ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ರಾಜಪ್ರಭುತ್ವಕ್ಕಾಗಿ ಮತ್ತೆ ಪ್ರತಿಭಟನೆ

Published 12 ಮಾರ್ಚ್ 2024, 14:20 IST
Last Updated 12 ಮಾರ್ಚ್ 2024, 14:20 IST
ಅಕ್ಷರ ಗಾತ್ರ

ಕಠ್ಮಂಡು : ನೇಪಾಳದಲ್ಲಿ 16 ವರ್ಷಗಳ ಹಿಂದೆ ನಡೆದ ಬೃಹತ್ ಪ್ರತಿಭಟನೆಗಳು ಆಗಿನ ರಾಜ ಜ್ಞಾನೇಂದ್ರ ಶಾ ಅವರನ್ನು ಸಿಂಹಾಸನ ತೊರೆದು ಪ್ರಜಾಪ್ರಭುತ್ವಕ್ಕೆ ಹಾದಿ ಮಾಡಿಕೊಡುವಂತೆ ಮಾಡಿತ್ತು. ಇದೀಗ ಅದೇ ರಾಜ ಜ್ಞಾನೇಂದ್ರ ಶಾ ಅವರನ್ನು ಪುನಃ ಸಿಂಹಾಸನಕ್ಕೇರಿಸಲು ದೇಶದಲ್ಲಿ ಪ್ರತಿಭಟನೆಯ ಹೊಸ ಅಲೆ ಎದ್ದಿದೆ. 

ರಾಜಧಾನಿ ಕಠ್ಮಂಡು ಮತ್ತೆ ಪ್ರತಿಭಟನಕಾರರಿಂದ ತುಂಬಿಹೋಗಿದೆ. ಈ ಬಾರಿ ಪ್ರತಿಭಟನಕಾರರು ಜ್ಞಾನೇಂದ್ರ ಶಾ ಅವರನ್ನು ರಾಜನಾಗಿ ಸಿಂಹಾಸನದಲ್ಲಿ ಮತ್ತೆ ಕೂರಿಸಬೇಕು, ಹಿಂದೂ ಧರ್ಮವನ್ನು ರಾಷ್ಟ್ರ ಧರ್ಮವಾಗಿ ಮರಳಿ ಸ್ಥಾಪಿಸಬೇಕೆಂದು ಹೋರಾಟದ ಕಿಚ್ಚು ಹಬ್ಬಿಸಿದ್ದಾರೆ. ದೇಶದ ಪ್ರಮುಖ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಆಡಳಿತ ವಿಫಲವಾಗಿದೆ ಎಂದು ರಾಜಪ್ರಭುತ್ವದ ನಿಷ್ಠರು ಆರೋ‍ಪಿಸುತ್ತಿದ್ದು, ರಾಜಕಾರಣಿಗಳ ನಡೆಯಿಂದ ಜನಸಾಮಾನ್ಯರು ಹತಾಶರಾಗಿರುವುದು ಕಾಣಬರುತ್ತಿದೆ.

ದೇಶದಲ್ಲಿನ ಸದ್ಯದ ವ್ಯವಸ್ಥೆಯಿಂದಾಗಿ ಬೆಳೆಯುತ್ತಿರುವ ಹತಾಶೆಯು ಆಮೂಲಾಗ್ರ ಬದಲಾವಣೆಯ ಒಕ್ಕೊರಲ ಕೂಗಿಗೆ ಕಾರಣವಾಗಿದೆ. ರಾಜಪ್ರಭುತ್ವದ ಪರವಾದ ರ‍್ಯಾಲಿಗಳು ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿವೆ. ಹೆಚ್ಚಿನ ಜನರು ತಮ್ಮ ಮನೆಗಳು ಮತ್ತು ಅಂಗಡಿಮುಂಗಟ್ಟು, ವಾಣಿಜ್ಯಮಳಿಗೆಗಳ ಮುಂದೆ ಮಾಜಿ ದೊರೆ ಮತ್ತು ಅವರ ಪೂರ್ವಜರ ಭಾವಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ.

‘ಮರಳಿ ಬನ್ನಿ ದೊರೆ, ದೇಶವನ್ನು ಉಳಿಸಿ. ನಮ್ಮ ಪ್ರೀತಿಯ ದೊರೆಗೆ ಜಯವಾಗಲಿ. ನಮಗೆ ರಾಜಪ್ರಭುತ್ವ ಬೇಕು’ ಎಂದು ಜನಸ್ತೋಮವು ಕಳೆದ ತಿಂಗಳು ರಾಜಧಾನಿಯಲ್ಲಿ ನಡೆದ ಪ್ರತಿಭಟನ ರ‍್ಯಾಲಿಯಲ್ಲಿ ಘೋಷಣೆ ಕೂಗಿತ್ತು.

‘ಚುನಾಯಿತ ರಾಜಕಾರಣಿಗಳು ಜನರ ಸಮಸ್ಯೆಗಳನ್ನು ಪರಿಹರಿಸಲು ಒತ್ತು ಕೊಡುವುದಕ್ಕಿಂತ ಅಧಿಕಾರಲಾಲಸೆ ಮತ್ತು ವೈಯಕ್ತಿಕ ಹಿತಾಸಕ್ತಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹಾಗಾಗಿಯೇ ಕೆಲವು ನೇಪಾಳಿಗರು ರಾಜಪ್ರಭುತ್ವವೇ ಉತ್ತಮವೆಂದು ಯೋಚಿಸಲು ಆರಂಭಿಸಿದ್ದಾರೆ’ ಎಂದು ಕಠ್ಮಂಡು ಮೂಲದ ಸ್ವತಂತ್ರ ವಿಶ್ಲೇಷಕ ಧ್ರುಬಾ ಹರಿ ಅಧಿಕಾರಿ ಹೇಳಿದ್ದಾರೆ.  

16 ವರ್ಷ; 13 ಸರ್ಕಾರ: 

ಜ್ಞಾನೇಂದ್ರ ಶಾ ಅವರು ಸಂಪೂರ್ಣ ಅಧಿಕಾರ ವಶಪಡಿಸಿಕೊಳ್ಳುವ 2005ರವರೆಗೆ ಕಾರ್ಯಾಂಗ ಅಥವಾ ರಾಜಕೀಯ ಅಧಿಕಾರಗಳಿಲ್ಲದ ಸಾಂವಿಧಾನಿಕ ರಾಷ್ಟ್ರದ ಮುಖ್ಯಸ್ಥರಾಗಿದ್ದರು. ಅವರು ಸರ್ಕಾರ ಮತ್ತು ಸಂಸತ್ತನ್ನು ವಿಸರ್ಜಿಸಿ, ರಾಜಕಾರಣಿಗಳು ಮತ್ತು ಪತ್ರಕರ್ತರನ್ನು ಜೈಲಿಗಟ್ಟಿದರು. ಸಂವಹನ ವ್ಯವಸ್ಥೆ ಕಡಿತಗೊಳಿಸಿ, ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಅಲ್ಲದೆ, ದೇಶ ಆಳಲು ಸೇನೆಯನ್ನು ಬಳಸಿದ್ದರು.  

2006ರಲ್ಲಿ ಸಂಸತ್ತಿಗೆ ಅಧಿಕಾರ ಬಿಟ್ಟುಕೊಡುವಂತೆ ಲಕ್ಷಾಂತರ ಜನರು ಒತ್ತಾಯಿಸಿ ರಾಜನ ವಿರುದ್ಧ ಪ್ರತಿಭಟನೆ ನಡೆಸಿದರು. ಎರಡು ವರ್ಷಗಳ ನಂತರ ಸಂಸತ್ತು ರಾಜಪ್ರಭುತ್ವವನ್ನು ರದ್ದುಗೊಳಿಸಲು ಮತ ಚಲಾಯಿಸಿತು. ಜ್ಞಾನೇಂದ್ರ ಶಾ ಅರಮನೆ ತೊರೆದು ಸಾಮಾನ್ಯ ಜನರಂತೆ ಜೀವನ ಶುರು ಮಾಡಿದರು. ರಾಜಪ್ರಭುತ್ವ ರದ್ದಾದ ಮೇಲೆ ನೇಪಾಳವು 13 ಸರ್ಕಾರಗಳನ್ನು ನೋಡಿದೆ. ದೇಶವು ಇದುವರೆಗೂ ರಾಜಕೀಯ ಸ್ಥಿರತೆ ಕಾಣಲೇ ಇಲ್ಲ. 2008ರಲ್ಲಿ ರಾಜಪ್ರಭುತ್ವ ರದ್ದಾದ ನಂತರ ದೇಶವು ಆರ್ಥಿಕ ಬಿಕ್ಕಟ್ಟು ಮತ್ತು ವ್ಯಾಪಕ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವುದರಿಂದ ಅನೇಕ ನೇಪಾಳಿಗಳು ಪ್ರಜಾಪ್ರಭುತ್ವದ ಮೇಲೆ ಭ್ರಮನಿರಸನಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT