ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತವು ಭಾರತೀಯ ಭಾಷೆಗಳ ದೂರದ ಸಂಬಂಧಿಯೇ ಹೊರತು ಮೂಲವಲ್ಲ ಎಂದ ಹೊಸ ಅಧ್ಯಯನ

ಜರ್ಮನಿಯ ಮ್ಯಾಕ್ಸ್ ಪ್ಲಾಂಕ್‌ ಇನ್‌ಸ್ಟಿಟ್ಯೂಟ್ ಫಾರ್ ಎವಲ್ಯೂಷನರಿ ಆಂಥ್ರೊಪಾಲಜಿ ಅಧ್ಯಯನ
Published 28 ಜುಲೈ 2023, 7:00 IST
Last Updated 28 ಜುಲೈ 2023, 7:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಇಂಡೊ ಯುರೋಪಿಯನ್ ಭಾಷೆಯು 8,100 ವರ್ಷಗಳ ಹಿಂದಿನದು ಹಾಗೂ ಆಧುನಿಕ ಇಂಡಿಕ್ ಭಾಷೆಗಳು ಸಂಸ್ಕೃತ ಭಾಷೆಯಿಂದ ನೇರವಾಗಿ ಬಂದದ್ದಲ್ಲ ಎಂಬ ಅಂಶವನ್ನು ಇತ್ತೀಚೆಗೆ ಬಿಡುಗಡೆಯಾದ ಅಧ್ಯಯನವೊಂದು ಹೇಳಿದೆ.

ಇಂಡೊ–ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರಿದ ಇಂಗ್ಲಿಷ್, ಫ್ರೆಂಚ್, ಗ್ರೀಕ್‌ನಿಂದ ಹಿಡಿದು ಬಂಗಾಳಿ, ಪರ್ಷಿಯನ್ ಹಾಗೂ ರಷ್ಯನ್‌ ಭಾಷೆವರೆಗೆ ಸುಮಾರು 400 ಭಾಷೆಗಳ ಮೂಲಗಳ ಕುರಿತು ಸದ್ಯ ಇರುವ ಎರಡು ಪ್ರಬಲ ಸಿದ್ಧಾಂತಗಳಿಗಿಂತ ಇದು ಭಿನ್ನವಾದ ನಿಲುವು ಹೊಂದಿದೆ.

ಈ ಕುರಿತು ಇರುವ ಸ್ಟೆಪ್ಪೆ ಸಿದ್ಧಾಂತದ ಪ್ರಕಾರ 6 ಸಾವಿರ ವರ್ಷಗಳ ಹಿಂದೆ ಕ್ಯಾಸ್ಪಿಯನ್ ಸಮುದ್ರದ ಉತ್ತರ ಮಧ್ಯ ಏಷ್ಯಾದ ಹುಲ್ಲುಗಾವಲಿನಲ್ಲಿದ್ದ ಕುದುರೆ ಆಧಾರಿತ ಪಶುಪಾಲಕರ ನಡುವೆ ಇದ್ದ ಭಾಷೆಯೇ ಮೂಲ ಎಂದಿದೆ. ಆದರೆ ಅನಾಟೋಲಿಯನ್ ಸಿದ್ಧಾಂತದ ಪ್ರಕಾರ 9 ಸಾವಿರ ವರ್ಷಗಳ ಹಿಂದೆ ಟರ್ಕಿಯಲ್ಲಿದ್ದ ರೈತರು ಆಡುತ್ತಿದ್ದ ಮಾತುಗಳೇ ಇಂಡೋ ಯುರೋಪಿಯನ್ ಭಾಷೆಯ ಮೂಲ ಎಂದು ವಾದಿಸಿವೆ.

ಜರ್ಮನಿಯ ಮ್ಯಾಕ್ಸ್ ಪ್ಲಾಂಕ್‌ ಇನ್‌ಸ್ಟಿಟ್ಯೂಟ್ ಫಾರ್ ಎವಲ್ಯೂಷನರಿ ಆಂಥ್ರೊಪಾಲಜಿಯಲ್ಲಿ ಭಾಷಾಶಾಸ್ತ್ರ ಮತ್ತು ಸಾಂಸ್ಕೃತಿಕ ವಿಕಾಸ ವಿಭಾಗದ ಮುಖ್ಯಸ್ಥ ರಸ್ಸಲ್ ಗ್ರೇ ಅವರು ಅಮೆರಿಕದ ವಿಜ್ಞಾನ ವೇದಿಕೆಯಲ್ಲಿ ಮಾತನಾಡಿ, ‘ನಮ್ಮ ಈ ನೂತನ ಸಿದ್ಧಾಂತ ಹಿಂದಿನ ಎರಡೂ ಸಿದ್ಧಾಂತಗಳ ಆಧಾರತ ಹೈಬ್ರಿಡ್‌ ಸಿದ್ಧಾಂತವಾಗಿದೆ. ದಕ್ಷಿಣದ ಕ್ಯಾಕಸ್‌ನಲ್ಲಿ 8100 ವರ್ಷಗಳ ಹಿಂದೆ ಈ ಮೂಲ ಭಾಷೆ ಜನ್ಮ ತಾಳಿದೆ. ಉತ್ತರದಲ್ಲಿದ್ದ ಫಲವತ್ತಾದ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ ಇಂಡೊ ಯುರೋಪಿಯನ್ ಭಾಷೆ ಬೆಳವಣಿಗೆ ಕಂಡಿದೆ. ಇದು ಇಂದಿನ ಟರ್ಕಿ, ಅರ್ಮೇನಿಯಾ, ಅಜರ್‌ಬೈಝಾನ್‌ ಹಾಗೂ ಇರಾನ್‌ ಒಳಗೊಂಡಿದೆ‘ ಎಂದಿದ್ದಾರೆ.

‘ಏಳು ಸಾವಿರ ವರ್ಷಗಳ ಹಿಂದೆ ಈ ಭಾಷೆಯು ಬೆಳೆದು ಅದರ ಐದು ಮುಖ್ಯ ಕವಲುಗಳು ಸೃಷ್ಟಿಯಾದವು. ಈ ಕವಲುಗಳು ಉತ್ತರದ ಹುಲ್ಲುಗಾವಲುಗಳತ್ತ ಮುಖ ಮಾಡಿದವು. ಜೀವನೋಪಾಯಕ್ಕೆ ಹೊರಟವರು ಇಂಡೊ–ಯುರೋಪಿಯನ್ ಭಾಷೆಯನ್ನು ಯುರೋಪ್‌ಗೆ ಕರೆತಂದರು. ಆದರೆ ಇವರು ಭಾರತ ಉಪಖಂಡಕ್ಕೆ ಈ ಭಾಷೆಯನ್ನು ಹೇಗೆ ತಂದರು ಎಂಬುದು ಇನ್ನೂ ಅಸ್ಪಷ್ಟವಾಗಿದೆ’ ಎಂದಿದ್ದಾರೆ.

ಭಾಷಾ ಸಂಶೋಧಕ ಪೌಲ್ ಹೆಗ್ಗರ್ಟಿ ಅವರ ಪ್ರಕಾರ, ‘ಪಶ್ಚಿಮ ಏಷ್ಯಾದ ಇರಾನ್‌ನಿಂದ ದಕ್ಷಿಣದ ದಿಕ್ಕಿನ ಮೂಲಕ ಈ ಮೂಲ ಭಾಷೆ ಭಾರತ ಉಪಖಂಡವನ್ನು ಪ್ರವೇಶಿಸಿರುವ ಸಾಧ್ಯತೆ ಇದೆ. ಇನ್ನೂ ಕೆಲವು ಸಿದ್ಧಾಂತಗಳಲ್ಲಿ ಮಧ್ಯ ಏಷ್ಯಾದಿಂದ ಈ ಭಾಷೆಯು ಕ್ಯಾಸ್ಪಿಯನ್ ಸಮುದ್ರದ ಉತ್ತರದಿಂದ ಉಪಖಂಡ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದೂ ಹೇಳಿವೆ’ ಎಂದಿದ್ದಾರೆ.

ಸಂಶೋಧಕರು ಸಂಗ್ರಹಿಸಿರುವ ಮಾಹಿತಿ ಪ್ರಕಾರ ಇಂಡೊ–ಯುರೋಪಿಯನ್ ಭಾಷೆಯ ಮೂಲ 161 ಭಾಷೆಗಳಲ್ಲಿವೆ. ಇದರಲ್ಲಿ 52 ಪ್ರಾಚೀನ ಭಾಷೆಗಳೂ ಸೇರಿವೆ ಎಂದಿದ್ದಾರೆ. ಭಾಷೆಗಳ ವಂಶವೃಕ್ಷಗಳನ್ನು ತರ್ಕಶಾಸ್ತ್ರದ ಅಧ್ಯಯನ ಆಧಾರದಲ್ಲಿ ತಜ್ಞರು ಸಿದ್ಧಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಇಂಡೊ–ಯುರೋಪಿಯನ್ ಭಾಷೆಗಳಿಗೆ ಶಾಸ್ತ್ರೀಯ ಲ್ಯಾಟಿನ್‌ ಅಥವಾ ವೇದಿಕ್ ಸಂಸ್ಕೃತ ಮೂಲವೇ ಎಂಬುದರ ಕುರಿತೂ ಈ ಸಿದ್ಧಾಂತ ಬೆಳಕು ಚೆಲ್ಲಿದೆ.

ಆಧುನಿಕ ಇಂಡಿಕ್ ಭಾಷೆಗೆ ಸಂಸ್ಕೃತದ ವೇದಗಳು ಮೂಲ ಅಲ್ಲವೇ ಅಲ್ಲ ಎಂದು ಈ ಅಧ್ಯಯನ ಹೇಳಿದೆ. ಆದರೆ ದೂರದ ಸೋದರ ಸಂಬಂಧ ಹೊಂದಿದೆ ಎಂದು ಹೇಳಲಾಗಿದೆ. ಪ್ರಾಕೃತ ಭಾಷೆಯೂ ಮಧ್ಯಕಾಲದ ಭಾರತದ್ದಾಗಿದ್ದು, ಇದೂ ಸಂಸ್ಕೃತದಿಂದ ಬಂದಿದ್ದಲ್ಲ’ ಎಂದು ಅಧ್ಯಯನ ಸ್ಪಷ್ಟಪಡಿಸಿದೆ.

‘ಈ ಪ್ರಾಚೀನ ಭಾಷೆಗಳು ಎಲ್ಲಾ ಇಂಡಿಕ್ ಭಾಷೆಗಳೊಂದಿಗೂ ಸಮೀಪದ ಸಂಬಂಧ ಹೊಂದಿವೆ. ಆದರೆ ಅವುಗಳೊಂದಿಗೆ ನೇರ ಸಂಬಂಧವನ್ನು ಹೊಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT