ಢಾಕಾ: ಸಂಕಷ್ಟದಲ್ಲಿರುವ ಹಿಂದೂ ಸಮುದಾಯದವನ್ನು ಮಂಗಳವಾರ ಭೇಟಿಯಾದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್, ‘ಮಧ್ಯಂತರ ಸರ್ಕಾರದ ಮೇಲೆ ವಿಶ್ವಾಸವಿಡುವಂತೆ’ ಮನವಿ ಮಾಡಿದ್ದಾರೆ.
ಢಾಕೇಶ್ವರಿ ದೇಗುಲದಲ್ಲಿ ಯೂನಸ್ ಅವರು ಹಿಂದೂಗಳೊಂದಿಗೆ ಮಾತುಕತೆ ನಡೆಸಿ, ‘ಹಕ್ಕುಗಳು ಎಲ್ಲರಿಗೂ ಸಮಾನವಾದದ್ದು. ತಾಳ್ಮೆಯಿಂದ ಯೋಚಿಸಿ ಬಳಿಕ ನಿರ್ಧಾರಕ್ಕೆ ಬನ್ನಿ. ನಿಮ್ಮ ರಕ್ಷಣೆ ಮಾಡುವಲ್ಲಿ ನಾವು ವಿಫಲವಾದರೆ ಬಳಿಕ ನಮ್ಮನ್ನು ಟೀಕಿಸಿ’ ಎಂದು ತಿಳಿಹೇಳಿದರು.
‘ಸಂವಿಧಾನದ ಪ್ರಕಾರ ನಾವು ಜನರನ್ನು ಮುಸ್ಲಿಂ, ಹಿಂದೂ ಮತ್ತು ಬೌದ್ಧರು ಎಂದು ನೋಡುವುದಿಲ್ಲ ಬದಲಾಗಿ ಮನುಷ್ಯರು ಎಂದು ಪರಿಗಣಿಸುತ್ತೇವೆ. ಆಡಳಿತ ವ್ಯವಸ್ಥೆ ಹದಗೆಟ್ಟಿರುವುದೆ ಎಲ್ಲ ಸಮಸ್ಯೆಗಳಿಗೆ ಕಾರಣ. ಆಡಳಿತ ವ್ಯವಸ್ಥೆಯನ್ನು ಸರಿಪಡಿಸಬೇಕಾದ ಅಗತ್ಯವಿದೆ’ ಎಂದು ಹೇಳಿದರು.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿ ಬಳಿಕ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಹಾಗೂ ಅವರ ಮನೆ, ಆಸ್ತಿ, ಅಂಗಡಿ ಮತ್ತು ದೇಗುಲಗಳ ಮೇಲೆ ಭೀಕರ ದಾಳಿ ನಡೆಯುತ್ತಿದೆ. ದಾಳಿಕೋರರಿಂದ ರಕ್ಷಣೆ ನೀಡುವಂತೆ ಆಗ್ರಹಿಸಿ ಕಳೆದ ವಾರಾಂತ್ಯದಲ್ಲಿ ಸಾವಿರಾರು ಹಿಂದೂಗಳು ಢಾಕಾದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದ್ದರು.