ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ನ್ಯಾಟೊ ಸೇರಿದರೆ ಮೂರನೇ ಮಹಾಯುದ್ಧ ಖಚಿತ- ರಷ್ಯಾ

ಅಮೆರಿಕ ನೇತೃತ್ವದ ಮಿತ್ರಕೂಟಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡಿದ ರಷ್ಯಾ
Last Updated 13 ಅಕ್ಟೋಬರ್ 2022, 15:44 IST
ಅಕ್ಷರ ಗಾತ್ರ

ಲಂಡನ್‌ (ರಾಯಿಟರ್ಸ್‌):ಅಮೆರಿಕ ನೇತೃತ್ವದ ಸೇನಾ ಮೈತ್ರಿಕೂಟನ್ಯಾಟೊಗೆ ಉಕ್ರೇನ್‌ ಸೇರಿದರೆ, ಆ ರಾಷ್ಟ್ರದಲ್ಲಿನ ಸಂಘರ್ಷವು ಮೂರನೇ ಮಹಾಯುದ್ಧಕ್ಕೆ ದಾರಿಯಾಗುವುದು ಖಚಿತ ಎಂದು ರಷ್ಯಾದ ಭದ್ರತಾ ಸಮಿತಿ ಗುರುವಾರ ಗಂಭೀರ ಎಚ್ಚರಿಕೆ ನೀಡಿದೆ.

‘ನ್ಯಾಟೊ ಸೇರಿದರೆ ಸಂಘರ್ಷ ಉಲ್ಬಣಿಸಿ, ಮೂರನೇ ವಿಶ್ವ ಸಮರ ಸಂಭವಿಸುವುದು ಖಚಿತ ಎನ್ನುವುದು ಉಕ್ರೇನ್‌ಗೂ ಚೆನ್ನಾಗಿಯೇ ಗೊತ್ತಿದೆ’ ಎಂದುರಷ್ಯಾದ ಭದ್ರತಾ ಮಂಡಳಿಯ ಉಪ ಕಾರ್ಯದರ್ಶಿ ಅಲೆಕ್ಸಾಂಡರ್ ವೆನೆಡಿಕ್ಟೊವ್ ಹೇಳಿದ್ದಾರೆ. ಈ ಹೇಳಿಕೆಉಲ್ಲೇಖಿಸಿ ರಷ್ಯಾದ ಸರ್ಕಾರಿ ನಿಯಂತ್ರಣ ಸುದ್ದಿಸಂಸ್ಥೆ ‘ಟಾಸ್‌’ ಕೂಡ ವರದಿ ಮಾಡಿದೆ.

‘ಉಕ್ರೇನ್‌ಗೆ ಸದಸ್ಯತ್ವ ನೀಡುವ ಕೋರಿಕೆ ಪರಿಗಣಿಸಿದರೆ ಅದರಿಂದ ಆಗುವ ಸಂಘರ್ಷದ ಪರಿಣಾಮದ ಅರಿವು ಪಶ್ಚಿಮದ ರಾಷ್ಟ್ರಗಳಿಗಿದೆ. ಸದಸ್ಯತ್ವ ನೀಡುವ ತೀರ್ಮಾನ ಸ್ವಾಭಾವಿಕವಾಗಿ ಆತ್ಮಹತ್ಯೆಗೆ ಸಮಾನ ಎನ್ನುವುದನ್ನು ನ್ಯಾಟೊ ಸದಸ್ಯ ರಾಷ್ಟ್ರಗಳು ಅರ್ಥ ಮಾಡಿಕೊಂಡಿವೆ’ ಎಂದುವೆನೆಡಿಕ್ಟೊವ್ ಹೇಳಿದ್ದಾರೆ.

ಸೆ.30ರಂದು ಪುಟಿನ್ ಅವರು ಆಕ್ರಮಿಸಿಕೊಂಡಿರುವ ಉಕ್ರೇನ್‌ನ ಶೇ 18ರಷ್ಟು ಭೂಪ್ರದೇಶವನ್ನು ರಷ್ಯಾ ಸ್ವಾಧೀನಕ್ಕೆ ಸೇರಿಸಿಕೊಳ್ಳುತ್ತಿರುವುದಾಗಿ ಔಪಚಾರಿಕ ಘೋಷಣೆ ಹೊರಡಿಸಿದ ಕೆಲವೇ ಗಂಟೆಗಳಲ್ಲಿ, ಉಕ್ರೇನ್‌ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ನ್ಯಾಟೊದ ತ್ವರಿತಗತಿಯ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿರುವುದಾಗಿ ಅಚ್ಚರಿಯ ಘೋಷಣೆ ಮಾಡಿದ್ದರು.

ಅಣ್ವಸ್ತ್ರ ಸಂಘರ್ಷದ ಪರಿಣಾಮ ಇಡೀ ಭೂಮಂಡಲಕ್ಕೆ: ಅಣ್ವಸ್ತ್ರ ಸಂಘರ್ಷದ ಪರಿಣಾಮ ರಷ್ಯಾ ಮತ್ತು ಪಶ್ಚಿಮದ ಸಂಘಟಿತ ರಾಷ್ಟ್ರಗಳಿಗಷ್ಟೇ ಸೀಮಿತವಾಗುವುದಿಲ್ಲ, ಈ ಗ್ರಹದ ಪ್ರತಿ ದೇಶದ ಮೇಲೂ ದುರಂತ ಉಂಟು ಮಾಡುತ್ತದೆ. ಮನುಕುಲಕ್ಕೆ ವಿನಾಶಕಾರಿಯಾಗಿದೆ. ರಷ್ಯಾ ವಿರುದ್ಧ ರಕ್ಷಣಾತ್ಮಕ ದಾಳಿಗೆ ಝೆಲೆನ್‌ಸ್ಕಿ ಕರೆ ನೀಡಿರುವುದು ಅತ್ಯಂತ ಅಪಾಯಕಾರಿಯಾದುದು ಎಂದು ವೆನೆಡಿಕ್ಟೊವ್ ಹೇಳಿದರು.

ರಷ್ಯಾ ಮತ್ತು ಅಮೆರಿಕ ಅತಿದೊಡ್ಡ ಅಣ್ವಸ್ತ್ರ ಶಕ್ತಿ ರಾಷ್ಟ್ರಗಳಾಗಿವೆ. ವಿಶ್ವದಲ್ಲಿರುವ ಅಣು ಸಿಡಿತಲೆಗಳಲ್ಲಿ ಶೇ 90ರಷ್ಟು ಈ ಎರಡು ರಾಷ್ಟ್ರಗಳ ಬತ್ತಳಿಕೆಯಲ್ಲಿವೆ.

ಉಕ್ರೇನಿನ 40 ನಗರಗಳ ಮೇಲೆ ಕ್ಷಿಪಣಿ ದಾಳಿ

ಕೀವ್‌/ಬ್ರಸೆಲ್ಸ್‌ (ರಾಯಿಟರ್ಸ್‌): ಉಕ್ರೇನ್‌ ಬೆಂಬಲಕ್ಕೆ ಇನ್ನಷ್ಟು ಶಸ್ತ್ರಾಸ್ತ್ರದ ಬೆಂಬಲವನ್ನು ನ್ಯಾಟೊ ರಾಷ್ಟ್ರಗಳು ಘೋಷಿಸಿದ ಬೆನ್ನಲ್ಲೇ ಉಕ್ರೇನ್‌ ಮೇಲೆ ರಷ್ಯಾ ಗುರುವಾರ ಸೇನಾ ದಾಳಿ ತೀವ್ರಗೊಳಿಸಿದೆ. ಕಳೆದ 24 ತಾಸುಗಳಲ್ಲಿ ಉಕ್ರೇನಿನ40ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳ ಮೇಲೆರಷ್ಯಾ ಕ್ಷಿಪಣಿಗಳನ್ನು ಉಡಾಯಿಸಿದೆ.

ಮೈಕೊಲೈವ್‌ ಪಟ್ಟಣದ ಮೇಲೆ ಭಾರಿ ಬಾಂಬ್‌ ದಾಳಿ ನಡೆದಿದೆ. ರಾಜಧಾನಿ ಕೀವ್‌ ನಗರದ ಸಮೀಪ ಇರಾನಿ ಡ್ರೋನ್‌ಗಳು ಅಪ್ಪಳಿಸಿವೆ. ನಾಗರಿಕರ ಮೂಲಸೌಕರ್ಯಗಳು, ಜನವಸತಿ ಮತ್ತು ಬಹುಮಹಡಿ ಕಟ್ಟಡಗಳು ಹಾನಿಗೀಡಾಗಿವೆ.

ರಷ್ಯಾದ 25 ಮಿಲಿಟರಿ ಗುರಿಗಳ ಮೇಲೆಉಕ್ರೇನ್‌ವಾಯು ಪಡೆಯು 32 ದಾಳಿಗಳನ್ನು ನಡೆಸಿರುವುದಾಗಿ ಉಕ್ರೇನ್‌ನ ಶಸ್ತ್ರ ಪಡೆಗಳ ಮುಖ್ಯಸ್ಥರು ಹೇಳಿದ್ದಾರೆ.

ಇದೇ ವೇಳೆ ಬ್ರಸೆಲ್ಸ್‌ನಲ್ಲಿ ನ್ಯಾಟೊ ಮಿತ್ರರಾಷ್ಟ್ರಗಳ ಸಭೆಯಲ್ಲಿ, ಯುರೋಪಿನ ವಾಯು ರಕ್ಷಣೆ ಹೆಚ್ಚಿಸುವ ಜಂಟಿ ಯೋಜನೆಗಳನ್ನು ಪ್ರಕಟಿಸಲಾಯಿತು.

ನ್ಯಾಟೊ ರಾಷ್ಟ್ರಗಳು ಯುರೋಪಿನ ಆಕಾಶ ರಕ್ಷಾ ಕವಚಕ್ಕೆ ಜಂಟಿಯಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ, ತಮ್ಮ ಪ್ರತಿ ಪ್ರದೇಶವನ್ನು ರಕ್ಷಿಸಿಕೊಳ್ಳಲು ಬದ್ಧವಾಗಿವೆ ಎಂದು ಜರ್ಮನಿಯ ರಕ್ಷಣಾ ಸಚಿವ ಕ್ರಿಸ್ಟೀನ್ ಲ್ಯಾಂಬ್ರೆಕ್ಟ್ ತಿಳಿಸಿದರು.

ಇದೇ ವೇಳೆ ಅಮೆರಿಕ ಕೂಡ ನ್ಯಾಟೊ ತನ್ನ ಪ್ರತಿ ಇಂಚು ನೆಲವನ್ನು ರಕ್ಷಿಸಿಕೊಳ್ಳಲಿದೆ ಎಂದು ಗುಡುಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT