ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನ್ಯಾಯಾಂಗ ವ್ಯವಸ್ಥೆಗೆ ಟ್ರಂಪ್ ತರಾಟೆ: ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ವರದಾನ?

Published 2 ಜೂನ್ 2024, 16:38 IST
Last Updated 2 ಜೂನ್ 2024, 16:38 IST
ಅಕ್ಷರ ಗಾತ್ರ

ನ್ಯೂಯಾರ್ಕ್: ‘ಹಷ್‌ ಮನಿ’ ಪ್ರಕರಣದಲ್ಲಿ ದಾಖಲೆಗಳನ್ನು ತಿರುಚಿದ್ದ ಆರೋಪ ಸಾಬೀತಾಗಿ, ಸ್ಥಳೀಯ ಕೋರ್ಟ್‌ ತಪ್ಪಿತಸ್ಥ ಎಂದು ನಿರ್ಧರಿಸಿದ ಹಿಂದೆಯೇ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ದೇಶದ ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಬೆಳವಣಿಗೆಯು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೇರಿದಂತೆ, ನಿರಂಕುಶಾಡಳಿತದ ಅನೇಕ ನಾಯಕರಿಗೆ ಅನುಕೂಲಕರವಾಗಿ ಪರಿಣಮಿಸಬಹುದು ಎಂದು ಪರಿಣತರು ವಿಶ್ಲೇಷಿಸಿದ್ದಾರೆ. 

‘ನನಗೇ ಇಂತಹ ಸ್ಥಿತಿ ಬರುವುದಾದರೆ, ಬೇರೆ ಯಾರಿಗಾದರೂ ಬರಬಹುದು’ ಎಂದು ಇಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಅವರು ಹೇಳಿದರು.

ಟ್ರಂಪ್‌ ಸೇರಿದಂತೆ ಮೂವರು ಮಾಜಿ ಅಧ್ಯಕ್ಷರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಫಿಯೊನಾ ಹಿಲ್‌ ಅವರು, ‘ಬಹುಶಃ ಸಾವಿರಾರು ಮೈಲಿ ದೂರದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಖುಷಿಯಿಂದ ತಮ್ಮ ಕೈ ಉಜ್ಜಿಕೊಳ್ಳುತ್ತಿರಬಹುದು’ ಎಂದು ಅಭಿಪ್ರಾಯಪಟ್ಟರು.

ಟ್ರಂಪ್‌ ಅವರು ನ್ಯಾಯಾಂಗ ವ್ಯವಸ್ಥೆ ಮೇಲೆ ದಾಳಿ ನಡೆಸಿರುವುದರಿಂದ ಪುಟಿನ್‌ ಅವರಿಗೆ ತಮ್ಮ ದೇಶದಲ್ಲಿ ವರ್ಚಸ್ಸು ವೃದ್ಧಿಸಿಕೊಳ್ಳಲು ನೆರವಾಗಲಿದೆ ಎಂದು ಚಿಂತಕರು ವಿಶ್ಲೇಷಿಸಿದ್ದಾರೆ. ಕೆಲ ನಿರಂಕುಶಾಧಿಕಾರಿ ದೇಶಗಳು ಈಗಾಗಲೇ ಟ್ರಂಪ್‌ ಅವರಿಗೆ ಈ ಸಂಬಂಧ ಬೆಂಬಲ ಘೋಷಿಸಿವೆ.

ತನ್ನ ವಿರುದ್ಧದ ತೀರ್ಪಿನ ಹಿನ್ನೆಲೆಯಲ್ಲಿ ಟ್ರಂಪ್‌ ಮಾಡಿರುವ ಟೀಕೆಯನ್ನು ರಷ್ಯಾ ಸ್ವಾಗತಿಸಿದೆ. ‘ನಿಯಮಾನುಸಾರ ಅಥವಾ ನಿಯಮಬಾಹಿರವಾಗಿ ರಾಜಕೀಯ ವೈರಿಯನ್ನು ತೆರೆಮರೆಗೆ ಸರಿಸುವ ಯತ್ನ ಇದಾಗಿದೆ’ ಎಂದು ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೊವ್ ಅವರು ಪ್ರತಿಕ್ರಿಯಿಸಿದ್ದಾರೆ. 

ತೀರ್ಪು ಹೊರಬಿದ್ದ ಹಿಂದೆಯೇ, ಟ್ರಂಪ್ ಅವರಿಗೆ ಕರೆ ಮಾಡಿದ್ದ ಹಂಗರಿಯ ಪ್ರಧಾನಮಂತ್ರಿ ವಿಕ್ಟರ್ ಆರ್ಬನ್ ಅವರು, ‘ಟ್ರಂಪ್ ಅವರನ್ನು ಗೌರವಾನ್ವಿತ ವ್ಯಕ್ತಿ ಎಂದು ಬಣ್ಣಿಸಿದ್ದು, ಹೋರಾಟವನ್ನು ಮುಂದುವರಿಸಬೇಕು ಎಂದು ಸಲಹೆ ಮಾಡಿದ್ದಾರೆ. 

ಚೀನಾದ ಸರ್ಕಾರಿ ಮಾಧ್ಯಮ ‘ಗ್ಲೋಬಲ್ ಟೈಮ್ಸ್‌’ ದೈನಿಕವು, ಟ್ರಂಪ್‌ ಅವರನ್ನು ಶಿಕ್ಷೆಗೆ ಗುರಿಪಡಿಸುವ ಕ್ರಮ ಈ ವರ್ಷದ ಅಧ್ಯಕ್ಷೀಯ ಚುನಾವಣೆಯನ್ನು ಅಣಕವಾಗಿಸಲಿದೆ ಎಂದು ವ್ಯಾಖ್ಯಾನಿಸಿದೆ. 

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು, ಈ ಬೆಳವಣಿಗೆಯು ತಮಗೊದಗಿದ ಅವಕಾಶ ಎಂದೇ ಭಾವಿಸುವ ಸಂಭವವಿದೆ. ಟ್ರಂಪ್‌ ಅವರು ಅಧ್ಯಕ್ಷರಾಗಿ ಚುನಾಯಿತರಾದ 2016ರ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪವಿತ್ತು ಎಂಬ ಆರೋಪಗಳಿವೆ. ಆಗ, ಹಿಲರಿ ಕ್ಲಿಂಟನ್ ಅವರ ಪ್ರಚಾರವನ್ನು ಮಸುಕಾಗಿಸಿ, ಟ್ರಂಪ್ ಪರ ಅಧಿಕಾರಿಗಳ ಮೇಲೆ ರಷ್ಯಾ ಪ್ರಭಾವ ಬೀರಿತ್ತು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT