ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ರೈಸಿ ಸಾವು: ಅನಿಶ್ಚಿತತೆಯ ಹೊಸ ಅಧ್ಯಾಯ'

Published 20 ಮೇ 2024, 23:30 IST
Last Updated 20 ಮೇ 2024, 23:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ ಟೈಮ್ಸ್: ಇರಾನ್ ದೇಶವು ತನ್ನ ಪರಮೋಚ್ಚ ನಾಯಕನ ಸ್ಥಾನಕ್ಕೆ ಉತ್ತರಾಧಿಕಾರಿಯನ್ನು ಅರಸುತ್ತಿರುವ ಹೊತ್ತಿನಲ್ಲಿ ಎದುರಾಗಿರುವ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹಠಾತ್ ಸಾವು ಅಸ್ಥಿರತೆಯ ಹೊಸದೊಂದು ಅಧ್ಯಾಯಕ್ಕೆ ನಾಂದಿ ಹೇಳಿದೆ. 63 ವರ್ಷ ವಯಸ್ಸಿನ ರೈಸಿ ಅವರು ಇರಾನ್‌ನ ಪರಮೋಚ್ಚ ನಾಯಕನ ಸ್ಥಾನಕ್ಕೆ ಪ್ರಮುಖ ಅಭ್ಯರ್ಥಿ ಎಂದು ಪರಿಗಣಿತವಾಗಿದ್ದರು.

ರೈಸಿ ಅವರ ಸಾವಿಗೆ ಮೊದಲೇ ಇರಾನ್‌ನ ಆಡಳಿತ ವ್ಯವಸ್ಥೆಯು ಆಂತರಿಕ ರಾಜಕೀಯ, ಧಾರ್ಮಿಕ ಸಂಘರ್ಷಗಳಲ್ಲಿ ಮುಳುಗಿತ್ತು. ಆಂತರಿಕ ಪ್ರತಿಭಟನೆಗಳು, ದುರ್ಬಲ ಅರ್ಥವ್ಯವಸ್ಥೆ, ಇಸ್ರೇಲ್‌ ಜೊತೆಗಿನ ಸಂಘರ್ಷದ ಕಾರಣದಿಂದಾಗಿ ಅಸ್ಥಿರತೆ ಮನೆಮಾಡುವ ಭೀತಿ ಇದೆ, ಹೀಗಾಗಿ ಇರಾನ್‌ನ ಆಂತರಿಕ ಹಾಗೂ ವಿದೇಶಿ ನೀತಿಗಳಲ್ಲಿ ದೊಡ್ಡ ಬದಲಾವಣೆಗಳು ಆಗುವ ಸಾಧ್ಯತೆ ಇಲ್ಲ ಎಂದು ತಜ್ಞರು ಅಂದಾಜಿಸಿದ್ದಾರೆ. ದೇಶ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ಖಮೇನಿ ನಿರ್ಧರಿಸಿದ್ದಾರೆ, ಹೊಸ ಅಧ್ಯಕ್ಷರು ಅದರಲ್ಲಿ ಹೆಚ್ಚಿನ ಬದಲಾವಣೆ ತರಲಿಕ್ಕಿಲ್ಲ ಎಂದು ಅವರು ಅಂದಾಜು ಮಾಡಿದ್ದಾರೆ.

ಪ್ರಾದೇಶಿಕವಾಗಿ ಕೆಲವು ಬಂಡುಕೋರ ಸಂಘಟನೆಗಳಿಗೆ ಬೆಂಬಲ ಒದಗಿಸುವುದು, ಅಣ್ವಸ್ತ್ರಗಳಿಗೆ ಬಿಡಿಭಾಗ ಅಭಿವೃದ್ಧಿಪಡಿಸುವುದು ಮುಂತಾದ ವಿಚಾರಗಳಲ್ಲಿ ನೀತಿಗಳು ಬದಲಾವಣೆ ಕಾಣವು ಎಂದು ಇಂಟರ್‌ನ್ಯಾಷನಲ್ ಕ್ರೈಸಿಸ್ ಗ್ರೂಪ್‌ನ ಇರಾನ್‌ ನಿರ್ದೇಶಕ ಅಲಿ ವಾಯಿಜ್ ಹೇಳಿದ್ದಾರೆ. 

ಅಧ್ಯಕ್ಷರಾಗಿ ರೈಸಿ ಅವರು ತೋರಿದ ಸಾಧನೆಯ ಕುರಿತ ಟೀಕೆಗಳು, ಖಮೇನಿ ನಂತರ ಪರಮೋಚ್ಚ ಸ್ಥಾನಕ್ಕೆ ಅವರು ಸೂಕ್ತ ವ್ಯಕ್ತಿಯೇ ಎಂಬ ಪ್ರಶ್ನೆಯನ್ನು ಮೂಡಿಸಿತ್ತು ಎಂದು ತಜ್ಞರು ಹೇಳಿದ್ದಾರೆ. ರೈಸಿ ಅವರ ನಿಧನದ ಕಾರಣದಿಂದಾಗಿ ಪರಮೋಚ್ಚ ನಾಯಕನ ಸ್ಥಾನಕ್ಕೆ, ಮೊಜತಾಬಾ ಖಮೇನಿ ಅವರ ಹಾದಿಯನ್ನು ಸುಗಮಗೊಳಿಸಿದೆ. ಆದರೆ ಅಂತಿಮ ತೀರ್ಮಾನವನ್ನು ಹಿರಿಯ ಧರ್ಮಗುರುಗಳ ಮಂಡಳಿಯೊಂದು ತೆಗೆದುಕೊಳ್ಳುತ್ತದೆ.

ದೇಶಕ್ಕೆ ಹೊರಗಡೆಯಿಂದಲೂ ಸವಾಲುಗಳು ತೀವ್ರವಾಗಿವೆ. ಏಪ್ರಿಲ್‌ನಲ್ಲಿ ಇಸ್ರೇಲ್ ಮತ್ತು ಇರಾನ್‌ ಪರಸ್ಪರರನ್ನು ಗುರಿಯಾಗಿಸಿಕೊಂಡು ನೇರ ದಾಳಿ ನಡೆಸಿವೆ. ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವೆ ಹೆಚ್ಚಿನ ಪ್ರಮಾಣದ ಯುದ್ಧವನ್ನು ತಡೆಯಲು ಇರಾನ್ ಯತ್ನ ನಡೆಸಿದೆ. ಇಸ್ರೇಲ್‌ ಜೊತೆ ನೇರ ಸಂಘರ್ಷವನ್ನು ತಾಳಿಕೊಳ್ಳಲು ಇರಾನ್‌ಗೆ ಆಗದು.

ಪ್ರಾದೇಶಿಕ ಬಿಕ್ಕಟ್ಟನ್ನು ಶಮನಗೊಳಿಸಲು ಹಾಗೂ ತನ್ನ ಅಣ್ವಸ್ತ್ರ ಕಾರ್ಯಕ್ರಮದ ಭವಿಷ್ಯಕ್ಕೆ ಸಂಬಂಧಿಸಿದಂತೆ ಇರಾನ್‌, ಅಮೆರಿಕದ ಜೊತೆ ಆಗಾಗ ಮಾತುಕತೆ ನಡೆಸುತ್ತಿದೆ. ರೈಸಿ ಅವರ ಸಾವು ಈ ಮಾತುಕತೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸಬಲ್ಲದು.

ಹಂಗಾಮಿ ಅಧ್ಯಕ್ಷರ ಕುರಿತು...

ಇರಾನ್‌ನ ಹಂಗಾಮಿ ಅಧ್ಯಕ್ಷ ಆಗಿ ನೇಮಕಗೊಂಡಿರುವ ಉಪಾಧ್ಯಕ್ಷ ಮೊಹಮ್ಮದ್ ಮೊಖಬರ್ ಅವರು ಇರಾನ್‌ನ ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಾಗಿ ತೆರೆಯ ಮರೆಯಲ್ಲೇ ಇದ್ದವರು. ಮೊಖಬರ್ ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದೆ ಇದ್ದರೂ ದೇಶದ ಅಧಿಕಾರ ವ್ಯವಸ್ಥೆಯಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದವರು. ಅದರಲ್ಲೂ ಮುಖ್ಯವಾಗಿ ದೇಶದ ದಾನ–ದತ್ತಿ ಸಂಸ್ಥೆಗಳಲ್ಲಿ ಪ್ರಮುಖ ಹೊಣೆ ನಿರ್ವಹಿಸಿದ್ದಾರೆ. ಮೊಖಬರ್ ಅವರು ಇಮಾಮ್ ಖೊಮೆನಿ ಅವರ ಆದೇಶಗಳ ಅನುಪಾಲನೆಯ ಹೆಸರಿನ ಸಂಸ್ಥೆಯೊಂದರ ಹೊಣೆ ಹೊತ್ತಿದ್ದರು. ಅಮೆರಿಕದ ಪ್ರಕಾರ ಈ ಸಂಸ್ಥೆಯು ಕೋಟ್ಯಂತರ ಡಾಲರ್ ಮೌಲ್ಯದ ಆಸ್ತಿಗಳ ಮೇಲ್ವಿಚಾರಣೆ ನಡೆಸುತ್ತದೆ ದೇಶದ ಅರ್ಥ ವ್ಯವಸ್ಥೆಯ ಬಹುತೇಕ ಎಲ್ಲ ವಲಯಗಳಲ್ಲಿಯೂ ಇದು ಪಾಲು ಹೊಂದಿದೆ. ‘ಈ ಸಂಸ್ಥೆಯು ಭಿನ್ನ ಅಭಿಪ್ರಾಯಗಳನ್ನು ಹೇಳುವವರ ಹಕ್ಕುಗಳನ್ನು ಬಹಳ ವ್ಯವಸ್ಥಿತವಾಗಿ ಉಲ್ಲಂಘಿಸಿದೆ. ಧಾರ್ಮಿಕ ಅಲ್ಪಸಂಖ್ಯಾರ ರಾಜಕೀಯ ವಿರೋಧಿಗಳ ದೇಶಭ್ರಷ್ಟ ಇರಾನಿಯನ್ನರ ಆಸ್ತಿಗಳನ್ನು ಮತ್ತು ಜಮೀನನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತದೆ’ ಎಂದು 2021ರಲ್ಲಿ ಮೊಖಬರ್ ಅವರಿಗೆ ನಿರ್ಬಂಧಗಳನ್ನು ವಿಧಿಸುವ ಸಂದರ್ಭದಲ್ಲಿ ಅಮೆರಿಕ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT