ಢಾಕಾ: ಬಾಂಗ್ಲಾದ ನಾಗರಿಕರಿಗೆ ಸಮಾನ ಮತ್ತು ಸೇರ್ಪಡೆಯುಕ್ತ ಭವಿಷ್ಯವನ್ನು ರೂಪಿಸಲು ಅಗತ್ಯವಿರುವ ಆರ್ಥಿಕ ಮತ್ತು ರಾಜಕೀಯ ಸಹಕಾರವನ್ನು ನೀಡುವ ಭರವಸೆಯನ್ನು ಅಮೆರಿಕ, ಭಾನುವಾರ ಬಾಂಗ್ಲಾದೇಶದ ಮಧ್ಯಂತರ ಸರ್ಕಾರಕ್ಕೆ ನೀಡಿದೆ.
ಪ್ರಮುಖ ಸುಧಾರಣೆಗಳ ಜಾರಿಗೆ ನೆರವು ನೀಡಬೇಕು ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಮಾಡಿದ್ದ ಮನವಿಗೆ ಹೀಗೆ ಪ್ರತಿಕ್ರಿಯಿಸಿದೆ.
ಅಮೆರಿಕದ ಖಜಾನೆ ಇಲಾಖೆಯ ಅಂತರರಾಷ್ಟ್ರೀಯ ಹಣಕಾಸು ವಿಭಾಗದ ಸಹಾಯಕ ಕಾರ್ಯದರ್ಶಿ ಬ್ರೆಂಟ್ ನೀಮನ್ ನೇತೃತ್ವದ, ಬಹು ಏಜೆನ್ಸಿಗಳ ಪ್ರತಿನಿಧಿಗಳನ್ನು ಒಳಗೊಂಡಿದ್ದ ನಿಯೋಗವು ಭಾನುವಾರ ಢಾಕಾಗೆ ಭೇಟಿ ನೀಡಿತ್ತು.
‘ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಪ್ರೊ. ಯೂನಸ್ ಅವರ ಜೊತೆಗಿನ ಭೇಟಿ ವೇಳೆ ನಿಯೋಗ ಈ ಭರವಸೆ ನೀಡಿತು’ ಎಂದು ಅಮೆರಿಕದ ರಾಯಭಾರ ಕಚೇರಿ ಹೇಳಿಕೆ ನೀಡಿದೆ.