ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಲ್ಗೇರಿಯಾದ ಉದ್ದೇಶಿತ ಗೊತ್ತುವಳಿಯಿಂದ ಲಾಭವಿಲ್ಲ: ಅಮೆರಿಕ

Published 30 ಮೇ 2024, 15:07 IST
Last Updated 30 ಮೇ 2024, 15:07 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಇಸ್ರೇಲ್‌ ಮತ್ತು ಹಮಾಸ್ ಬಂಡುಕೋರರ ನಡುವಿನ ಯುದ್ಧಕ್ಕೆ ಕದನವಿರಾಮ ಘೋಷಿಸುವ ಮತ್ತು ರಫಾ ನಗರದಲ್ಲಿ ಇಸ್ರೇಲ್ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉದ್ದೇಶಿತ ಗೊತ್ತುವಳಿಯಿಂದ ಯಾವುದೇ ಅನುಕೂಲವಾಗುವುದಿಲ್ಲ ಎಂದು ಅಮೆರಿಕ ಬುಧವಾರ ಅಭಿಪ್ರಾಯಪಟ್ಟಿದೆ.

ಮಧ್ಯಪ್ರಾಚ್ಯ ಮಾಸಿಕ ಸಭೆಗೂ ಮುನ್ನ ಸುದ್ದಿಗಾರರ ಎದುರು ಮಾತನಾಡಿದ ವಿಶ್ವಸಂಸ್ಥೆಯ ಅಮೆರಿಕದ ಉಪ ರಾಯಭಾರಿ ರಾಬರ್ಟ್‌ ವೂಡ್‌ ಅವರು, ‘ಮತ್ತೊಂದು ಗೊತ್ತುವಳಿಯು ಪ್ರಾಯೋಗಿಕವಾಗಿ ಯಾವುದೇ ಬದಲಾವಣೆಯನ್ನು ತರಲಾರದು’ ಎಂದು ಹೇಳಿದರು. 

ಗಾಜಾಪಟ್ಟಿಯ ರಾಫಾ ನಗರದಲ್ಲಿ ಇಸ್ರೇಲ್‌ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ಅಲ್ಗೇರಿಯಾವು ತನ್ನ 15 ಸದಸ್ಯ ದೇಶಗಳಿಗೆ ಈ ಕರಡು ಗೊತ್ತುವಳಿಯನ್ನು ಮಂಗಳವಾರ ಸಂಜೆಯೇ ನೀಡಿತ್ತು.

ಹೊಸ ಗೊತ್ತುವಳಿ ಕುರಿತು ತನ್ನ ಅಭಿಪ್ರಾಯ ತಿಳಿಸಿರುವ ಅಮೆರಿಕ, ‘ಈಗ ನಡೆಯುತ್ತಿರುವ ಕದನಕ್ಕೆ ತಾತ್ಕಾಲಿಕ ವಿರಾಮ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ. ಅಕ್ಟೋಬರ್‌ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ವೇಳೆ ಹಮಾಸ್‌ ಒತ್ತೆ ಇರಿಸಿಕೊಂಡಿದ್ದವರಲ್ಲಿ ಕನಿಷ್ಠ 125 ಮಂದಿಯನ್ನಾದರೂ ಈಗ ಬಿಡುಗಡೆಗೊಳಿಸಬೇಕು. ಬಳಿಕ, ದೀರ್ಘಾವಧಿ ಯೋಜನೆ ಕುರಿತು ಚಿಂತಿಸಬಹುದು’ ಎಂದು ಅಮೆರಿಕ ಹೇಳಿದೆ.

ಗೊತ್ತುವಳಿ ಅಗತ್ಯದ ಕುರಿತು ಭದ್ರತಾ ಮಂಡಳಿ ಸಭೆಯಲ್ಲಿ ಒತ್ತಿಹೇಳಿರುವ ವಿಶ್ವಸಂಸ್ಥೆಯ ಪ್ಯಾಲೆಸ್ಟೀನ್‌ನ ಉಪ ರಾಯಭಾರಿ ಮಾಜೆದ್‌ ಬಮ್ಯಾ, ‘ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವ ದಿಸೆಯಲ್ಲಿ ಇಸ್ರೇಲ್‌ ಮೇಲೆ ಒತ್ತಡ ಹೇರುವ ದೃಷ್ಟಿಯಿಂದ ಈ ಗೊತ್ತುವಳಿ ಮಹತ್ವ ಪಡೆದಿದೆ’ ಎಂದು ಹೇಳಿದರು. 

ವಿಶ್ವಸಂಸ್ಥೆಯ ಅಲ್ಗೇರಿಯಾ ರಾಯಭಾರಿ ಅಮರ್‌ ಬೆಂಡ್ಜಾಮ ಅವರು ಈ ಭದ್ರತಾ ಮಂಡಳಿ ಸಭೆಯಲ್ಲಿ ಗೊತ್ತುವಳಿಯನ್ನು ಹಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT