ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದಿಯಲು ಬಂದು ಸಿಕ್ಕಿಬಿದ್ದಿದ್ದೇನೆ ಕಾಪಾಡಿ ಎಂದು ಪೊಲೀಸರಿಗೇ ಕರೆ ಮಾಡಿದ ಕಳ್ಳ

Last Updated 21 ಅಕ್ಟೋಬರ್ 2022, 13:50 IST
ಅಕ್ಷರ ಗಾತ್ರ

ಢಾಕಾ: ಕಳ್ಳತನ ಮಾಡಲು ಬಂದ ಕದೀಮ ಅಂಗಡಿಯಲ್ಲೇ ಸಿಲುಕಿಕೊಂಡಿದ್ದು, ಜನರ ಹೊಡೆತದಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ಕರೆ ಮಾಡಿ ಸಹಾಯ ಕೇಳಿರುವ ಪ್ರಕರಣ ಬಾಂಗ್ಲಾದೇಶದ ಬರಿಶಾಲ್‌ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಬಂದಾರ್‌ ಪ್ರದೇಶದಲ್ಲಿರುವ ಎ.ಆರ್. ಮಾರುಕಟ್ಟೆಯ ದಿನಸಿ ಅಂಗಡಿಯೊಂದಕ್ಕೆ ಗುರುವಾರ ರಾತ್ರಿ ನುಗ್ಗಿದ 40 ವರ್ಷದ ಕಳ್ಳ, ಹೊರಗೆ ಬರಲಾರದೆ ಸಿಲುಕಿಕೊಂಡಿದ್ದಾನೆ. ಮರುದಿನ ಬೆಳಗ್ಗೆ ಜನರು ಅಂಗಡಿ ಬಳಿ ಜಮಾಯಿಸಿದ್ದಾರೆ. ಇನ್ನು ಹೊರಗೆ ಹೋದರೆ, ಜನರು ಹಲ್ಲೆ ನಡೆಸಲಿದ್ದಾರೆ ಎಂಬುದನ್ನು ಅರಿತ ಚಾಲಾಕಿ ಕಳ್ಳ, ನೇರವಾಗಿ ಪೊಲೀಸ್‌ ಸಹಾಯವಾಣಿ ಸಂಖ್ಯೆಗೆ (999ಕ್ಕೆ) ಕರೆ ಮಾಡಿ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದಾನೆ. ಸುರಕ್ಷಿತವಾಗಿ ಹೊರಗೆ ಹೋಗಲು ನೆರವಾಗುವಂತೆ ಮನವಿ ಮಾಡಿದ್ದಾನೆ.

ಅಪಾಯವನ್ನರಿತ ಸ್ಥಳೀಯ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಬಂದಾರ್‌ ಪೊಲೀಸ್‌ ಠಾಣೆಯ ಅಧಿಕಾರಿ ಅಸಾದುಜ್‌ ಜಮಾನ್‌, 'ಅಪರಾಧದಲ್ಲಿ ಭಾಗಿಯಾದ ಕಳ್ಳನೇ ಪೊಲೀಸರಿಗೆ ಕರೆ ಮಾಡಿದ ಪ್ರಸಂಗ ನಡೆದಿರುವುದು ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲು' ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ ಇಷ್ಟೆಲ್ಲ ಆದರೂ ಅಂಗಡಿ ಮಾಲೀಕರಿಗೆ ವಿಚಾರ ಗೊತ್ತಾಗಿರಲಿಲ್ಲ. ಆದರೆ, ಶುಕ್ರವಾರ ಬೆಳಗ್ಗೆ ಎಂದಿನಂತೆ ಬಾಗಿಲು ತೆಗೆಯಲು ಬಂದಾಗ, ಪೊಲೀಸರು ಒಳಗೆ ತಪಾಸಣೆ ನಡೆಸುತ್ತಿರುವುದು ಮತ್ತು ಜನರು ಮಳಿಗೆ ಬಳಿ ಜಮಾಯಿಸಿರುವುದನ್ನು ನೋಡಿ ಅಚ್ಚರಿಗೊಂಡಿದ್ದಾರೆ.

ಬಳಿಕ ಮಾತನಾಡಿರುವ ಮಾಲೀಕ, 'ಪೊಲೀಸರು ನಾನು ಒಳಗೆ ಹೋಗದಂತೆ ಸ್ವಲ್ಪ ಸಮಯ ತಡೆದಿದ್ದರು. ಅದಾದ ಸ್ವಲ್ಪ ಹೊತ್ತಿಗೆ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಒಳಗಿನಿಂದ ಬಂದರು. ಇದಾದ ನಂತರ ಏನಾಗಿದೆ ಎಂಬುದು ಅರಿವಾಯಿತು' ಎಂದಿದ್ದಾರೆ.

ಸಿಕ್ಕಿ ಬಿದ್ದಿರುವ ದರೋಡೆಕೋರ 'ವೃತ್ತಿಪರ ಕಳ್ಳ'. ಆತನನ್ನು ಕಳ್ಳತನ ಯತ್ನ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT