ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಆಹಾರ ಬಿಕ್ಕಟ್ಟು ಮತ್ತೆ ಉಲ್ಬಣ: ಭಾರತ ಕಳವಳ

ಕಪ್ಪು ಸಮುದ್ರ ಮಾರ್ಗ ಉಕ್ರೇನ್‌ ಧಾನ್ಯ ರಫ್ತು ಒಪ್ಪಂದದಿಂದ ಹೊರಗುಳಿದ ರಷ್ಯಾ
Last Updated 1 ನವೆಂಬರ್ 2022, 14:37 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ/ಇಸ್ತಾಂಬುಲ್‌ (ಪಿಟಿಐ/ರಾಯಿಟರ್ಸ್‌):ಉಕ್ರೇನ್‌ನಿಂದ ಆಹಾರಧಾನ್ಯಗಳ ರಫ್ತಿಗೆ ಅವಕಾಶ ಕಲ್ಪಿಸುವ ವಿಶ್ವಸಂಸ್ಥೆ ಮಧ್ಯಸ್ಥಿಕೆಯ ಒಪ್ಪಂದವು ರಷ್ಯಾದೊಂದಿಗಿನ ಸಂಘರ್ಷದ ಮಧ್ಯೆ ಅಮಾನತುಗೊಂಡಿರುವುದುಜಗತ್ತು, ಅದರಲ್ಲೂ ವಿಶೇಷವಾಗಿ ಜಾಗತಿಕ ದಕ್ಷಿಣವು ಎದುರಿಸುತ್ತಿರುವ ಆಹಾರ ಅಭದ್ರತೆ, ಇಂಧನ ಮತ್ತು ರಸಗೊಬ್ಬರ ಪೂರೈಕೆ ಸವಾಲುಗಳನ್ನು ಮತ್ತಷ್ಟು ಉಲ್ಬಣಗೊಳಿಸುವ ನಿರೀಕ್ಷೆ ಇದೆ ಎಂದು ಭಾರತ ಕಳವಳ ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಆರ್‌. ಮಧುಸೂದನ್‌, ವಿಶ್ವಸಂಸ್ಥೆಯ ಮಹಾ ಪ್ರಧಾನಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಅವರ ಪ್ರಯತ್ನದಲ್ಲಿ ಆಹಾರ ಧಾನ್ಯಗಳ ರಫ್ತಿಗೆ ನಡೆದಿದ್ದ ಒಪ್ಪಂದವು ಜಾಗತಿಕ ಆಹಾರ ಬಿಕ್ಕಟ್ಟನ್ನು ನಿವಾರಿಸುವ ಮತ್ತು ಆಹಾರ ಭದ್ರತೆ ಖಾತ್ರಿಪಡಿಸುವ ಗುರಿ ಹೊಂದಿತ್ತು. ಅವರ ಈ ಪ್ರಯತ್ನದ ಪರಿಣಾಮ, ಉಕ್ರೇನ್‌ನಿಂದ 90 ಲಕ್ಷ ಟನ್‌ಗೂ ಹೆಚ್ಚಿನ ಧಾನ್ಯಗಳು ಮತ್ತು ಆಹಾರ ಉತ್ಪನ್ನಗಳು ರಫ್ತು ಆಗಿತ್ತು ಎಂದರು.

ಭದ್ರತಾ ಮಂಡಳಿಯ ಸಭೆಯಲ್ಲಿ ಕಪ್ಪು ಸಮುದ್ರದ ಮೂಲಕ ಧಾನ್ಯಗಳ ರಫ್ತು ಕ್ರಮಗಳ ಕುರಿತ ವಿಚಾರವಾಗಿ ಸೋಮವಾರ ಮಾತನಾಡಿದ ಅವರು, ‘ಈವರೆಗೆ ಕಪ್ಪು ಸಮುದ್ರದ ಮೂಲಕ ಧಾನ್ಯ ಸಾಗಣೆಯ ಉಪಕ್ರಮಕ್ಕೆ ಎರಡೂ ರಾಷ್ಟ್ರಗಳು ತೋರಿದ ಸಹಕಾರವು ಉಕ್ರೇನ್‌ನಲ್ಲಿ ಶೀಘ್ರ ಶಾಂತಿ ನೆಲೆಸುವ ಭರವಸೆಯ ಕಿರಣ ಮೂಡಿಸಿತ್ತು. ಆದರೆ, ಈ ಒಪ್ಪಂದ ಅಮಾನತು ಆಗಿರುವುದು ಜಾಗತಿಕವಾಗಿ ಆಹಾರ ಬಿಕ್ಕಟ್ಟು ಉಲ್ಪಣಿಸುವ ಸಾಧ್ಯತೆ ಹೆಚ್ಚಿಸಿದೆ’ ಎಂದರು.

ಉಕ್ರೇನ್ ಮತ್ತು ರಷ್ಯಾದಿಂದ ಆಹಾರ ಧಾನ್ಯ, ರಸಗೊಬ್ಬರ ರಫ್ತಿಗೆ ಅನುಕೂಲವಾಗುವಂತೆ ಒಪ್ಪಂದ ನವೀಕರಣ ಮತ್ತು ಶಾಶ್ವತ ಉಪಕ್ರಮಗಳ ಅನುಷ್ಠಾನಕ್ಕಾಗಿ ಉಭಯ ರಾಷ್ಟ್ರಗಳೊಂದಿಗೆ ಗುಟೆರಸ್‌ ಅವರು ನಡೆಸುವ ಮಾತುಕತೆಗೆ ಭಾರತ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದು ಅವರು ಹೇಳಿದರು.

ಬಂದರು ತೊರೆದ ಹಡಗುಗಳು:

ರಷ್ಯಾ ಒಪ್ಪಂದದಿಂದ ಹಿಂದೆ ಸರಿದ ನಂತರ ಕಪ್ಪು ಸಮುದ್ರದ ಧಾನ್ಯ ರಫ್ತು ಒಪ್ಪಂದದಡಿ ಮೂರು ಹೊರ ಹೋಗುವ ಹಡಗುಗಳು ಉಕ್ರೇನ್‌ ಬಂದರುಗಳನ್ನುಮಂಗಳವಾರ ಮಧ್ಯಾಹ್ನ ತೊರೆದವು ಎಂದು ವಿಶ್ವಸಂಸ್ಥೆ ನೇತೃತ್ವದ ಸಮನ್ವಯ ಕೇಂದ್ರ ತಿಳಿಸಿದೆ. ಸೋಮವಾರ ಒಂದೇ ದಿನ 12 ಹಡಗುಗಳು ಉಕ್ರೇನ್ ಬಂದರುಗಳನ್ನು ತೊರೆದಿದ್ದವು.

ಕ್ರಿಮಿಯಾ ದ್ವೀಪದ ಕರಾವಳಿಯಲ್ಲಿ ತನ್ನ ನೌಕಾಪಡೆಯ ನೌಕೆಯ ಮೇಲೆ ಉಕ್ರೇನ್‌ ದಾಳಿ ನಡೆಸಿರುವುದಕ್ಕೆ ಪ್ರತೀಕಾರವಾಗಿ ರಷ್ಯಾ, ಈ ಒಪ್ಪಂದ ಅಮಾನತುಗೊಳಿಸುವುದಾಗಿ ಶನಿವಾರ ಪ್ರಕಟಿಸಿತ್ತು.

ನಾರ್ಡ್‌ ಸ್ಟ್ರೀಮ್‌ ಅನಿಲ ಕೊಳವೆ ಸ್ಫೋಟದಲ್ಲಿ ಬ್ರಿಟನ್‌ ಕೈವಾಡ: ರಷ್ಯಾ ಆರೋಪ

ಮಾಸ್ಕೊ (ಎಎಫ್‌ಪಿ):ನಾರ್ಡ್‌ ಸ್ಟ್ರೀಮ್‌ ಅನಿಲ ಸಾಗಣೆಯ ಕೊಳವೆ ಮಾರ್ಗ ಸ್ಫೋಟದಲ್ಲಿ ಬ್ರಿಟನ್‌ ನೇರವಾಗಿ ಭಾಗಿಯಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆಡಳಿತ ಕಚೇರಿ ಕ್ರೆಮ್ಲಿನ್‌ ಮಂಗಳವಾರ ಆರೋಪ ಮಾಡಿದೆ.

‘ಅನಿಲ ಕೊಳವೆ ಮಾರ್ಗ ರಷ್ಯಾಕ್ಕೆ ಅಷ್ಟೇ ಅಲ್ಲ, ಅಂತರರಾಷ್ಟ್ರೀಯವಾಗಿ ಮಹತ್ವದ ಇಂಧನ ಮೂಲಸೌಕರ್ಯವಾಗಿತ್ತು. ಇದರ ಮೇಲೆ ನಡೆದಿರುವ ವಿಧ್ವಂಸಕ ಮತ್ತು ಭಯೋತ್ಪಾದಕ ದಾಳಿಗೆ ಬ್ರಿಟನ್‌ ಮಿಲಿಟರಿ ತಜ್ಞರು ನಿರ್ದೇಶನ ನೀಡಿರುವುದು ಮತ್ತು ಸಹಕರಿಸಿರುವ ಸಾಕ್ಷ್ಯಗಳನ್ನು ನಮ್ಮ ಗುಪ್ತಚರ ಸೇವೆಗಳು ಕಲೆಹಾಕಿವೆ’ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೊವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT