ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಮುಖ್ಯಸ್ಥ ಜೇ ವೈ ಲೀಗೆ 30 ತಿಂಗಳು ಜೈಲು ಶಿಕ್ಷೆ

Last Updated 18 ಜನವರಿ 2021, 7:47 IST
ಅಕ್ಷರ ಗಾತ್ರ

ಸೋಲ್‌: ದಕ್ಷಿಣ ಕೊರಿಯಾ ಮೂಲದ 'ಸ್ಯಾಮ್‌ಸಂಗ್‌' ಉದ್ಯಮ ಸಾಮ್ರಾಜ್ಯದ ಉಪಾಧ್ಯಕ್ಷ ಜೇ ವೈ.ಲೀ (ಲೀ ಜೇ ಯಾಂಗ್) ಅವರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಎರಡೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಸ್ಮಾರ್ಟ್‌ಫೋನ್‌ ಹಾಗೂ ಮೆಮೊರಿ ಚಿಪ್‌ ತಯಾರಿಸುವ ಜಗತ್ತಿನ ಅತಿ ದೊಡ್ಡ ಸಂಸ್ಥೆಯಾಗಿರುವ ಸ್ಯಾಮ್‌ಸಂಗ್‌ನ ಮುಖ್ಯಸ್ಥ ಸ್ಥಾನದಲ್ಲಿರುವ ಜೇ ವೈ.ಲೀಗೆ (52) ದಕ್ಷಿಣ ಕೊರಿಯಾ ಕೋರ್ಟ್‌ ಸೋಮವಾರ 30 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಸ್ಯಾಮ್‌ಸಂಗ್‌ ಮುಖ್ಯಸ್ಥರಾಗಿದ್ದ ಲೀ ಕುನ್‌ ಹೀ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಧನರಾದರು. ಅನಂತರದಲ್ಲಿ ಸಂಸ್ಥೆಯ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಹೊಣೆಯನ್ನು ಅವರ ಪುತ್ರ ಜೇ ವೈ.ಲೀ ತೆಗೆದುಕೊಳ್ಳಬೇಕಿತ್ತು. ಆದರೆ, ಲಂಚ ನೀಡಿರುವ ಆರೋಪದಲ್ಲಿ ಈಗ ಲೀ ಮತ್ತೆ ಶಿಕ್ಷೆಗೆ ಒಳಗಾಗಿದ್ದಾರೆ.

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷೆ ಪಾರ್ಕ್‌ ಗುನ್‌ ಹೇ ಅವರ ಸಹಚರರಿಗೆ ಲಂಚ ನೀಡಿದ ಪ್ರಕರಣದಲ್ಲಿ 2017ರಲ್ಲಿ ಲೀಗೆ ಐದು ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಲೀ ಆರೋಪವನ್ನು ಒಪ್ಪಿಕೊಂಡಿರಲಿಲ್ಲ ಹಾಗೂ ಶಿಕ್ಷೆಯ ಪ್ರಮಾಣ ಕಡಿಮೆಯಾಗಿ, ಒಂದು ವರ್ಷದ ಜೈಲು ಶಿಕ್ಷೆಯ ಬಳಿಕ ಬಿಡುಗಡೆಯಾಗಿದ್ದರು.

ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಸೋಲ್‌ ಹೈಕೋರ್ಟ್‌ಗೆ ವಾಪಸ್‌ ಕಳುಹಿಸಿತ್ತು. ಲಂಚ ನೀಡಿಕೆ, ಹಣ ದುರುಪಯೋಗ ಹಾಗೂ ಮರೆ ಮಾಚುವಿಕೆಗೆ ಸಂಬಂಧಿಸಿದ 7.8 ಮಿಲಿಯನ್‌ ಡಾಲರ್‌ (8.6 ಬಿಲಿಯನ್‌ ವೋನ್‌/ 57 ಕೋಟಿ ರೂಪಾಯಿ) ಪ್ರಕರಣದಲ್ಲಿ ಲೀ ತಪ್ಪಿತಸ್ತ ಎಂದು ಸೋಲ್‌ ಹೈ ಕೋರ್ಟ್‌ ತೀರ್ಪು ನೀಡಿದೆ.

ಈಗಾಗಲೇ ಒಂದು ವರ್ಷ ಶಿಕ್ಷೆ ಅನುಭವಿಸಿರುವುದರಿಂದ ಲೀ, ಇನ್ನು 18 ತಿಂಗಳು ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಒಂದು ವಾರದೊಳಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇದೆ.

ಕೋರ್ಟ್‌ ತೀರ್ಪು ಹೊರ ಬರುತ್ತಿದ್ದಂತೆ ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ನ ಷೇರು ಬೆಲೆ ಶೇ 4ರಷ್ಟು ಕುಸಿಯಿತು. ಇದರೊಂದಿಗೆ ಸ್ಯಾಮ್‌ಸಂಗ್‌ ಅಂಗಸಂಸ್ಥೆಗಳಾದ ಸ್ಯಾಮ್‌ಸಂಗ್‌ ಸಿಆ್ಯಂಡ್‌ಟಿ, ಸ್ಯಾಮ್‌ಸಂಗ್‌ ಲೈಫ್‌ ಇನ್ಶುರೆನ್ಸ್‌ ಹಾಗೂ ಸ್ಯಾಮ್‌ಸಂಗ್‌ ಎಸ್‌ಡಿಐ ಕಂಪನಿಯ ಷೇರುಗಳೂ ಕುಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT