆಯಲ್ಲೇ ಇದೆ. ಅಲ್ಲಿಂದ 32 ಶವಗಳನ್ನು ಪತ್ತೆ ಮಾಡಲಾಗಿದೆ. ವಿಮಾನದ ಇನ್ನೊಂದು ತುಂಡು ನದಿಯ ಕಮರಿಗೆ ಬಿದ್ದಿದೆ. ಕಮರಿಯು 300 ಅಡಿಗಳಷ್ಟು ಆಳವಿದ್ದು ಕಡಿದಾದ ಮತ್ತು ಮೊನಚಾದ ಬಂಡೆಗಳಿಂದ ಕೂಡಿದೆ. ಹೀಗಾಗಿ ಕಮರಿಗೆ ಇಳಿದು ಶೋಧಕಾರ್ಯ ನಡೆಸಲು ಭಾನುವಾರ ಸಾಧ್ಯವಾಗಿಲ್ಲ. ಕತ್ತಲಾದ ಕಾರಣ ಭಾನುವಾರ ಸಂಜೆಯ ವೇಳೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಸೋಮವಾರ ಬೆಳಿಗ್ಗೆ ಕಾರ್ಯಾಚರಣೆ ಮತ್ತೆ ಆರಂಭಿಸಲಾಗುತ್ತದೆ’ ಎಂದು ರಕ್ಷಣಾ ಪಡೆಯು ಮಾಹಿತಿ ನೀಡಿದೆ.

ವಿಮಾನ ಪತನದ ನಂತರ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಇದರ ಮಧ್ಯೆಯೂ ಕೆಲವರನ್ನು ಹೊರಗೆ ಎಳೆದುಹಾಕಿದೆವು. ಕಡಿದಾಗಿದ್ದ ಕಾರಣ ಆಳದ ಕಮರಿಗೆ ಇಳಿದು, ಇತರರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ರಕ್ಷಣಾ ಕಾರ್ಯಾಚರಣೆ
ಯಲ್ಲಿ ತೊಡಗಿದ್ದ ಸ್ಥಳೀಯರು ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

‘75 ಮೀಟರ್‌ನಷ್ಟು ಎತ್ತರದಲ್ಲಿತ್ತು’: ‘ಯೂರೋಪ್‌ನ ಎಟಿಆರ್‌ ವಿಮಾನ ತಯಾರಿಕಾ ಕಂಪನಿಯ ಈ ವಿಮಾನದಲ್ಲಿ ಬಳಕೆಯಾಗಿರುವ ತಂತ್ರಜ್ಞಾನ ಹಳೆಯದು. ಪತನವಾದ ‘9ಎನ್‌ಸಿ–ಎಎನ್‌ಸಿ– ಎಟಿಆರ್‌–72’ ವಿಮಾನವು 15 ವರ್ಷಗಳಷ್ಟು ಹಳೆಯದಾಗಿತ್ತು. ಇದರಲ್ಲಿದ್ದ ಟ್ರಾನ್ಸ್‌ಪಾಂಡರ್‌ನ ನಿಖರತೆ ಅತ್ಯಂತ ಕಡಿಮೆ. ಹೀಗಾಗಿ ಪತನ ಹೇಗಾಯಿತು ಎಂಬುದನ್ನು ತಕ್ಷಣ ಹೇಳಲು ಸಾಧ್ಯವಿಲ್ಲ ಎಂದು ಫ್ಲೈಟ್‌ರೇಡಾರ್‌24 ಸಂಸ್ಥೆ ಹೇಳಿದೆ’ ಎಂದು ರಾಯಿಟರ್ಸ್‌ ವರದಿ ಮಾಡಿದೆ.

‘ವಿಮಾನವು ಪತನವಾಗುವ ಮುನ್ನ ವಿಮಾನ ನಿಲ್ದಾಣದ ರೇಡಾರ್‌ನಲ್ಲಿ ದಾಖಲಾದ ಮಾಹಿತಿ ಪ್ರಕಾರ, ಅದು ರನ್‌ವೇಯಿಂದ ಕೇವಲ 75 ಮೀಟರ್‌ಗಳಷ್ಟು ಎತ್ತರದಲ್ಲಿತ್ತು ಎಂಬುದು ಪತ್ತೆಯಾಗಿದೆ’ ಎಂದು ರಾಯಿಟರ್ಸ್ ವರದಿ ಮಾಡಿದೆ.

ವಿಮಾನದ ಪತನಕ್ಕೆ ನಿಖರ ಕಾರಣಗಳೇನು ಎಂಬುದನ್ನು ಪತ್ತೆ ಮಾಡಲು ತನಿಖೆಗೆ ಆದೇಶಿಸಲಾಗಿದೆ. ತನಿಖಾ ವರದಿ 45 ದಿನಗಳ ನಂತರ ಲಭ್ಯವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಹೇಳಿದೆ.

ಐವರು ಭಾರತೀಯರ ಸಾವು
ಅವಘಡದಲ್ಲಿ ಮೃತಪಟ್ಟವರಲ್ಲಿ ಐವರು ಭಾರತೀಯರು ಇದ್ದು, ಅವರಲ್ಲಿ ನಾಲ್ವರು ಪ್ಯಾರಾಗ್ಲೈಡಿಂಗ್‌ಗೆ ಪೊಖರಾಗೆ ಹೊರಟಿದ್ದರು ಎಂದು ಯೇತಿ ಏರ್‌ಲೈನ್ಸ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮೃತ ಭಾರತೀಯರನ್ನು ಅಭಿಷೇಕ್ ಕುಶ್ವಾಹಾ (25), ವಿಶಾಲ್‌ ಶರ್ಮಾ (22), ಅನಿಲ್ ಕುಮಾರ್ ರಾಜ್ಬರ್ (27), ಸೋನು ಜೈಸ್ವಾಲ್‌ (35) ಮತ್ತು ಸಂಜಯ್‌ ಜೈಸ್ವಾಲ್‌ ಎಂದು ಗುರುತಿಸಲಾಗಿದೆ. ಇವರಲ್ಲಿ ಮೊದಲ ನಾಲ್ವರು ಉತ್ತರ ಪ್ರದೇಶದ ಗಾಜಿಪುರದವರು. ಪತನದಲ್ಲಿ ಮೃತಪಟ್ಟ ಇತರರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಎಲ್ಲಾ ಮೃತದೇಹಗಳನ್ನು ಸಂಗ್ರಹಿಸಿದ ನಂತರ ಗುರುತು ಪತ್ತೆ ನಡೆಸಲಾಗುತ್ತದೆ ಎಂದು ನೇಪಾಳ ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಹತ್ತಾರು ಅವಘಡ: ವಿಶ್ವದ 14 ಅತ್ಯಂತ ಎತ್ತರದ ಶಿಖರಗಳಲ್ಲಿ ಎಂಟು ನೇಪಾಳದಲ್ಲೇ ಇವೆ. 1946ರಿಂದ ಈವರೆಗೆ ಇಲ್ಲಿ ಒಟ್ಟು 42 ವಿಮಾನಗಳು ಪತನವಾಗಿವೆ. 1992ರಲ್ಲಿ ಪಾಕಿಸ್ತಾನ ಏರ್‌ಲೈನ್ಸ್‌ನ ವಿಮಾನವು ಕಠ್ಮಂಡುವಿನಲ್ಲಿ ಪತನವಾಗಿ 167 ಮಂದಿ ಮೃತಪಟ್ಟಿದ್ದರು. ಆನಂತರ, ಭಾನುವಾರದ ಪತನವೇ ಅತ್ಯಂತ ದೊಡ್ಡದು ಎಂದು ಸಚಿವಾಲಯವು ಹೇಳಿದೆ.

ಭಾನುವಾರ ಪತನವಾದ ವಿಮಾನ ಕಂಪನಿ ಯೇತಿ ಏರ್‌ಲೈನ್ಸ್‌, ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ತುರ್ತು ಸಂದರ್ಭದ ಕಾರ್ಯಾಚರಣೆಗಳನ್ನು ಮಾತ್ರ ನಡೆಸಲಾಗುತ್ತದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT