ನವದೆಹಲಿ: ಇಂದು ಬೆಳಿಗ್ಗೆ ಟಿಮೋರ್ ಲೆಸ್ಟ್‌ಗೆ ಬಂದಿಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅಲ್ಲಿನ ಅಧ್ಯಕ್ಷ ಜೋಸ್ ರಾಮೋಸ್ ಬರಮಾಡಿಕೊಂಡರು.
‘ಭೇಟಿ ಸಂದರ್ಭ ಅಧ್ಯಕ್ಷ ಜೋಸ್ ರಾಮೋಸ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಪ್ರಧಾನ ಮಂತ್ರಿ ಕ್ಸಾನಾನಾ ಗುಸ್ಮಾವೊ ಅವರೊಂದಿಗೂ ಸಭೆ ನಡೆಸಲಿದ್ದಾರೆ’ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ(ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದರು.
ಟಿಮೋರ್ ಲೆಸ್ಟ್‌ನಲ್ಲಿರುವ ಭಾರತೀಯ ಸಮುದಾಯದ ಜೊತೆಗೂ ರಾಷ್ಟ್ರಪತಿಯವರು ಸಂವಾದ ನಡೆಸಲಿದ್ದಾರೆ.
ಆಗ್ನೇಯ ಏಷ್ಯಾದ ರಾಷ್ಟವಾದ ಟಿಮೋರ್ ಲೆಸ್ಟ್‌ಗೆ ಭೇಟಿ ನೀಡಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಖ್ಯಾತಿಗೆ ಮುರ್ಮು ಅವರು ಪಾತ್ರಾಗಿದ್ದಾರೆ.
ರಾಷ್ಟ್ರಪತಿ ಭೇಟಿಗೂ ಮುನ್ನ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಇಎ ಕಾರ್ಯದರ್ಶಿ ಜೈದೀಪ್ ಮಜುಂದಾರ್, ‘ಶೀಘ್ರದಲ್ಲೇ ಭಾರತವು ಟಿಮೋರ್ ಲೆಸ್ಟ್ ರಾಜಧಾನಿ ದಿಲಿಯಲ್ಲಿ ರಾಯಭಾರ ಕಚೇರಿಯನ್ನು ಸ್ಥಾಪಿಸಲಿದೆ. ಅಂತೆಯೇ ಟಿಮೋರ್ ಲೆಸ್ಟ್ ತನ್ನ ರಾಯಭಾರ ಕಚೇರಿಯನ್ನು ನವದೆಹಲಿಯಲ್ಲಿ ತೆರೆಯುವ ಉದ್ದೇಶ ಹೊಂದಿದೆ’ ಎಂದು ಹೇಳಿದರು.
ಟಿಮೋರ್ ಲೆಸ್ಟ್‌ಗೆ ಭೇಟಿ ನೀಡುವ ಮೊದಲು ದ್ರೌಪದಿ ಮುರ್ಮು ಅವರು ಫಿಜಿ ಮತ್ತು ನ್ಯೂಜಿಲೆಂಡ್‌ಗೆ ಭೇಟಿ ನೀಡಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಸಿದ್ದಾರೆ.
ಟಿಮೋರ್ ಲೆಸ್ಟ್ ಭೇಟಿ ಬಳಿಕ ತಮ್ಮ ಮೂರು ದೇಶಗಳ ವಿದೇಶ ಪ್ರವಾಸವನ್ನು ಮುರ್ಮು ಅವರು ಕೊನೆಗೊಳಿಸಲಿದ್ದಾರೆ.