ಕೊಲಂಬೊ: 2022ರಲ್ಲಿ ಎದುರಾದ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ದಿಸ್ಸನಾಯಕೆ ಅವರು ಆರಂಭಿಕ ಮುನ್ನಡೆ ಗಳಿಸಿಕೊಂಡಿದ್ದಾರೆ.
ದಿಸ್ಸನಾಯಕೆ ಅವರು ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಒಕ್ಕೂಟದ ಅಭ್ಯರ್ಥಿಯಾಗಿ ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರೆಮುನಾ (ಜೆವಿಪಿ) ಪಕ್ಷದಿಂದ ಕಣಕ್ಕಿಳಿದಿದ್ದಾರೆ.
55 ವರ್ಷದ ದಿಸ್ಸನಾಯಕೆ ಅವರ ಜೆವಿಪಿ ಪಕ್ಷವು ಸಂಸತ್ತಿನಲ್ಲಿ ಕೇವಲ ಮೂರು ಸ್ಥಾನಗಳನ್ನು ಹೊಂದಿದೆ. ಆದಾಗ್ಯೂ, ಭ್ರಷ್ಟಾಚಾರ ವಿರೋಧಿ ಕಠಿಣ ಕ್ರಮಗಳು ಮತ್ತು ಜನಸ್ನೇಹಿ ನೀತಿಗಳನ್ನು ರೂಪಿಸುವುದಾಗಿ ದಿಸ್ಸನಾಯಕೆ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದರು.
ತಮ್ಮನ್ನು ತಾವು ಬದಲಾವಣೆಯ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದ ಅವರು, ಅಧಿಕಾರಕ್ಕೇರಿದರೆ ತಮ್ಮ ನೀತಿಗಳಿಗೆ ಜನಾದೇಶ ಪಡೆಯಲು 45 ದಿನಗಳಲ್ಲಿ ಸಂಸತ್ತನ್ನು ವಿಸರ್ಜಿಸುವುದಾಗಿಯೂ ಘೋಷಿಸಿದ್ದರು. ಇವು ಅವರಿಗೆ ಯಶಸ್ಸು ತಂದುಕೊಡುವ ಲಕ್ಷಣಗಳು ಗೋಚರಿಸಿವೆ.
10 ಲಕ್ಷದಷ್ಟು ಮತ ಎಣಿಕೆ ಮುಕ್ತಾಯವಾಗಿದೆ. ಈ ಪೈಕಿ ಶೇ 53ರಷ್ಟು ಮತಗಳು ದಿಸ್ಸನಾಯಕೆ ಅವರಿಗೆ ಲಭಿಸಿವೆ. ವಿರೋಧ ಪಕ್ಷದ ನಾಯಕ ಸಾಜಿತ್ ಪ್ರೇಮದಾಸ ಅವರು ಎರಡನೇ ಸ್ಥಾನದಲ್ಲಿದ್ದು, ಶೇ 22 ರಷ್ಟು ಮತಗಳನ್ನು ಗಿಟ್ಟಿಸಿದ್ದಾರೆ. ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಕೆಲವೇ ಸಾವಿರ ಮತಗಳನ್ನು ಪಡೆದುಕೊಂಡಿದ್ದು, 3ನೇ ಸ್ಥಾನದಲ್ಲಿದ್ದಾರೆ ಎಂಬುದು ಲಂಕಾ ಚುನಾವಣಾ ಆಯೋಗದ ಅಂಕಿ–ಅಂಶಗಳಿಂದ ತಿಳಿದುಬಂದಿದೆ.
1.7 ಕೋಟಿ ಅರ್ಹ ಮತದಾರರಿರುವ ದ್ವೀಪರಾಷ್ಟ್ರದಲ್ಲಿ ಶನಿವಾರವಷ್ಟೇ ಮತದಾನ ನಡೆದಿತ್ತು. ಶೇ 75ಕ್ಕೂ ಅಧಿಕ ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.