ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿಷ್ಕ್ರಿಯ: ಕೊರೊಸಿ

Last Updated 29 ಜನವರಿ 2023, 13:27 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ, ನಿಷ್ಕ್ರಿಯವಾಗಿದೆ. ಕಾಯಂ ಸದಸ್ಯ ರಾಷ್ಟ್ರವೊಂದು ತನ್ನ ನೆರೆಯ ದೇಶದ ಮೇಲೆ ದಾಳಿ ಮಾಡಿದಾಗ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಕಾಪಾಡುವ ಮೂಲಭೂತ ಕಾರ್ಯ ನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧ್ಯಕ್ಷ ಕಸಬಾ ಕೊರೊಸಿ ಹೇಳಿದರು.

‘ವಿಶ್ವಸಂಸ್ಥೆಯ ವೀಟೋ ಅಧಿಕಾರ ಹೊಂದಿರುವ ಕಾಯಂ ಸದಸ್ಯ ರಾಷ್ಟ್ರ ರಷ್ಯಾ 2022ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ದಾಳಿ ನಡೆಸಿತ್ತು. ಉಕ್ರೇನ್‌ನ ಕೆಲವು ಪ್ರದೇಶಗಳನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳುವ ರಷ್ಯಾದ ನಿರ್ಧಾರವನ್ನು ಖಂಡಿಸಿ ನಿರ್ಣಯ ಕೈಗೊಂಡಾಗಲೂ ರಷ್ಯಾ ಅದನ್ನು ವಿರೋಧಿಸಿತು. ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಕಾಪಾಡುವ ಹಾಗೂ ಯುದ್ಧಗಳನ್ನು ತಡೆಗಟ್ಟುವ ಪ್ರಾಥಮಿಕ ಜವಾಬ್ದಾರಿಯೊಂದಿಗೆ ಅಂದು ಭದ್ರತಾ ಮಂಡಳಿಯನ್ನು ರಚಿಸಲಾಗಿತ್ತು. ಆದರೆ ಇಂದು ಅದನ್ನು ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಅವರು ಭಾರತಕ್ಕೆ ಭೇಟಿ ನೀಡುವ ಮೊದಲು ಸುದ್ದಿಸಂಸ್ಥೆಗೆ ತಿಳಿಸಿದರು.

ಪ್ರಸ್ತುತ ವಿಶ್ವಸಂಸ್ಥೆಯ 77 ನೇ ಸಾಮಾನ್ಯ ಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಹಂಗೇರಿಯ ರಾಜತಾಂತ್ರಿಕ ಕೊರೊಸಿ, ವಿಶ್ವಸಂಸ್ಥೆಯನ್ನು ಸುಧಾರಿಸಲು ಹೆಚ್ಚಿನ ಸಂಖ್ಯೆಯ ಸದಸ್ಯ ರಾಷ್ಟ್ರಗಳಿಂದ ಒತ್ತಡವಿದೆ ಎಂದು ಹೇಳಿದರು.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಆಹ್ವಾನದ ಮೇರೆಗೆ ಕೊರೊಸಿ ಮೂರು ದಿನಗಳ ಭೇಟಿಗಾಗಿ ಭಾನುವಾರ ಭಾರತಕ್ಕೆ ಆಗಮಿಸಿದರು.

****

ಅನ್ಯ ದೇಶಗಳಿಗೆ ಪರಿಹಾರ ಹುಡುಕುತ್ತಿರುವ ಭಾರತ

ವಿಶ್ವಸಂಸ್ಥೆ: ದಕ್ಷಿಣ ಭಾಗದ ಜಾಗತಿಕ ನಾಯಕ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ಹೇಳಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧ್ಯಕ್ಷ ಕಸಬಾ ಕೊರೊಸಿ, ವಿಶ್ವದಲ್ಲಿ ಪರಿವರ್ತನೆಯ ಅಗತ್ಯದ ಬಗ್ಗೆ ಭಾರತದ ಕಾರ್ಯತಂತ್ರದ ಚಿಂತನೆ ಮತ್ತು ವಿಶ್ವಸಂಸ್ಥೆಯ ಚಿಂತನೆಯ ನಡುವೆ ದೊಡ್ಡ ಹೋಲಿಕೆಗಳಿವೆ ಎಂದು ಹೇಳಿದ್ದಾರೆ.

‘ಈ ಜಗತ್ತಿಗೆ ಯಾವ ರೀತಿಯ ಪರಿವರ್ತನೆ ಅಗತ್ಯವಿದೆ ಮತ್ತು ಸಾಮಾನ್ಯ ಸಭೆಯಲ್ಲಿ ಈ ಸಂಸ್ಥೆಯನ್ನು ಹೇಗೆ ಪರಿವರ್ತಿಸಬೇಕು ಎಂಬ ವಿಚಾರದಲ್ಲಿ ಭಾರತೀಯ ಕಾರ್ಯತಂತ್ರಕ್ಕೂ, ವಿಶ್ವಸಂಸ್ಥೆಗೂ ಸಾಮ್ಯತೆ ಇದೆ. ಆದ್ದರಿಂದ, ನಾನು ಸಹಕಾರ ಪಡೆಯಲು ಭಾರತಕ್ಕೆ ಹೋಗುತ್ತಿದ್ದೇನೆ ಎಂಬ ಸಂದೇಶ ನೀಡುತ್ತೇನೆ’ ಎಂದು ಕೊರೊಸಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT