ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಜಿಲ್‌ನಲ್ಲಿ ಭಾರಿ ಮಳೆ: 78 ಮಂದಿ ಸಾವು, 100ಕ್ಕೂ ಹೆಚ್ಚು ಜನ ನಾಪತ್ತೆ

Published 6 ಮೇ 2024, 2:19 IST
Last Updated 6 ಮೇ 2024, 2:19 IST
ಅಕ್ಷರ ಗಾತ್ರ

ಸಾವೊಪೌಲೊ: ಬ್ರೆಜಿಲ್‌ನ ದಕ್ಷಿಣ ಭಾಗದಲ್ಲಿರುವ ‘ರಿಯೊ ಗ್ರಂಡ್‌ ಡೊ ಸುಲ್‌’ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹದಲ್ಲಿ ಈವರೆಗೆ 78 ಜನರು ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ ಎಂದು ರಾಜ್ಯ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

ಪ್ರವಾಹದಿಂದಾಗಿ 1,15,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಬಹುತೇಕ ನಗರಗಳೂ ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕೆಲವು ನಗರಗಳಲ್ಲಿ 150 ವರ್ಷದಲ್ಲೇ ಅತ್ಯಧಿಕ ನೀರಿನ ಮಟ್ಟ ಕಾಣಿಸಿಕೊಂಡಿದೆ. ಕಳೆದ ಒಂದು ವಾರಕ್ಕಿಂತ ಹೆಚ್ಚು ಸಮಯದಿಂದ ನಿರ‌ಂತರವಾಗಿ ಮಳೆ ಸುರಿಯುತ್ತಲೇ ಇದೆ.

ಬೆಂಟೊ ಗೊನ್ಕಾಲ್ವ್ಸ್ ಮತ್ತು ಕೊಟಿಪೋರಾ ನಗರಗಳ ನಡುವಿನ ಜಲವಿದ್ಯುತ್ ಸ್ಥಾವರದಲ್ಲಿನ ಅಣೆಕಟ್ಟು ಭಾಗಶಃ ಕುಸಿದಿದೆ. ರಾಜ್ಯದಲ್ಲಿ ಇಂಟರ್‌ನೆಟ್‌, ದೂರವಾಣಿ ಸೇವೆ ಮತ್ತು ವಿದ್ಯುತ್‌ ಸೇವೆ ಸ್ಥಗಿತಗೊಂಡಿದ್ದು, ಜನರು ಪಕ್ಕದ ರಾಜ್ಯಗಳ ತಮ್ಮ ಸಂಬಂಧಿಕರ ಮನೆಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.

ಮನೆಗಳ ಛಾವಣಿ ಮೇಲೆ ಜನರು ಸಹಾಯಕ್ಕಾಗಿ ಕಾದು ಕುಳಿತುಕೊಂಡಿರುವ ಘಟನೆಗಳು ನಡೆದಿದ್ದು, ಹೆಲಿಕಾಪ್ಟರ್‌ಗಳು ನಿರಂತರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಲಾಜಿಯಾಡೊ ನಗರದಲ್ಲಿ ಆಸ್ಪತ್ರೆಗೆ ನೀರು ನುಗ್ಗದಂತೆ ತಡೆಯಲು ಜನರು ಮರಳು ಮತ್ತು ಕಲ್ಲುಗಳಿಂದ ಬ್ಯಾರಿಕೇಡ್‌ಗಳನ್ನು ನಿರ್ಮಿಸುತ್ತಿರುವ ದೃಶ್ಯ ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT