ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ | ಶೆಹಬಾಜ್ ಶರೀಫ್‌ ಪಾಕಿಸ್ತಾನದ ಪ್ರಧಾನಿಯಾಗಿ 2ನೇ ಬಾರಿ ಪ್ರಮಾಣ

Published 4 ಮಾರ್ಚ್ 2024, 11:43 IST
Last Updated 4 ಮಾರ್ಚ್ 2024, 12:08 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಆರ್ಥಿಕತೆ ಹಾಗೂ ಭದ್ರತೆಯ ವಿಷಯದಲ್ಲಿ ಅತ್ಯಂತ ಕಷ್ಟಕರ ಪರಿಸ್ಥಿತಿ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಶೆಹಬಾಜ್ ಶರೀಫ್ ಅವರು 2022ರ ನಂತರ 2ನೇ ಬಾರಿ ಪ್ರಧಾನಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

ಪಾಕಿಸ್ತಾನದ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 72 ವರ್ಷದ ಶೆಹಬಾಜ್ ಅವರಿಗೆ ರಾಷ್ಟ್ರಪತಿ ಆರೀಫ್ ಅಲ್ವಿ ಅವರು ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಪಿಎಂಎಲ್‌–ಎನ್ ಪಕ್ಷದ ಅಧ್ಯಕ್ಷ ನವಾಜ್ ಶರೀಫ್‌, ಪಂಜಾಬ್ ಮುಖ್ಯಮಂತ್ರಿ ಮರಿಯಮ್ ನವಾಜ್, ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಮೂರೂ ಸೇನೆಯ ಮುಖ್ಯಸ್ಥರು, ರಾಜತಾಂತ್ರಿಕರು, ಮುಂಚೂಣಿಯ ಕೈಗಾರಿಕೋದ್ಯಮಿಗಳು, ನಾಗರಿಕ ಸಮಾಜದ ಪ್ರಮುಖರು ಮತ್ತು ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು. ಹಂಗಾಮಿ ಪ್ರಧಾನಿ ಅನ್ವರುಲ್‌ ಹಕ್ ಕಾಕರ್ ಕೂಡಾ ಇದ್ದರು.

2022ರಲ್ಲಿ ಪಾಕಿಸ್ತಾನದಲ್ಲಿದ್ದ ಸಮ್ಮಿಶ್ರ ಸರ್ಕಾರದಲ್ಲೂ ಶೆಹಬಾಜ್ ಅವರು ಪ್ರಧಾನಿಯಾಗಿದ್ದರು. ಆಗ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ವಿರುದ್ಧ ವಿಶ್ವಾಸಮತ ಯಾಚನೆಯಲ್ಲಿ ಗೆದ್ದಿದ್ದ ಶೆಹಬಾಜ್ ಪ್ರಧಾನಿ ಹುದ್ದೆಗೆ ಏರಿದ್ದರು. ಆದರೆ ಆ ಸಂದರ್ಭದಲ್ಲಿ ಅನಾರೋಗ್ಯದಿಂದಾಗಿ ಅಲ್ವಿ ಅವರು ಪ್ರಮಾಣವಚನ ಬೋಧಿಸಿರಲಿಲ್ಲ. ಹೀಗಾಗಿ ಸೆನೆಟ್ ಅಧ್ಯಕ್ಷ ಸಾದಿಕ್ ಸಂಜರಾನಿ ಅವರು ಪ್ರತಿಜ್ಞಾವಿಧಿ ಬೋಧಿಸಿದ್ದರು.

ಈ ಬಾರಿ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣ, ಪಾಕಿಸ್ತಾನ ಮುಸ್ಲಿಂ ಲೀಗ್–ನವಾಜ್ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸೇರಿ ಸರ್ಕಾರ ರಚಿಸಿವೆ. ಸಂಸತ್‌ನಲ್ಲಿ ಭಾನುವಾರ ನಡೆದ ಕಲಾಪದಲ್ಲಿ ವಿರೋಧ ಪಕ್ಷಗಳ ಘೋಷಣೆಯ ನಡುವೆಯೂ ಶೆಹಬಾಜ್ ಅವರು ಸುಲಭವಾಗಿ ಜಯ ಸಾಧಿಸಿ ಪ್ರಧಾನಿ ಹುದ್ದೆಯ ಹಾದಿಯನ್ನು ಸುಗಮವಾಗಿಸಿಕೊಂಡರು.

ಸಂಸತ್ತಿನ ಒಟ್ಟು 336 ಸಂಖ್ಯೆಯಲ್ಲಿ ಪಿಎಂಎಲ್‌–ಎನ್ ಹಾಗೂ ಪಿಪಿಪಿ ಜತೆಗೂಡಿ 201 ಮತಗಳನ್ನು ಶೆಹಬಾಜ್ ಪರವಾಗಿ ನೀಡಿದರು. ಇಮ್ರಾನ್ ಖಾನ್ ಅವರ ತೆಹರೀಕ್–ಎ–ಇನ್ಸಾಫ್‌ (ಪಿಟಿಐ) ಪಕ್ಷದ ಪರ ಅಭ್ಯರ್ಥಿ ಒಮರ್ ಅಯೂಬ್ ಖಾನ್ ಅವರು 92 ಮತಗಳನ್ನಷ್ಟೇ ಪಡೆದು ಪರಾಭವಗೊಂಡರು.

ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ಶೆಹಬಾಜ್ ಶರೀಫ್, ‘ಸಂಕಷ್ಟ ಸ್ಥಿತಿಯಲ್ಲಿರುವ ದೇಶದ ಆರ್ಥಿಕತೆಯನ್ನು ಸಹಜ ಸ್ಥಿತಿಗೆ ತರಲು ಕೆಲವೊಂದು ಪರಿಣಾಮಕಾರಿ ಬದಲಾವಣೆ ತರುವುದು ಅಗತ್ಯ. ಜತೆಗೆ ನೆರೆಯ ರಾಷ್ಟ್ರಗಳೊಂದಿಗೆ ಶಾಂತಿಯ ಮಾತುಕತೆ ಮತ್ತು ಉತ್ತಮ ಬಾಂಧವ್ಯ ಹೊಂದುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಲಾಹೋರ್‌ನಲ್ಲಿ 1951ರಲ್ಲಿ ಕಾಶ್ಮೀರಿ ಕುಟುಂಬದಲ್ಲಿ ಜನಿಸಿದ ಶೆಹಬಾಜ್ ಅವರು ಪಂಜಾಬಿ ಮಾತನಾಡುವವರು. ಲಾಹೋರ್‌ನಲ್ಲಿರುವ ಸರ್ಕಾರಿ ಕಾಲೇಜು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಅವರ ಪೂರ್ವಿಕರು ಕಾಶ್ಮೀರದ ಅನಂತನಾಗ್‌ ಮೂಲದವರಾದರೂ, ಪಾಕಿಸ್ತಾನಕ್ಕೆ ಸ್ಥಳಾಂತರಗೊಳ್ಳುವ ಮೊದಲು ವ್ಯಾಪಾರ ಸಂಬಂಧ ಇವರು ಅಮೃತಸರ ಜಿಲ್ಲೆಯ ಜತಿಉಮ್ರಾ ಗ್ರಾಮದಲ್ಲಿ ನೆಲೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT