ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಗುರು ಸೇವೆಯಿಂದ ಸದ್ಯೋನ್ಮುಕ್ತಿ

Last Updated 19 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸದ್ಗುರುವಿನ ಮಹಿಮೆಯು ದೇಶ ಮತ್ತು ಕಾಲಾತೀತವಾದುದು. ಜಗತ್ತಿನೆಲ್ಲೆಡೆಯೂ ಗುರುವಿಗೆ ವಿಶೇಷ ಸ್ಥಾನ ಮಾನವನ್ನು ನೀಡಲಾಗುತ್ತಿದೆ. ಭಾರತೀಯರಂತೂ ನಗುರೋರಧಿಕಂ, ನಗುರೋರಧಿಕಂ ಎಂದು ಹೇಳುವ ಮೂಲಕ ಗುರುವಿಗೆ ಭಗವಂತನಿಗಿಂತಲೂ ಉನ್ನತವಾದ ಸ್ಥಾನವನ್ನು ಕಲ್ಪಿಸಿದ್ದಾರೆ.

ಹರ ಮುನಿದರೆ ಗುರು ಕಾಯುವ, ಗುರು ಮುನಿದರೆ ಹರ ಕಾಯಲಾರ ಎಂದು ನಂಬಿ ನಡೆದವರು ಭಾರತೀಯರು. ಅವರಿಗೆ ಗುರುವೇ ತಂದೆ, ತಾಯಿ, ಬಂಧು-ಬಳಗ ಸರ್ವಸ್ವವೂ ಆಗಿರುವುದು ಸರ್ವವಿದಿತ.

ಗುರು-ಶಿಷ್ಯರ ಸಂಬಂಧವೂ ಕೂಡ ಪವಿತ್ರವಾದುದು. ಗುರುಗಳು ಸದಾಚಾರಿ, ಸದ್ವಿಚಾರಿ ಮತ್ತು ಪರಮಜ್ಞಾನಿಗಳಾಗಿರುವಂತೆ ಶಿಷ್ಯನೂ ಕೂಡ ಯೋಗ್ಯನಾಗಿರಬೇಕಾಗುತ್ತದೆ. ಶಿಷ್ಯನಲ್ಲಿ ಹುಸಿ, ಕಳವು, ಪರಹಿಂಸೆ ಇತ್ಯಾದಿ ದುರ್ಗುಣಗಳಿದ್ದರೆ ಗುರುಕೃಪೆ ಸಾಧ್ಯವಾಗುವುದಿಲ್ಲ. ಗುರು ಸದಾ ಶಿಷ್ಯನ ತೀವ್ರತೆ ಹಾಗು ಯೋಗ್ಯತೆಯನ್ನು ನಿರೀಕ್ಷಿಸುವನು. ಆದ್ದರಿಂದ ಶಿಷ್ಯನೂ ಯೋಗ್ಯನಾಗಿರಬೇಕಾದುದು ಅಪೇಕ್ಷಣೀಯ. ಸುಯೋಗ್ಯ ಶಿಷ್ಯನು ಸದ್ಗುರುವನ್ನು ಸೇರಿದರೆ, ಸದ್ಗುರು ಸೇವೆಯನ್ನು ಮಾಡಿದರೆ, ಸದ್ಗುರುವಿನಿಂದ ದೀಕ್ಷಿತನಾಗಿ ಅವನು ತೋರಿದ ದಾರಿಯಲ್ಲಿ ಸಾಗಿದರೆ ಶಿಷ್ಯನ ಭಾಗ್ಯಕ್ಕೇನೂ ಕೊರತೆಯಿಲ್ಲ. ಶರಣ ಆದಯ್ಯನವರು ಹೀಗೆ ಹೇಳಿದ್ದಾರೆ-

ಪರತತ್ವ ಪರಬ್ರಹ್ಮ ಪರಶಿವನಪ್ಪ
ಮಂತ್ರಮೂರ್ತಿ ಸದ್ಗುರು ಕಣ್ಣ ಮುಂದಿರಲು
ಸದಾ ಗುರುಸೇವೆಯಳವಟ್ಟು
ಗುರು ಶುಶ್ರೂಷೆಯ ಮಾಡುವ ಶಿಷ್ಯಂಗೆ
ಆ ಸದ್ಗುರು ಸೇವೆಯೇ ಚತುರ್ವಿಧ ಫಲ
ಗುರು ಸೇವೆಯೇ ಅಷ್ಟಮಹದೈಶ್ವರ್ಯ
ಗುರು ಸೇವೆಯೇ ಅಷ್ಟಭೋಗಂಗಳ ಅನು
ಇದು ಕಾರಣ ಸದ್ಗುರು ಸೇವೆಯೇ ಸದ್ಯೋನ್ಮುಕ್ತಿ
ಸೌರಾಷ್ಟ್ರ ಸೋಮೇಶ್ವರಾ.

ಗುರು ಸೇವೆಯಿಂದ ಕರಣಾದಿಗಳ ದೋಷ ಕಳೆಯುತ್ತದೆ, ಕಾಯದ ಕರ್ಮ ತೊಳೆಯುತ್ತದೆ. ಆಗ ಕಾಯ ನಿರ್ಮಲ ಮತ್ತು ಪ್ರಾಣ ಪವಿತ್ರವಾಗುತ್ತದೆ. ಗುರುವಿನ ಅನುಗ್ರಹದಿಂದ ಶಿಷ್ಯನ ಸಾಂಸಾರಿಕ ಬಂಧನಗಳೆಲ್ಲ ಕಳಚಿ ಹೋಗುತ್ತವೆ. ಆದ್ದರಿಂದ ಗುರುವನ್ನು ದೇವರೆಂದು ಭಾವಿಸಿ ಪೂಜಿಸಿದರೆ ಗುರು ಜ್ಞಾನಮಾರ್ಗವನ್ನು ತೋರುತ್ತಾನೆ. ಆ ಮಾರ್ಗದಲ್ಲಿ ಸಾಗಿದ ಶಿಷ್ಯನು ಇಂದ್ರಿಯ, ಮನಸ್ಸು, ಬುದ್ಧಿಗಳ ಸೀಮೆಯನ್ನು ದಾಟಿ ತಾನೇ ತಾನಾಗಿ ನಿಲ್ಲುತ್ತಾನೆ. ಅದುವೇ ಸದ್ಯೋನ್ಮುಕ್ತಿಯ ಸ್ಥಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT