ಷಿಕಾಗೊ: ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರು ಗಂಭೀರವಲ್ಲದ ಮನುಷ್ಯ ಎಂದು ಕರೆದಿರುವ ಉಪಾಧ್ಯಕ್ಷೆ ಹಾಗೂ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್, ಒಂದು ವೇಳೆ ಟ್ರಂಪ್ ಅವರು ಇನ್ನೊಮ್ಮೆ ಅಧ್ಯಕ್ಷರಾದರೆ ಆಗುವ ಪರಿಣಾಮಗಳ ಬಗ್ಗೆ ಜನರಿಕೆ ಎಚ್ಚರಿಕೆ ನೀಡಿದ್ದಾರೆ.
ಷಿಕಾಗೊದಲ್ಲಿ ನಡೆದ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ, ಪಕ್ಷದ ನಾಮನಿರ್ದೇಶನ ಸ್ವೀಕರಿಸಿ ಅವರು ಮಾತನಾಡಿದರು.
‘ಟ್ರಂಪ್ ಅವರ ಎರಡನೇ ಅವಧಿ ಹೇಗಿರಲಿದೆ ಎನ್ನುವುದು ನಮಗೆ ತಿಳಿದಿದೆ. ಅವರು ಗಂಭೀರವಲ್ಲ ವ್ಯಕ್ತಿ. ಅವರನ್ನು ಮತ್ತೆ ಶ್ವೇತಭವನಕ್ಕೆ ಕಳುಹಿಸುವುದು ಗಂಭೀರ ವಿಷಯ. ಒಂದು ವೇಳೆ ಅವರು ಅಧ್ಯಕ್ಷರಾದರೆ, ಕ್ರಿಮಿನಲ್ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ಅವರ ವಿರುದ್ಧ ನೀಡಿರುವ ತೀರ್ಪಿನಿಂದ ಅವರು ವಿನಾಯಿತಿ ಪಡೆದುಕೊಳ್ಳಲಿದ್ದಾರೆ’ ಎಂದು ಕಮಲಾ ಹೇಳಿದ್ದಾರೆ.
‘ಅಮೆರಿಕದ ಯಶಸ್ಸಿಗೆ ಬಲವಾದ ಮಧ್ಯಮ ವರ್ಗ ನಿರ್ಣಾಯಕವಾಗಿದೆ. ಅವರಿಗೆ ಬಲ ತುಂಬುವುದು ನನ್ನ ಅಧ್ಯತೆಯಾಗಿದೆ. ಇದು ನನಗೆ ವೈಯಕ್ತಿಕ ಆದ್ಯತೆ ಕೂಡ. ಯಾಕೆಂದರೆ ನಾನೂ ಮಧ್ಯಮ ವರ್ಗದಿಂದಲೇ ಬಂದವಳು’ ಎಂದು ಹೇಳಿದ್ದಾರೆ.
‘ಪ್ರಿಯ ಅಮೆರಿಕನ್ನರೆ ನಾನು ನನ್ನ ದೇಶವನ್ನು ಹೃದಯದ ಅಂತರಾಳದಿಂದ ಪ‍್ರೀತಿಸುತ್ತೇನೆ. ರಾಷ್ಟ್ರವನ್ನು ನಿರ್ಮಿಸಿದ ನಿರ್ಭೀತ ನಂಬಿಕೆಯನ್ನು ನಾವು ಹಿಡಿದಿಟ್ಟುಕೊಳ್ಳುವ ಅಮೆರಿಕವನ್ನು ನಾನು ನೋಡುತ್ತೇನೆ. ಇದು ಇಡೀ ಜಗತ್ತಿಗೆ ಪ್ರೇರಣೆ. ಹೀಗಾಗಿಯೇ ನಮ್ಮ ದೇಶದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ನಮ್ಮ ಕೈಗೆ ಎಟುಕದ್ದು ಯಾವುದೂ ಇಲ್ಲ’ ಎಂದು ಹೇಳಿದ್ದಾರೆ.
ಈ ಹಿಂದಿನ ಕಹಿ, ಸಿನಿಕತನ ಮತ್ತು ವಿಭಜಕ ಕದನಗಳ ಹಿಂದೆ ಸರಿಯಿರಿ ಎಂದು ಅಮೆರಿಕನ್ನರಿಗೆ ಕರೆ ನೀಡಿದ ಅವರು, ತಮ್ಮ ನಾಮನಿರ್ದೇಶನವು ‘ಹೊಸ ಮಾರ್ಗವನ್ನು ರೂಪಿಸಲು ಒಂದು ಅವಕಾಶ’ ಎಂದು ಹೇಳಿದ್ದಾರೆ. ಅಲ್ಲದೆ ‘ನಾನು ಇಡೀ ಅಮೆರಿಕನ್ನರಿಗೆ ಅಧ್ಯಕ್ಷೆಯಾಗಿರುತ್ತೇನೆ ಎನ್ನುವ ಭರವಸೆ ನೀಡುತ್ತೇನೆ’ ಎಂದಿದ್ದಾರೆ.
(ವಿವಿಧ ಏಜೆನ್ಸಿಗಳ ಮಾಹಿತಿ ಸೇರಿಸಲಾಗಿದೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.