ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾಳಿ ವೇಳೆ ಪರಸ್ಪರರಿಗೆ ನೆರವು: ರಷ್ಯಾ, ಉತ್ತರ ಕೊರಿಯಾ ಒಪ್ಪಂದ

Published 19 ಜೂನ್ 2024, 14:34 IST
Last Updated 19 ಜೂನ್ 2024, 14:34 IST
ಅಕ್ಷರ ಗಾತ್ರ

ಸೋಲ್(ಉತ್ತರ ಕೊರಿಯಾ): ಯಾವುದೇ ದೇಶದ ಮೇಲೆ ಆಕ್ರಮಣ ನಡೆದರೂ ಪರಸ್ಪರರು ನೆರವಿಗೆ ಧಾವಿಸುವುದು ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಒಳಗೊಂಡ ಒಪ್ಪಂದಕ್ಕೆ ರಷ್ಯಾ ಮತ್ತು ಉತ್ತರ ಕೊರಿಯಾ ಬುಧವಾರ ಸಹಿ ಹಾಕಿದವು.

ಪ್ಯೊಂಗ್‌ಯಾಂಗ್‌ನಲ್ಲಿ ನಡೆದ ಸಭೆಯಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್‌ ಉನ್‌ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದರೆ, ದಾಳಿ ಸಂದರ್ಭದಲ್ಲಿ ಈ ದೇಶಗಳು ಯಾವ ಬಗೆಯ ನೆರವನ್ನು ನೀಡಲಿವೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಮೂಲಗಳು ಹೇಳಿವೆ.

ತಮ್ಮ 24 ವರ್ಷಗಳ ಅಧಿಕಾರಾವಧಿಯಲ್ಲಿ, ಪುಟಿನ್‌ ಅವರು ಇದೇ ಮೊದಲ ಬಾರಿಗೆ ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ್ದಾರೆ.

ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಪುಟಿನ್, ‘ಕಿಮ್‌ ಅವರ ಜೊತೆ ನಡೆದ ಮಾತುಕತೆ ವೇಳೆ, ಪ್ರಾದೇಶಿಕ ಭದ್ರತೆ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಯಿತು’ ಎಂಬುದಾಗಿ ತಿಳಿಸಿದರು ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. 

‘ಈ ಒಪ್ಪಂದವು ರಕ್ಷಣೆ ಮತ್ತು ಶಾಂತಿ ಸ್ಥಾಪನೆಗೆ ಸಂಬಂಧಿಸಿದ್ದಾಗಿದೆ. ಉಭಯ ದೇಶಗಳ ನಡುವಿನ ಈ ಒಪ್ಪಂದವು ಜಾಗತಿಕ ಮಟ್ಟದಲ್ಲಿ ಹೊಸ ಸಮೀಕರಣಕ್ಕೆ ದಾರಿ ಮಾಡುವ ವಿಶ್ವಾಸ ಹೊಂದಿದ್ದಾಗಿ ಕಿಮ್‌ ಜಾಂಗ್‌ ಉನ್ ಹೇಳಿದರು’ ಎಂದೂ ಮಾಧ್ಯಮಗಳು ವರದಿ ಮಾಡಿವೆ.

ಆರೋಗ್ಯ, ವೈದ್ಯಕೀಯ ಶಿಕ್ಷಣ, ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತಾಗಿಯೂ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಹಾಕಿದರು ಎಂದು ಕ್ರೆಮ್ಲಿನ್‌ ಜಾಲತಾಣದಲ್ಲಿನ ಮಾಹಿತಿ ಉಲ್ಲೇಖಿಸಿ, ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT