ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ಷರ್ ದಾಮ್ಲೆ ಅವರ ಅಂತರಂಗ ಅಂಕಣ: ಮಕ್ಕಳ ನಡತೆ ಸುಧಾರಿಸುವುದು ಹೇಗೆ?

ಅಕ್ಷರ್ ದಾಮ್ಲೆ
Published : 31 ಆಗಸ್ಟ್ 2024, 0:02 IST
Last Updated : 31 ಆಗಸ್ಟ್ 2024, 0:02 IST
ಫಾಲೋ ಮಾಡಿ
Comments

ಪ್ರಶ್ನೆ: ನನ್ನ ಮಕ್ಕಳಿಬ್ಬರ ನಡುವೆ ಹೆಚ್ಚಿನ ವಯಸ್ಸಿನಂತರವಿಲ್ಲ. ಮಗನಿಗೆ 16 ಮಗಳಿಗೆ 15. ಆದರೆ ಇಬ್ಬರೂ ವಿಪರೀತ ಗುಟ್ಟುಗಳನ್ನು ಕಾಪಾಡಿಕೊಳ್ಳುತ್ತಾರೆ. ಅವರ ಫೋನಿಗೆ ಸದಾ ಲಾಕ್‌ ಮಾಡ್ತಾರೆ. ಸೋಷಿಯಲ್‌ ಮಿಡಿಯಾಗಳಲ್ಲಿ ನನ್ನದಾಗಲಿ, ಅಪ್ಪನದ್ದಾಗಲಿ ಫ್ರೆಂಡ್‌ಶಿಪ್‌ ರಿಕ್ವೆಸ್ಟ್‌ ಅಕ್ಸೆಪ್ಟ್‌ ಮಾಡಿಲ್ಲ. ತಡರಾತ್ರಿ ಫೋನಿನಲ್ಲಿ ಚಾಟ್‌ ಮಾಡುತ್ತಿರುತ್ತಾರೆ. ಈ ಗುಟ್ಟುಗುಟ್ಟಾಗಿಡುವ ಕಾರಣಕ್ಕೇ ಮನೇಲಿ ಜಗಳಗಳಾಗುತ್ತಿವೆ. ನಾವ್ಯಾರೂ ಅವರ ಖಾಸಗೀತನಕ್ಕೆ ಧಕ್ಕೆ ತರುವುದಿಲ್ಲ ಎಂಬ ಭರವಸೆ ನೀಡಿದಾಗಲೂ ಹೀಗೆ ಲಾಕ್‌ ಮಾಡುತ್ತಿರುವುದರಿಂದ ಆತಂಕವಾಗುತ್ತಿದೆ. ಮಕ್ಕಳನ್ನು ನಮ್ಮ ಸ್ನೇಹಿತವಲಯಕ್ಕೆ, ನಮ್ಮನ್ನು ಅವರ ಸ್ನೇಹಿತವಲಯಕ್ಕೆ ಪರಿಚಯಿಸಿಕೊಳ್ಳುವುದರಲ್ಲಿ ತೊಂದರೆ ಇದೆಯೇ? ಈ ನಡತೆಯನ್ನು ಹೇಗೆ ಸುಧಾರಿಸುವುದು?

ಬಹುಶಃ ಪ್ರಸ್ತುತ ಸಂದರ್ಭದಲ್ಲಿ ಅನೇಕ ಹೆತ್ತವರನ್ನು ಕಾಡುವ ಪ್ರಶ್ನೆ ಇದು. ಕೋವಿಡ್ ಬರುವವರೆಗೆ ಸ್ವಲ್ಪ ಶಿಸ್ತುಕ್ರಮ ವಹಿಸಿಯಾದರೂ ಮಕ್ಕಳನ್ನು ಮೊಬೈಲ್, ಲಾಪ್‍ಟಾಪ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳಿಂದ ದೂರ ಇಡುವುದು ಸಾಧ್ಯವಾಗಿತ್ತು. ಆದರೆ, ಕೋವಿಡ್ ಕಾಲದಲ್ಲಿ ಅನಿವಾರ್ಯವಾಗಿ ಮಕ್ಕಳಿಗೆ ಈ ಎಲ್ಲಾ ಉಪಕರಣಗಳನ್ನು ಒದಗಿಸಬೇಕಾಯಿತು. ಜತೆಗೆ ಎಷ್ಟೋ ಶಾಲೆಯಿಂದ ಕೊಡುವ ಮನೆಗೆಲಸಗಳು ಕೂಡಾ ವಾಟ್ಸ್‌ ಆ್ಯಪ್‌ ಅಥವಾ ಇ-ಮೇಲ್ ನಲ್ಲಿ ಬರುವುದಕ್ಕೆ ಶುರುವಾಯಿತು. ಮತ್ತೆ ತರಗತಿಗಳನ್ನು ಹಾಜರಾಗುವ ನೆಪದಲ್ಲಿ ವಿದ್ಯಾರ್ಥಿಗಳು ಇನ್ನೇನೋ ಟ್ಯಾಬ್‍ಗಳನ್ನು ತೆರೆದುಕೊಂಡು ಅದರಲ್ಲಿ ಚಾಟ್ ಮಾಡಿಕೊಂಡು ಸಮಯ ಕಳೆಯುವುದನ್ನು ಹೆತ್ತವರು ಅಸಹಾಯಕರಾಗಿ ನೋಡಬೇಕಾದ ಪರಿಸ್ಥಿತಿ ಬಂದಿದೆ. ಅಷ್ಟೇ ಅಲ್ಲದೇ, ಮಕ್ಕಳು ತಮಗೆ ಯಾವ ಫೋನ್ ಬೇಕು ಎಂಬುದನ್ನು ತಾವೇ ನಿರ್ಧರಿಸಿ, ಅದರ ಮೊತ್ತದ ಪರಿವೆಯೇ ಇಲ್ಲದೆ ಹೆತ್ತವರ ಮೇಲೆ ಒತ್ತಡ ಹೇರುವಂತಹ ಪರಿಸ್ಥಿತಿಯನ್ನೂ ಕಾಣುತ್ತಿದ್ದೇವೆ. ಅದರ ಜೊತೆಗೆ ಮೇಲಿನ ಪ್ರಶ್ನೆಯಲ್ಲಿ ಹೇಳಿದಂತೆ ಮಕ್ಕಳು ತಮ್ಮ ಉಪಕರಣಗಳಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನೇ ಕಂಡುಹಿಡಿಯಲಾಗದ ಪೇಚಾಟಕ್ಕೆ ಸಿಲುಕಿದ್ದಾರೆ ಕೂಡಾ. ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯನ್ನು ಪರಿಹರಿಸಬೇಕಾದರೆ, ಹೆತ್ತವರೆಲ್ಲರೂ ಒಂದಾಗಬೇಕು ಮತ್ತು ಎಲ್ಲರೂ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಆವಾಗ, ಪ್ರತಿಯೊಂದು ಮನೆಯ ಮಹಾಭಾರತಗಳು ಕಡಮೆಯಾಗಬಹುದು.

ಅನೇಕ ಸಂಶೋಧನೆಗಳ ಪ್ರಕಾರ ಹೇಳುವುದಾದರೆ, ಸುಮಾರು 12ರ ವಯಸ್ಸಿನವರೆಗೆ ಮಕ್ಕಳಿಗೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ನಿಷಿದ್ಧ. ಕೆಲವರು ಇದನ್ನು ಇನ್ನೂ ಹೆಚ್ಚಿಸಿ, 16ರವರೆಗೆ ಅಂತಲೂ ಹೇಳಿದ್ದಾರೆ. ಆಮೇಲೂ ಕೂಡಾ ದಿನಕ್ಕೆ ಒಂದೆರಡು ಗಂಟೆಗಳಿಗಿಂತ ಹೆಚ್ಚಾಗಿ ಬಳಸುವುದು ಉತ್ತಮವಲ್ಲ. ಇದನ್ನು ಮಕ್ಕಳಿಗೆ ತಿಳಿಹೇಳಬೇಕು. ಮತ್ತು ಮಕ್ಕಳಿಗೆ ತಮ್ಮ ಜೀವನದಲ್ಲಾಗುತ್ತಿರುವಂತಹ ಏರುಪೇರುಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಆವಾಗ ಅವರುಗಳ ಅಡಗಿಸಿಡುವ ಪ್ರವೃತ್ತಿಯನ್ನು ನಿಧಾನವಾಗಿ ಕಡಮೆ ಮಾಡಬಹುದು. ಅವರ ಸ್ನೇಹಿತ ವಲಯದಲ್ಲಿ ಇರುವುದು ಯಾವ ಕಾರಣಕ್ಕೂ ತಪ್ಪಲ್ಲ. ಬದಲಾಗಿ ಹಿಂದಿನಿಂದಲೂ ಹೇಳಿರುವ ಮಾತೆಂದರೆ, ಮಕ್ಕಳು ದೊಡ್ಡವರಾಗುತ್ತಿದ್ದ ಹಾಗೆಯೇ, ಅವರನ್ನು ಸ್ನೇಹಿತರಂತೆ ಕಾಣಿ ಅಂತ.

ಮಾತ್ರವಲ್ಲ, ಈಗಿನ ಮಕ್ಕಳ ಆತಂಕಗಳು ಅವರು ಒಳಗಾಗುವ ಕೆಲವು ಚಟಗಳು ಮೊದಲೇ ಗೊತ್ತಾದರೆ, ಆವಾಗ ಅವರನ್ನು ಅದರ ಬಲಿಪಶುಗಳಾಗುವುದನ್ನು ತಡೆಯುವುದಕ್ಕೂ ಸಾಧ್ಯವಾಗುತ್ತದೆ. ಈಗ ಅವರಿಗೆ ನಿಮ್ಮ ಶಿಸ್ತಿನ ಕ್ರಮ ಸ್ವಲ್ಪ ಹೇರಿಕೆ ಅಂತ ಅನ್ನಿಸಿದರೂ, ಮುಂದೊಂದು ದಿನ ಅದರ ಮಹತ್ವದ ಅರಿವು ಅವರಿಗಾಗುತ್ತದೆ. ಹೀಗೆ ಮಾಡಬೇಕಾದರೆ, ದಯವಿಟ್ಟು ಪೋಷಕರಾಗಿ ನಿಮಗಾಗುವ ಆತಂಕಗಳನ್ನೂ ಅವರಿಗೆ ತಿಳಿಸಿ. ಎರಡೂ ಮಕ್ಕಳಿಗೂ ಒಂದೇ ರೀತಿಯ ನಿಯಮಗಳನ್ನು ಹಾಕಿ. ಈಗಲೇ ನಿಯಂತ್ರಣಕ್ಕೆ ತನ್ನಿ. ಇನ್ನೂ ಕಾಲ ಮಿಂಚಿಲ್ಲ. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT