ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ಮುಸ್ಲಿಂ ವಿರೋಧಿ ಗಲಭೆ: ದೇಶದಾದ್ಯಂತ ಕರ್ಫ್ಯೂ, ಒಬ್ಬ ಸಾವು

Last Updated 14 ಮೇ 2019, 5:34 IST
ಅಕ್ಷರ ಗಾತ್ರ

ಕೊಲಂಬೊ: ಚರ್ಚ್‌ ಹಾಗೂ ಹೊಟೇಲ್‌ಗಳಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಯ ನಂತರದಲ್ಲಿಶ್ರೀಲಂಕಾದ ಬಹುತೇಕ ಕಡೆ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಮುಸ್ಲಿಂ ಜನರನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿದ್ದು, ಸೋಮವಾರ ರಾತ್ರಿ ಕರ್ಫ್ಯೂ ಹೇರಲಾಗಿದೆ. ಈ ನಡುವೆ ಗುಂಪು ಹಲ್ಲೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ಮುಸ್ಲಿಂ ವಿರೋಧಿ ಗಲಭೆ ಮೂರು ಜಿಲ್ಲೆಗಳಲ್ಲಿ ವ್ಯಾಪಿಸುತ್ತಿದ್ದಂತೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಭಾನುವಾರ ರಾತ್ರಿಯಿಂದ ಪುಟ್ಟಲಾಂ ಜಿಲ್ಲೆಯಲ್ಲಿ ಗಲಭೆ ಶುರುವಾಗಿದ್ದು, ಮರಗೆಲಸದ ಅಂಗಡಿಗೆ ನುಗ್ಗಿರುವ ಗುಂಪು ಚೂಪಾದ ಆಯುಧಗಳಿಂದ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದೆ. ಆಸ್ಪತ್ರೆಗೆ ದಾಖಲಿಸಿದರೂ ಆತ ಬದುಕುಳಿಯಲಿಲ್ಲ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ನಡೆದಿರುವ ಗಲಭೆಯಲ್ಲಿ ಇದು ದಾಖಲಾಗಿರುವ ಮೊದಲ ಸಾವು.

ಕೋಮು ಗಲಭೆ ಸೃಷ್ಟಿಸುವ ಮೂಲಕ ದೇಶದಲ್ಲಿ ಅಸ್ಥಿರತೆ ಉಂಟು ಮಾಡಲು ಕೆಲವು ಅನಾಮಧೇಯ ಗುಂಪುಗಳು ಪ್ರಯತ್ನಿಸುತ್ತಿವೆ. ಅವುಗಳನ್ನು ತಡೆಯಲು ಕರ್ಫ್ಯೂ ಘೋಷಿಸಿರುವುದಾಗಿ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ.

ಶ್ರೀಲಂಕಾದ ವಾಯವ್ಯ ಭಾಗದ ಹಲವು ಕಡೆ ಗುಂಪುಗಳು ಗಲಭೆ ಮೂಲಕ ತೊಂದರೆ ಸೃಷ್ಟಿಸುತ್ತಿವೆ, ಆಸ್ತಿ–ಪಾಸ್ತಿ ನಷ್ಟ ಮಾಡುತ್ತಿವೆ ಎಂದು ದೇಶವನ್ನು ಉದ್ದೇಶಿಸಿ ದೂರದರ್ಶನದಲ್ಲಿ ಪ್ರಧಾನಿ ಮಾತನಾಡಿದ್ದಾರೆ.

ಪೊಲೀಸರು ಹಾಗೂ ಭದ್ರತಾ ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿವೆ. ಆದರೂ ಈ ಗುಂಪುಗಳು ಗಲಭೆ ಉಂಟು ಮಾಡುವ ಪ್ರಯತ್ನ ಮುಂದುವರಿಸಿವೆ ಎಂದಿದ್ದಾರೆ.

ಏಪ್ರಿಲ್‌ 21ರಂದು ಮೂರು ಚರ್ಚ್‌ಗಳು ಹಾಗೂ ಮೂರು ಐಷಾರಾಮಿ ಹೊಟೇಲ್‌ಗಳ ಮೇಲೆ ದಾಳಿಯಲ್ಲಿ 258 ಜನರು ಸಾವಿಗೀಡಾಗಿದ್ದು, ಕನಿಷ್ಠ 500 ಮಂದಿ ಗಾಯಗೊಂಡಿದ್ದಾರೆ. ಆ ದಾಳಿಯ ಬಗ್ಗೆ ನಿರಂತರ ತನಿಖೆ ನಡೆಸಲಾಗುತ್ತಿದೆ.

ಗಲಭೆ ಪ್ರಕರಣಗಳು ದಾಖಲಾಗಿರುವ ಭಾಗಗಳಲ್ಲಿ ಜನರು ಮನೆಯಿಂದ ಹೊರಬರದಂತೆ ಆದೇಶಿಸಲಾಗಿದೆ. ಭಾನುವಾರ ಮತ್ತು ಸೋಮವಾರ ಕ್ರಿಶ್ಚಿಯನ್ನರು ಒಳಗೊಂಡ ಗುಂಪುಗಳು ಮುಸ್ಲಿಂ ಸಮುದಾಯದವರ ಒಡೆತನದ ಅಂಗಡಿಗಳು, ವಾಹನಗಳು ಹಾಗೂ ಮಸೀದಿಗಳ ಮೇಲೆ ದಾಳಿ ಮಾಡಿದ್ದಾರೆ.

ಸೋಮವಾರ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಸರ್ಕಾರ ನಿಷೇಧಿಸಿದೆ. ಸಾಮಾಜಿಕ ಮಾಧ್ಯಮಗಳ ಬಳಕೆಗೆ ನಿರ್ಬಂಧ ಹೇರುವಂತೆದೂರಸಂಪರ್ಕ ಪ್ರಾಧಿಕಾರವು ಅಂತರ್ಜಾಲ ಸೇವಾಧಾರರಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT