ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ | ಪ್ರಧಾನಿ ರೇಸ್‌ನಿಂದ ಹಿಂದೆ ಸರಿದ ಭುಟ್ಟೊ; PML-Nಗೆ ಬಾಹ್ಯ ಬೆಂಬಲ

Published 13 ಫೆಬ್ರುವರಿ 2024, 14:30 IST
Last Updated 13 ಫೆಬ್ರುವರಿ 2024, 14:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ದಾರಿ ಅವರು ಪ್ರಧಾನಿ ರೇಸ್‌ನಿಂದ ಹಿಂದೆ ಸರಿದಿದ್ದು,  ಸರ್ಕಾರದ ಭಾಗವಾಗದೆ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್‌–ನವಾಜ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಪಿಎಂಎಲ್‌–ಎನ್‌ ಪಕ್ಷದ ಮುಖ್ಯಸ್ಥ ನವಾಜ್ ಷರೀಫ್ ಅವರು ದಾಖಲೆಯ ನಾಲ್ಕನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದು ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಘೊಷಿಸಿದ ಬೆನ್ನಲ್ಲೇ ಭುಟ್ಟೊ ಈ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಉನ್ನತ ಮಟ್ಟದ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸಭೆ ನಡೆಸಿದ ನಂತರ ಭುಟ್ಟೊ ಸುದ್ದಿಗಾರರಿಗೆ ಮಾಹಿತಿ ನೀಡಿದರು. ‘ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಪಕ್ಷವು ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಪ್ರಧಾನಿ ಹುದ್ದೆಯ ರೇಸ್‌ನಿಂದ ನಾನು ಹಿಂದೆ ಸರಿದಿದ್ದೇನೆ. ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹರೀಕ್‌ ಎ ಇನ್ಸಾಫ್‌ (ಪಿಟಿಐ) ಪಕ್ಷವು ಪಿಪಿಪಿ ಜತೆಗೂಡಿ ಸರ್ಕಾರ ರಚಿಸುವ ನಿರ್ಧಾರವನ್ನು ತಿರಸ್ಕರಿಸಿತು. ಹೀಗಾಗಿ ಪಿಎಂಎಲ್‌–ಎನ್‌ ಪಕ್ಷ ಏಕೈಕ ಆಯ್ಕೆಯಾಗಿದ್ದು, ಅದರೊಂದಿಗೆ ಸೇರಿ ಸರ್ಕಾರ ರಚಿಸಲಾಗುವುದು’ ಎಂದು ತಿಳಿಸಿದರು.

‘ಒಕ್ಕೂಟ ವ್ಯವಸ್ಥೆಯ ಸರ್ಕಾರದ ಭಾಗವಾಗಬಾರದು ಎಂಬ ನಿರ್ಧಾರವನ್ನು ಕೈಗೊಂಡಿದ್ದೇವೆ. ಜತೆಗೆ ಯಾವುದೇ ಸಚಿವ ಸ್ಥಾನ ಪಡೆಯಲೂ ನಮಗೆ ಇಚ್ಛೆ ಇಲ್ಲ. ದೇಶದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಯಾಗುವುದೂ ನಮಗೆ ಇಷ್ಟವಿಲ್ಲ. ದೇಶದಲ್ಲಿ ತಲೆದೋರಿರುವ ಬಿಕ್ಕಟ್ಟು ಮುಂದುವರಿಸಲೂ ನಮಗೆ ಇಷ್ಟವಿಲ್ಲ’ ಎಂದಿದ್ದಾರೆ.

‘ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಆಶ್ವಾಸನೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ, ರಾಜಕೀಯ ಸ್ಥಿರತೆ ಮರುಸ್ಥಾಪಿಸುವ ಭರವಸೆ ನೀಡಿದ್ದೆವು. ಅದಕ್ಕೆ ನಾವು ಬದ್ಧ. ಹೀಗಾಗಿ ಸರ್ಕಾರದ ಭಾಗವಾಗದೆ ದೇಶದಲ್ಲಿ ಸ್ಥಿರ ಆಡಳಿತಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಭುಟ್ಟೊ ಹೇಳಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬಿಲಾವಲ್, ‘ತಂದೆಯವರಾದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಅಧ್ಯಕ್ಷ ಸ್ಥಾನ ಅಭ್ಯರ್ಥಿಯಾಗಬಯಸಿದ್ದಾರೆ. ದೇಶದ ಸದ್ಯದ ಪರಿಸ್ಥಿತಿಯಿಂದ ಹೊರಬರುವಂತೆ ಮಾಡಲು ಅವರು ಸಮರ್ಥರಿದ್ದಾರೆ’ ಎಂದಿದ್ದಾರೆ.

‘ಪಿಎಂಎಲ್‌–ಎನ್‌ ಜತೆಗಿನ ಈ ಹಿಂದಿನ ಮೈತ್ರಿಯ ಅನುಭವ ಉತ್ತಮವಾಗಿರಲಿಲ್ಲ. ಹಿಂದಿನ ಮೈತ್ರಿ ಸರ್ಕಾರದಲ್ಲಿ ನಮ್ಮ ಪಕ್ಷದಿಂದ ಸಚಿವರಾದವರ ಬೇಡಿಕೆಗಳನ್ನು ಅವರು ಈಡೇರಿಸಿರಲಿಲ್ಲ ಎಂಬ ಮಾತುಗಳನ್ನು ಪಕ್ಷದ ಸದಸ್ಯರು ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

‘ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ ಮರು ಚುನಾವಣೆಯ ಮಾತು ಇಲ್ಲವೇ ಇಲ್ಲ. ಜನಾದೇಶ ವಿಫಲವಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಫೆ. 8ರಂದು ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಬೆಂಬಲಿತ 101 ಸ್ವತಂತ್ರ ಅಭ್ಯರ್ಥಿಗಳು ರಾಷ್ಟ್ರೀಯ ಸಂಸತ್‌ಗೆ ಆಯ್ಕೆಯಾಗಿದ್ದಾರೆ. ಮೂರು ಬಾರಿ ಪ್ರಧಾನಿಯಾದ ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್–ನವಾಜ್‌ ಪಕ್ಷವು 75 ಸೀಟುಗಳನ್ನು, ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯು 54 ಸೀಟುಗಳನ್ನು ಗೆದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT