ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನಗೆ ಹೊಡೆದು ನೆಲಕ್ಕೆ ಕೆಡವಿದ್ದರು: ಅಣ್ಣ ವಿಲಿಯಂ ವಿರುದ್ಧ ಹ್ಯಾರಿ ಸ್ಫೋಟಕ ಆರೋಪ

ಬ್ರಿಟನ್ ರಾಜಮನೆತನದ ಒಳಜಗಳ ಮತ್ತೆ ಜಗಜ್ಜಾಹೀರು
Last Updated 5 ಜನವರಿ 2023, 11:13 IST
ಅಕ್ಷರ ಗಾತ್ರ

ಬ್ರಿಟನ್: ಬ್ರಿಟನ್‌ ರಾಜ ಮನೆತನದ ಒಳಜಗಳ ಮತ್ತೆ ಜಗಜ್ಜಾಹೀರಾಗಿದ್ದು, ಅಣ್ಣ ಪ್ರಿನ್ಸ್ ವಿಲಿಯಂ ತನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಪ್ರಿನ್ಸ್‌ ಹ್ಯಾರಿ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಗಾರ್ಡಿಯನ್‌ ಪತ್ರಿಕೆಯನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ವರದಿ ಮಾಡಿವೆ.

ಪ್ರಿನ್ಸ್‌ ಹ್ಯಾರಿ ಅವರ ಆತ್ಮಚರಿತ್ರೆ ‘ಸ್ಪೇರ್‌‘ ಜನವರಿ 10 ರಂದು ಬಿಡುಗಡೆಯಾಗಲಿದ್ದು, ಆ ಪುಸ್ತಕದಲ್ಲಿ ಅಣ್ಣ ವಿಲಿಯಂ ತಮ್ಮ ಮೇಲೆ ಮಾಡಿದ ದೈಹಿಕ ಹಲ್ಲೆಯ ಬಗ್ಗೆ ಉಲ್ಲೇಖ ಮಾಡಿದ್ದಾರೆ.

ಪ್ರಿನ್ಸ್‌ ಹ್ಯಾರಿ ಅವರು ಮೇಘನ್‌ ಅವರನ್ನು ವಿವಾಹವಾದ ಬಳಿಕ ಅರಮನೆಯೊಳಗೆ ಕಲಹ ಆರಂಭವಾಗಿತ್ತು. ಇದೇ ಕಾರಣಕ್ಕಾಗಿ ಹ್ಯಾರಿ ಹಾಗೂ ಮೇಘನ್ ದಂಪತಿ 2020ರಲ್ಲಿ ಅರಮನೆ ತೊರೆದು ಕ್ಯಾಲಿಫೋರ್ನಿಯಾಕ್ಕೆ ತೆರಳಿದ್ದರು.

ಇತ್ತೀಚೆಗೆ ನಿಧನರಾದ ರಾಣಿ ಎಲಿಜಬೆತ್‌ ಅವರ ಅಂತಿಮ ಸಂಸ್ಕಾರದಲ್ಲಿ ಹ್ಯಾರಿ ಹಾಗೂ ವಿಲಿಯಂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಅವರ ನಡುವೆ ಎಲ್ಲವೂ ಸರಿ ಇಲ್ಲ ಎಂದು ಅವರ ಹಾವಭಾವ ಹೇಳುತ್ತಿತ್ತು.

ಹ್ಯಾರಿಯವರ ‘ಸ್ಪೇರ್‌‘ನಲ್ಲಿ ಏನಿದೆ?

ತಾನು ಮೇಘನ್‌ ಅವರನ್ನು ವಿವಾಹವಾದ ಬಳಿಕ ತನ್ನ ಸಹೋದರ ವಿಲಿಯಂ ಜತೆಗೆ ನಡೆದ ಕಲಹಗಳ ಬಗ್ಗೆ ಪುಸ್ತಕದಲ್ಲಿ ಉಲ್ಲೇಖ ಇದೆ ಎಂದು ಹೇಳಲಾಗಿದೆ.

ವಿಲಿಯಂ ಅವರು ಮೇಘನ್‌ ಅವರನ್ನು , ‘ಕಠಿಣ, ಅಸಭ್ಯ ಮತ್ತು ಒರಟು ಬುದ್ಧಿಯವಳು ಎಂದು ನಿಂದಿಸಿದ್ದಾರೆ‘ ಎಂದು ಹ್ಯಾರಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

‘ವಿಲಿಯಂ ನನ್ನ ಕಾಲರ್‌ ಹಿಡಿದು ಎಳೆದಾಡಿದರು. ನನ್ನ ಕತ್ತಲ್ಲಿದ್ದ ಸರ ತುಂಡಾಯಿತು. ನನ್ನನ್ನು ನೆಲಕ್ಕೆ ಕೆಡವಿ ಹಾಕಿದರು. ಅವರು ದೂಡಿದ ರಭಸಕ್ಕೆ ನಾನು ನಾಯಿಯ ಊಟದ ಪಾತ್ರೆ ಮೇಲೆ ಬಿದ್ದೆ. ಪಾತ್ರೆ ಚೂರು ಚೂರಾಯ್ತು. ಆ ವೇಳೆ ನಾನು ದಿಗ್ಭ್ರಮೆಗೆ ಒಳಗಾಗಿದ್ದೆ. ಕ್ಷಣಾರ್ಧದಲ್ಲಿ ಎಲ್ಲವೂ ನಡೆದು ಹೋಯ್ತು. ಆ ಘಟನೆಯಲ್ಲಿ ಗಾಯವಾಗಿ ನನ್ನ ಮೈಮೇಲೆ ಕಪ್ಪು ಕಲೆ ಉಂಟಾಗಿತ್ತು‘ ಎಂದು ಹ್ಯಾರಿ ಬರೆದುಕೊಂಡಿದ್ದಾಗಿ ಗಾರ್ಡಿಯನ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT