ಮಂಗಳವಾರ, ಏಪ್ರಿಲ್ 20, 2021
32 °C
ಕಳೆದ ವರ್ಷ ಇದೇ ಅವಧಿಯಲ್ಲಿ ಭೋರ್ಗರೆಯುತ್ತಿದ್ದ ನೀರು, ಸೌಂದರ್ಯ ಸವಿಯಲು ಹಾಜರಿತ್ತು ಪ್ರವಾಸಿಗರ ದಂಡು

ಭರಚುಕ್ಕಿ ಜಲಪಾತ ಭಣ ಭಣ

ಅವಿನ್ ಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಕಳೆದ ವರ್ಷ ಈ ಸಮಯದಲ್ಲಿ ನೀರಿನಿಂದ ಭೋರ್ಗರೆಯುತ್ತಿದ್ದ ತಾಲ್ಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತ, ಈ ಬಾರಿ ಮಳೆ ಕೊರತೆಯಿಂದ ನೀರಿಲ್ಲದೇ ಭಣಗುಡುತ್ತಿದೆ. ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ.

ಕಳೆದ ವರ್ಷ ಜೂನ್‌–ಜುಲೈ ತಿಂಗಳ ಪ್ರತಿ ದಿನ ಪ್ರವಾಸಿಗರ ದಂಡೇ ಭರಚುಕ್ಕಿಯಲ್ಲಿ ನೆರೆಯುತ್ತಿತ್ತು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಕಿಲೋಮೀಟರ್‌ಗಟ್ಟಲೆ ದೂರಕ್ಕೆ ವಾಹನ ದಟ್ಟಣೆ ಉಂಟಾಗಿತ್ತು. ಈ ಸಲ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ. 

ಮುಂಗಾರು ಅವಧಿಯಲ್ಲಿ ಜಲಧಾರೆಯ ಸೊಬಗನ್ನು ಸವಿಯಲು ಪ್ರತಿ ದಿನ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಈ ಬಾರಿ ಮುಂಗಾರು ಕೈಕೊಟ್ಟಿರುವುದರಿಂದ ಜಲಾಶಯಗಳಲ್ಲಿ ನೀರು ತುಂಬಿಲ್ಲ. ಕಾವೇರಿ ನದಿಯಲ್ಲೂ ಹೆಚ್ಚು ನೀರು ಹರಿಯುತ್ತಿಲ್ಲ. ಹಾಗಾಗಿ, ಜಲಪಾತ ಕಳಾಹೀನವಾಗಿದೆ. ದೂರದೂರಿನಿಂದ ಬೆರಳೆಣಿಕೆಯಷ್ಟು ಪ್ರವಾಸಿಗರು ಮಾತ್ರ ಬರುತ್ತಿದ್ದಾರೆ. 

ಜೀವನೋಪಾಯಕ್ಕೆ ಬರೆ: ಈ ಪ್ರವಾಸಿ ತಾಣವನ್ನೇ ನಂಬಿಕೊಂಡು ಹತ್ತಾರು ಸಣ್ಣ ವ್ಯಾಪಾರಿಗಳು ಬದುಕು ಕಟ್ಟಿಕೊಂಡಿದ್ದಾರೆ. ಪ್ರವಾಸಿಗರು ಇಲ್ಲದಿರುವುದರಿಂದ ವ್ಯಾಪಾರ ನಡೆಯುತ್ತಿಲ್ಲ. ಅವರು ಜೀವನೋ‍ಪಯಕ್ಕೆ ಬೇರೆ ದಾರಿ ಹಿಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಎಗ್ಗಿಲ್ಲದೆ ಸಾಗಿದ ಅಕ್ರಮ ಚಟುವಟಿಕೆ: ಪ್ರವಾಸಿಗರು ಇಲ್ಲದಿದ್ದರೂ ಅನೈತಿಕ ಚಟುವಟಿಕೆ ನಡೆಸುವವರು, ಕುಡುಕರು ಹಾವಳಿ ಇಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಪ್ರವಾಸದ ನೆಪದಲ್ಲಿ ಮದ್ಯ ಸೇವಿಸಿ ಮಜಾ ಮಾಡುವುದಕ್ಕಾಗಿ ಇಲ್ಲಿಗೆ ಬರುವವರು ಇದ್ದಾರೆ. ನೋಡಿದಲ್ಲೆಲ್ಲ ಮದ್ಯದ ಬಾಟಲಿಗಳು ಕಾಣಸಿಗುತ್ತವೆ. ಮಲೆಮಹದೇಶ್ವರ ವನ್ಯಧಾಮದ ಸಿಬ್ಬಂದಿ ಇಲ್ಲಿ ಕರ್ತವ್ಯದಲ್ಲಿದ್ದರೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. 

ಜಲಪಾತಕ್ಕೆ ಹೋಗುವ ದಾರಿಯಲ್ಲಿ ಇರುವ ಚೆಕ್‌ಪೋಸ್ಟ್‌ನಲ್ಲಿ ಪ್ರವಾಸಿಗರಿಂದ ಶುಲ್ಕ ಪಡೆಯಲು ಮಾತ್ರ ಅವರು ಕರ್ತವ್ಯ ನಿರ್ವಹಿಸುವಂತೆ ಆಗಿದೆ. ವಾಹನಗಳನ್ನು ಸರಿಯಾಗಿ ತಪಾಸಣೆಗೆ ಒಳಪಡಿಸುವ ಕೆಲಸ ಮಾಡುತ್ತಿಲ್ಲ. ಪ್ರವಾಸಿ ತಾಣಕ್ಕೆ ಬರುವ ಪ್ರೇಮಿಗಳ ಸಂಖ್ಯೆ ಜಾಸ್ತಿ ಆಗುತ್ತಿದ್ದು, ಅವರ ಮೇಲೆ ನಿಗಾ ಇಡುವ ಕೆಲಸವನ್ನು ಸಿಬ್ಬಂದಿ ಮಾಡಬೇಕು ಎಂದು ಸ್ಥಳೀಯರು ಹೇಳುತ್ತಾರೆ. 

ಕುಡಿಯುವ ನೀರು ಮತ್ತು ಶೌಚಾಲಯಗಳ ಕೊರತೆ: ಬರುವ ಪ್ರವಾಸಿಗರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲು ಪ್ರವಾಸೋದ್ಯಮ ಇಲಾಖೆ ಇನ್ನೂ ಕ್ರಮ ಕೈಗೊಂಡಿಲ್ಲ. ಹೊಸದಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದರೂ ಇನ್ನೂ ಉದ್ಘಾಟನೆಯಾಗಿಲ್ಲ. 

ಪ್ಲಾಸ್ಟಿಕ್‌ ಮುಕ್ತ ಪ್ರದೇಶ: ಘೋಷಣೆಗಷ್ಟೇ ಸೀಮಿತ

ಪರಿಸರ ಸೂಕ್ಷ್ಮ ವಲಯವಾಗಿರುವ ಭರಚುಕ್ಕಿ ಜಲಪಾತದ ಸುತ್ತಮುತ್ತಲಿನ ಪ್ರದೇಶವನ್ನು ಪ್ಲಾಸ್ಟಿಕ್‌ ಮುಕ್ತ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ, ಅದು ಘೋಷಣೆಗಷ್ಟೆ ಸೀಮಿತವಾಗಿದೆ.

ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಕಸವನ್ನು ಎಸೆದು ಹೋಗುತ್ತಿದ್ದಾರೆ. ಇದರಿಂದ ಪರಿಸರದ ಸೌಂದರ್ಯ ಹದಗೆಡುತ್ತಿದೆ. ಕಸ ಹಾಕಲು ಬುಟ್ಟಿಗಳನ್ನು ಇಟ್ಟಿದ್ದರೂ ಜನರು ನೀರಿನ ಬಾಟಲಿ ಸೇರಿದಂತೆ ಇತರೆ ಪ್ಲಾಸ್ಟಿಕ್‌ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.