ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಪ್ರಯತ್ನಕ್ಕೆ ಬೆಂಬಲ; ಪಾಕಿಸ್ತಾನಿ ವರದಿಗಾರನ ಪ್ರಶ್ನೆಗೆ ಅಮೆರಿಕ ಉತ್ತರ

Published 26 ಜುಲೈ 2023, 7:25 IST
Last Updated 26 ಜುಲೈ 2023, 7:25 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಮಣಿಪುರದಲ್ಲಿ ಇತ್ತೀಚೆಗೆ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ, ಹಲ್ಲೆ ನಡೆಸಿದ ಪ್ರಕರಣ ಕುರಿತಂತೆ ಆಘಾತ ವ್ಯಕ್ತಪಡಿಸಿರುವ ಅಮೆರಿಕ, ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಭಾರತ ಕೈಗೊಂಡಿರುವ ಕ್ರಮಗಳನ್ನು ಬೆಂಬಲಿಸುತ್ತದೆ’ ಎಂದು ಅಧ್ಯಕ್ಷ ಜೋ ಬೈಡನ್ ಕಚೇರಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಸರ್ಕಾರದ ಉಪ ವಕ್ತಾರ ವೇದಾಂತ ಪಟೇಲ್ ಅವರು ಮಾಧ್ಯಮಗೋಷ್ಠಿಯಲ್ಲಿ ಪಾಕಿಸ್ತಾನಿ ವರದಿಗಾರರೊಬ್ಬರ ಪ್ರಶ್ನೆಗೆ ಉತ್ತರಿಸಿ, ‘ಮಹಿಳೆಯರ ಬೆತ್ತಲುಗೊಳಿಸಿ, ಅವರ ಮೇಲೆ ದೌರ್ಜನ್ಯ ಎಸಗಿದ ದೃಶ್ಯ ಆಘಾತ ಉಂಟು ಮಾಡಿದೆ. ದೌರ್ಜನ್ಯಕ್ಕೊಳಗಾದವರು ಹಾಗೂ ಅವರ ಕುಟುಂಬ ವರ್ಗದವರೆಡೆ ನಮ್ಮ ಸಹಾನುಭೂತಿ ಇದೆ. ಇಂಥ ಲಿಂಗಾಧಾರಿತ ಹಿಂಸಾಚಾರಗಳನ್ನು ನಿಯಂತ್ರಿಸಲು ಹಾಗೂ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ಅಮೆರಿಕದ ಬೆಂಬಲವಿದೆ’ ಎಂದಿದ್ದಾರೆ.

‘ಮಹಿಳೆಯರ ಮೇಲಿನ ಇಂಥ ಹಲ್ಲೆ ಹೇಯ ಮತ್ತು ನಾಚಿಕೆಗೇಡಿನದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಮಣಿಪುರದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲು, ಮಾನವೀಯ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಾಗೂ ಜೀವ ಮತ್ತು ಆಸ್ತಿಪಾಸ್ತಿ ಉಳಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಅಮೆರಿಕ ಬೆಂಬಲಿಸುತ್ತದೆ’ ಎಂದು ಪಟೇಲ್ ಹೇಳಿದ್ದಾರೆ.

ಮಣಿಪುರ ಗಲಭೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಘಟನೆ ಕುರಿತು ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದರು. ದೇಶದ 140 ಕೋಟಿ ಭಾರತೀಯರು ಈ ಒಂದು ಘಟನೆಯಿಂದ ತಲೆತಗ್ಗಿಸುವಂತಾಗಿದೆ. ಅಪರಾಧಿಗಳು ಯಾರೇ ಆಗಿರಲಿ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದು ಗುಡುಗಿದ್ದರು.

ಪ್ರಧಾನಿಯ ಪ್ರತಿಕ್ರಿಯೆಯನ್ನು ಕಾಂಗ್ರೆಸ್, ‘ಅತಿ ಚಿಕ್ಕ ಹಾಗೂ ಅತಿ ವಿಳಂಬ’ ಎಂದು ಛೇಡಿಸಿತ್ತು. ಮೇ 3ರಂದು ಆರಂಭವಾದ ಮಣಿಪುರ ಗಲಭೆಯಲ್ಲಿ ಈವರೆಗೂ 160ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಲವರು ತಮ್ಮ ಬದುಕನ್ನು ಕಳೆದುಕೊಂಡಿದ್ದಾರೆ. ನೂರಾರು ಜನ ಗಾಯಗೊಂಡಿದ್ದಾರೆ. 

ಮೈಥೇಯಿ ಸಮುದಾಯವು ಪರಿಶಿಷ್ಟ ಪಂಗಡ ಸ್ಥಾನಮಾನ ಕೋರಿ ನಡೆಸಿದ ಮೆರವಣಿಗೆ ಹಿಂಸಾಚಾರ ಸ್ವರೂಪ ಪಡೆದ ಬೆನ್ನಲ್ಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಮಣಿಪುರದ ಶೇ 53ರಷ್ಟು ಜನಸಂಖ್ಯೆ ಇರುವ ಮೈಥೇಯಿ ಸಮುದಾಯ ಇಂಫಾಲಾ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಶೇ 40ರಷ್ಟಿರುವ ನಾಗಾ ಹಾಗೂ ಕೂಕಿ ಸಮುದಾಯದವರು ಪರ್ವತ ಶ್ರೇಣಿಗಳಲ್ಲಿ ವಾಸಿಸುತ್ತಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಮಣಿಪುರದ ನಿವಾಸಿಗಳು ಭಾರತದಲ್ಲಿನ ಈ ಗಲಭೆಯನ್ನು ಶೀಘ್ರದಲ್ಲಿ ಕೊನೆಗಾಣಿಸಲು ಆಗ್ರಹಿಸಿದ್ದಾರೆ. ಜತೆಗೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆಯೂ ಒತ್ತಾಯಿಸಿದ್ದಾರೆ. ಆ ಮೂಲಕ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕೋರಿದ್ದಾರೆ.

ಉತ್ತರ ಮಣಿಪುರದ ಬುಡಕಟ್ಟು ಸಮುದಾಯ ಸಂಘದ ಅಧ್ಯಕ್ಷೆ ಫ್ಲಾರೆನ್ಸ್‌ ಲೋ ಅವರು ಪ್ರತಿಕ್ರಿಯಿಸಿ, ‘ಈ ವಿಷಯ ಕುರಿತು ಮಾತನಾಡಲು ಮನಸ್ಸು ಭಾರವಾಗುತ್ತಿದೆ. ಈ ಜಗತ್ತಿನ ಪ್ರಜೆಗಳಾಗಿ ಇದನ್ನು ನಡೆಯಲು ಹೇಗೆ ಬಿಟ್ಟೆವು? ನಾವೇನು ಮಾಡಬಹುದು? ಎಂದಿರುವ ಅವರು, ಭಾರತದ ಎದುರು ಇರುವ ಸರಳ ಮಾರ್ಗೋಪಾಯವೆಂದರೆ ರಾಷ್ಟ್ರಪತಿ ಆಳ್ವಿಕೆ. ಆದರೆ ಸರ್ಕಾರ ತನ್ನದೇ ಆದ ಕಾರಣಗಳಿಗಾಗಿ ಹಾಗೆ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ಪ್ರೊಡಕ್ಷನ್ ಮ್ಯಾನೇಜ್ಮೆಂಟ್‌ ವಿಷಯದ ಪ್ರಾಧ್ಯಾಪಕರಾಗಿರುವ ಫ್ಲಾರೆನ್ಸ್‌, ಉತ್ತರ ಪ್ರದೇಶ ಕೇಡರ್‌ನ ನಿವೃತ್ತ ಐಪಿಎಸ್‌ ಅಧಿಕಾರಿ ಪುತ್ರಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT