ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕ್ಯುಲರ್ ಮಚ್ಚೆಯ ಪ್ರದರ್ಶನ

Last Updated 1 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ರಾಜಕಾರಣದಲ್ಲಿ ಕೇವಲ ಸಾಂಕೇತಿಕವಾದ ಕ್ರಿಯೆಗಳು ಪ್ರಚಾರದ ಸಾಧನ ಮಾತ್ರ ಆಗುತ್ತವೆ. ನಾನು ಇದನ್ನು ಒಪ್ಪುವುದಿಲ್ಲ, ರೂಢಿಜಡವಾದ ಕ್ರಿಯೆಗಳು ಇವು. ವೈರಿಯ ಪ್ರತಿಕೃತಿಯನ್ನು ಹೆಣದಂತೆ ಸುಡುವುದು- ಇದೂ ಒಂದು ಸಾಂಕೇತಿಕ ಕ್ರಿಯೆ. ಈ ಸಂಕೇತಗಳೆಲ್ಲಾ ಪ್ರಭುತ್ವದ ಪಾಲಿಗೆ ಏನೂ ಅಲ್ಲ. ಅದು ತನ್ನ ಪಾಡಿಗೆ ತಾನು ಮಾಡಬೇಕಾದ್ದನ್ನು ಮಾಡಿಕೊಂಡು ಸಾಗುತ್ತದೆ. ಮಾತ್ರವಲ್ಲ, ಕೆಲವು ಸಮರ್ಥವಾದ ವ್ಯವಸ್ಥೆಗಳು ಇಂಥ ಸಾಂಕೇತಿಕ ವಿರೋಧವನ್ನು ಆಶಿಸುತ್ತವೆ. ಯಾಕೆಂದರೆ ಇದೂ ಒಂದು ಬಗೆಯಲ್ಲಿ ಅದಕ್ಕೆ ಪ್ರಚಾರ ನೀಡುವ ಸುದ್ದಿ. ಸುದ್ದಿಗೆ ಬೇಕಾಗಿರುವುದು ‘ಸುದ್ದಿಯಾಗಬಹುದಾದ’ ಸಂಕೇತ. ಗಾಂಧೀಜಿಯವರ ಹೋರಾಟವನ್ನೂ ನಾವು ಸಾಂಕೇತಿಕ ಕ್ರಿಯೆಯೆಂದು ತಿಳಿಯುವುದಿದೆ. ಆದರೆ ಇದು ತಪ್ಪು ತಿಳಿವಳಿಕೆ.

ಚರಕವೆಂಬ ಒಂದು ಯಂತ್ರವಿದೆಯೆಂದು ಗಾಂಧೀಜಿಗೆ ಮೊದಲು ಗೊತ್ತಿರಲಿಲ್ಲ. ಆದರೆ ಅವರು ಅದನ್ನು ಹುಡುಕಿ ಪಡೆದು ಸೂತ್ರ ಯಜ್ಞವನ್ನು ಪ್ರಾರಂಭಿಸಿದರು. ಒಂದು ಕಾಲದಲ್ಲಿ ಇದು ಕೇವಲ ಸಾಂಕೇತಿಕವಾಗಿಯಷ್ಟೇ ಉಳಿಯದೆ ಒಂದು ಅಹಿಂಸಾತ್ಮಕ ಹೋರಾಟದ ಅಸ್ತ್ರವಾಯಿತು. ನಮ್ಮಿಂದ ಹತ್ತಿಯನ್ನು ಪಡೆದು ನಮಗೆ ಬಟ್ಟೆಯನ್ನು ತಯಾರಿಸಿ ನಮಗೇ ಮಾರಾಟ ಮಾಡಲು ಕಳುಹಿಸುತ್ತಿದ್ದ ಮ್ಯಾಂಚೆಸ್ಟರ್‌ನ ಮಿಲ್‌ಗಳು ಮುಚ್ಚಿದವು. ಈ ಕೂಲಿಕಾರ್ಮಿಕರು ಕೆಲಸ ಕಳೆದುಕೊಂಡರು. ದುಂಡು ಮೇಜಿನ ಪರಿಷತ್ತಿಗೆಂದು ಇಂಗ್ಲೆಂಡ್‌ಗೆ ಹೋಗಿದ್ದ ಗಾಂಧೀಜಿ ಭಯಂಕರ ಚಳಿಯಲ್ಲಿ, ಸದಾ ಮಳೆ ಹೊಯ್ಯುವುದಕ್ಕೇ ಖ್ಯಾತವಾದ ಮ್ಯಾಂಚೆಸ್ಟರ್‌ಗೆ ಹೋಗಿ ಅಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರನ್ನು ಭೇಟಿಯಾಗಿ ಭಾರತದ ಸ್ವಾತಂತ್ರ್ಯಕ್ಕೆ ಅವರ ನೆರವನ್ನು ಕೋರಿ ಅವರ ಕೆಲಸ ಕಳೆದದ್ದಕ್ಕೆ ಕ್ಷಮೆ ಯಾಚಿಸಿದರು. ಬಾಯಲ್ಲಿ ಹಲ್ಲಿಲ್ಲದ ಮ್ಯಾಂಚೆಸ್ಟರ್‌ನ ಒಬ್ಬ ಮುದುಕಿ, ಊಟಕ್ಕೆ ಮಾತ್ರ ಹಲ್ಲು ಇಟ್ಟುಕೊಳ್ಳುತ್ತಿದ್ದ ಗಾಂಧೀಜಿಯನ್ನು ಬಿಗಿದಪ್ಪಿದ ರೀತಿಯಲ್ಲಿರುವ ಚಿತ್ರವನ್ನು ನಾನು ಮರೆಯಲಾರೆ.

ಖಾದಿ ಹೀಗೆ ಸ್ವರಾಜ್ಯದ ಅಸ್ತ್ರವಾಗಬಹುದೆಂಬುದನ್ನು ಗುರುದೇವ ರವೀಂದ್ರನಾಥ ಟ್ಯಾಗೋರರು ಒಪ್ಪಿರಲಿಲ್ಲ. ಆದರೆ ಗಾಂಧೀಜಿ ಅವರ ಟೀಕೆಯನ್ನು ಒಪ್ಪಿಕೊಳ್ಳದೆಯೇ ಸ್ವಾಗತಿಸಿದರು. ನಾರಾಯಣ ಗುರುಗಳನ್ನು ಗಾಂಧೀಜಿ ಭೇಟಿಯಾದಾಗ ಇಬ್ಬರಲ್ಲೂ ತಾತ್ವಿಕ ಭೇದ ಉಂಟಾಗಿ ಕೊನೆಗೆ ಗಾಂಧೀಜಿಯವರು ‘ಗುರುಗಳೇ, ನೀವು ಖಾದಿಯನ್ನಾದರೂ ಉಡಬೇಕು’ ಎಂದು ಕೋರಿಕೊಂಡಿದ್ದರೆಂದು ನಾನು ಕೇಳಿದ್ದೇನೆ. ಚರಕ ಹೇಗೆ ಅಸ್ತ್ರವಾಯಿತೋ ಹಾಗೆಯೇ ದಂಡಿಗೆ ಉಪ್ಪು ಮಾಡಲು ಹೋಗುವ ಗಾಂಧಿಯ ಪಯಣವೂ ಸ್ವಾತಂತ್ರ್ಯದ ಯಾತ್ರೆಯಾಯಿತು. ದಾರಿಯಲ್ಲಿ ಒಂದು ನದಿಯನ್ನು ದಾಟಬೇಕಾದಾಗ ಕತ್ತಲಾಗಿದ್ದರಿಂದ ಹಳ್ಳಿಯ ಸಾವಿರಾರು ಜನ ಹಣತೆಗಳನ್ನು ಹಚ್ಚಿ ತಂದು ಹೊಳೆ ದಾಟಲು ದಾರಿ ತೋರಿಸಿಕೊಟ್ಟಿದ್ದರಂತೆ. ಉಪ್ಪಿನ ಸತ್ಯಾಗ್ರಹ ಒಂದು ಜೀವ ಸಂಭ್ರಮವೂ ಆಯಿತು. ಒಂದು ಹಿಡಿಯುಪ್ಪನ್ನು ಹಿಡಿದು ಮುಷ್ಠಿಯನ್ನು ಮೇಲಕ್ಕೆತ್ತುವ ಗಾಂಧೀಜಿಯ ಒಂದು ಚಿತ್ರವಿದೆ. ನನ್ನ ಪಾಲಿಗೆ ಭಾರತ ಸ್ವತಂತ್ರವಾದದ್ದು ಆ ಘಳಿಗೆಯಿಂದಲೇ.

ಸಮಕಾಲೀನ ಪ್ರಜಾಪ್ರಭುತ್ವದಲ್ಲಿ ಸಂಕೇತಗಳು ಕೇವಲ ಸಂಕೇತಗಳಷ್ಟೇ ಆಗಿ ಉಳಿದುಬಿಟ್ಟಿವೆ. ಆಡಳಿತ ಪಕ್ಷಕ್ಕೂ ‘ನಾವು ಪ್ರಜಾಸತ್ತಾತ್ಮಕವಾಗಿದ್ದೇವೆ’ ಎಂದು ತೋರಿಸಿಕೊಳ್ಳಲು ಇದರಿಂದ ಅನುಕೂಲವಾಗುತ್ತದೆ. ಈಗ ನನ್ನ ಪ್ರಿಯ ಗೆಳೆಯ ಹಾಗೂ ಚಿಂತಕ ಮರುಳಸಿದ್ಧಪ್ಪನವರು ಹೇಮಮಾಲಿನಿ ವಿರುದ್ಧ ರಾಜ್ಯಸಭೆಗೆ ಸ್ಪರ್ಧಿಸಿದ್ದನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಈ ಸ್ಪರ್ಧೆಯಲ್ಲಿ ತಾನು ಗೆಲ್ಲಬಲ್ಲನೆಂಬ ಭ್ರಮೆಯನ್ನು ಮರುಳಸಿದ್ಧಪ್ಪನವರಂಥ ಧೀಮಂತರು ಅಥವಾ ಅವರನ್ನು ಬೆಂಬಲಿಸುವ ನನ್ನ ಎಲ್ಲ ಗೆಳೆಯರು ಇಟ್ಟುಕೊಳ್ಳುವುದು ಸಾಧ್ಯವೇ ಇಲ್ಲ. ಇಟ್ಟುಕೊಂಡರೆ ಅದರ ಅರ್ಥ ಬಿಜೆಪಿಯಲ್ಲಿರುವವರು ಪಕ್ಷಾಂತರ ಮಾಡಿ ಅವರಿಗೆ ಓಟು ಕೊಡಬೇಕಾಗುತ್ತದೆ. ಇದನ್ನು ಪ್ರೇರೇಪಿಸುವುದು ಅಷ್ಟೇನೂ ನೈತಿಕವಲ್ಲದ ರಾಜಕಾರಣವೆಂದೇ ನಾನು ತಿಳಿದಿದ್ದೇನೆ.

ಇಲ್ಲಿ ನನ್ನ ವಿರೋಧವಿರುವುದು ಕಾಂಗ್ರೆಸ್‌ನ ರಾಜಕೀಯಕ್ಕೆ. ಅವರಿಗೆ ತಾವೇನು ಮಾಡುವುದೆಂದು ತಿಳಿಯದೇ ಇದ್ದಾಗ ಸಾಹಿತಿಗಳ ನೆನಪಾಗುತ್ತದೆ. ತನ್ನ ಉದ್ದೇಶದಲ್ಲೇ ಕೋಮುವಾದಿಯಾದ ಬಿಜೆಪಿಗಿಂತ ಕೋಮುವಾದಿಯೆಂದು ತೋರಿಸಿಕೊಳ್ಳಲು ನಿರಾಕರಿಸುವ ಕಾಂಗ್ರೆಸ್ ನನಗೆ ಹೆಚ್ಚು ಒಪ್ಪಿಗೆಯಾಗುವ ಪಕ್ಷ.

ಆದರೆ ಈ ಭ್ರಷ್ಟಾಚಾರದ ಕಾಲದಲ್ಲಿ ಕರ್ನಾಟಕದ ಭ್ರಷ್ಟಾಚಾರದಷ್ಟೇ ಕೇಂದ್ರದಲ್ಲಿ ಕಾಂಗ್ರೆಸ್  ತನ್ನ ಮಿತ್ರಪಕ್ಷಗಳ ಜತೆಗೂಡಿ ಸಹಿಸಿಕೊಂಡಿರುವ ಭ್ರಷ್ಟಾಚಾರವನ್ನೂ ಗಮನಿಸಬೇಕಾಗುತ್ತದೆ. ಈ ಭ್ರಷ್ಟಾಚಾರವನ್ನು ನಮ್ಮ ಪ್ರಧಾನಿಯವರು ‘ಇದು ಸಮ್ಮಿಶ್ರ ಸರ್ಕಾರದ ಧರ್ಮ’ ಎಂಬಂತೆ ಮಾತನಾಡಿದರು. ಆದರೆ ಅಮೆರಿಕದ ಜತೆ ಒಪ್ಪಂದ ಮಾಡಿಕೊಳ್ಳುವಾಗ ಅವರಿಗೆ ಮರೆತು ಹೋದದ್ದೂ ಇದೇ ‘ಧರ್ಮ’. ಕಮ್ಯುನಿಸ್ಟ್ ಪಕ್ಷ ಕಾಂಗ್ರೆಸ್‌ಗೆ ಅತ್ಯಂತ ಅಗತ್ಯವಾದ ಒಂದು ಕಡಿವಾಣದಂತೆ ಮೊದಲ ವರ್ಷಗಳಲ್ಲಿ ಕೆಲಸ ಮಾಡಿತ್ತೆಂಬುದನ್ನು ನಾವು ಮರೆಯುವಂತಿಲ್ಲ.

ನಮಗೆಲ್ಲರಿಗೂ ಸಾತ್ವಿಕ ಮನುಷ್ಯನೆಂಬಂತೆಯೂ ವಿನಯವಂತನಂತೆಯೂ ಕಾಣುವ ನಮ್ಮ ಪ್ರಧಾನಿಯವರು ತಮ್ಮದೊಂದು ಮಾತಿನಿಂದ ನನ್ನನ್ನು ಬೆಚ್ಚಿಸಿದರು. 2ಜಿ ಹಗರಣದಿಂದ ಬೊಕ್ಕಸಕ್ಕೆ ಇಷ್ಟು ನಷ್ಟವಾಯಿತಲ್ಲ ಎಂಬ ಪ್ರಶ್ನೆ ಬಂದಾಗ ಪ್ರಧಾನಿ ‘ಬಡ ರೈತರಿಗೆ ರಸಗೊಬ್ಬರದ ಸಬ್ಸಿಡಿಯನ್ನೂ, ಬಡ ಗ್ರಾಹಕರಿಗೆ ಸಬ್ಸಿಡಿಯ ಅಕ್ಕಿಯನ್ನೂ ಕೊಡುವುದರಿಂದ ನಷ್ಟವಾಗುತ್ತಿಲ್ಲವೇ’ ಎಂದು ಮರುಪ್ರಶ್ನೆ ಕೇಳಿದರು. ಅವರದನ್ನು ಅದೆಷ್ಟು ಮುಗ್ಧತೆಯಲ್ಲಿ ಕೇಳಿದರೆಂದರೆ ನಾನು ಮೊದಲ ಬಾರಿಗೆ ಅಂತಹ ಅನೈತಿಕ ಅರ್ಥಶಾಸ್ತ್ರಜ್ಞ ಮುಗ್ಧತೆಯಿಂದ ಹೇಸಿದೆ.

ಇದು ಒಬ್ಬ ವರ್ಲ್ಡ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಮಾತನಾಡಿದಂತಿತ್ತು. ಮನಮೋಹನ್ ಸಿಂಗರು ಇಡೀ ದೇಶದ ಒತ್ತಾಯಕ್ಕೆ ಮಣಿದು ತಮ್ಮ ಆಡಳಿತಾವಧಿಯಲ್ಲಾದ ಭ್ರಷ್ಟಾಚಾರವನ್ನು ಶಿಕ್ಷಿಸಲು ಬಹಳ ದಿನ ತಡೆದು ಮುಂದಾಗಿದ್ದಾರೆ. ಇದು ಅವರ ಆಳವಾದ ಅಪೇಕ್ಷೆಯಿಂದ ಹುಟ್ಟಿದ್ದು ಎಂಬುದಕ್ಕಿಂತ ಪ್ರಜಾತಂತ್ರ ತರುವ ಒತ್ತಡದ ಒಂದು ಗುಣ ಎಂದೇ ನನಗೆ ಭಾಸವಾಗುತ್ತದೆ.

ಇವನ್ನೆಲ್ಲಾ ಬರೆಯುವಾಗ ನನ್ನನ್ನೂ ನಾನು ವಿಮರ್ಶೆಗೆ ಒಡ್ಡಿಕೊಳ್ಳಲೇ ಬೇಕು. ನಾನೂ ರಾಜ್ಯಸಭೆಗೆ ನನ್ನ ಗೆಳೆಯರಾದ ಬಿ.ಆರ್.ಪಾಟೀಲ್, ಸಿದ್ದರಾಮಯ್ಯ, ಡಾ. ಮಹದೇವಪ್ಪ, ವಾಟಾಳ್ ನಾಗರಾಜ್ ಇವರ ಮುಂದಾಳತ್ವದಲ್ಲಿ ಸಿದ್ಧನಾದೆ. ಆದರೆ ನನ್ನ ಮಟ್ಟಿಗೆ ಅದು ಕೇವಲ ಸಿಂಬಾಲಿಕ್ ಕ್ರಿಯೆ ಆಗಿರಲಿಲ್ಲ. ‘ನೀವೇಕೆ ಬಿಜೆಪಿಯ ಜೊತೆ ಸಖ್ಯ ಮಾಡಿದ್ದೀರಿ’ ಎಂದು ನನಗೆ ಹಲವು ವರ್ಷಗಳಿಂದ ಪ್ರಿಯರಾಗಿದ್ದ ದೇವೇಗೌಡರಿಗೆ ಸವಾಲೆಸೆಯುವುದು ನನಗೆ ಸಾಧ್ಯವಾಯಿತು. ಆ ಸವಾಲನ್ನು ಗೌಡರೂ  ಮನಸ್ಸಿಗೆ ತಂದುಕೊಳ್ಳಲಿಲ್ಲ. ಬಿಜೆಪಿಯ ಜೊತೆ ಮೈತ್ರಿಯಲ್ಲಿದ್ದ ನನ್ನ ಹಲವಾರು ಗಾಢವಾದ ಹೋರಾಟಗಳ ನೆನಪಿನ ಜಾರ್ಜ್ ಫರ್ನಾಂಡಿಸರನ್ನೂ ಬಿಜೆಪಿಯ ಮೈತ್ರಿಯಿಂದ ಹೊರಬರುವ ಸವಾಲನ್ನು ನಾನು ಎಸೆದಿದ್ದೆ. ಅವರು ನನ್ನ ಟೆಲಿಫೋನ್ ಕರೆಯನ್ನೇ ಸ್ವೀಕರಿಸಲಿಲ್ಲ. ಕುಮಾರಸ್ವಾಮಿಯವರಂತೂ ‘ಈ ಅನಂತಮೂರ್ತಿ ಯಾರ್ರಿ?’ ಎಂದು ಕೇಳಿ ಆಮೇಲೆ ಪಶ್ಚಾತ್ತಾಪ ಪಟ್ಟರು. ನನ್ನ ಸಾಹಿತ್ಯ ಲೋಕದವರೇ ಆದ ದೇಜಗೌ, ಗತಿಸಿದ ಎಚ್‌ಎಸ್‌ಕೆ ಮತ್ತು ನನಗೆ ಬಹುಪ್ರಿಯರಾಗಿದ್ದ ಜಿ.ಟಿ. ನಾರಾಯಣರಾವ್ ಈ ಮೂವರಿಂದಲೂ ಒಂದು ಪತ್ರಿಕಾಗೋಷ್ಠಿ ಏರ್ಪಡಿಸಿ ನನ್ನನ್ನು ಟೀಕಿಸಿದ್ದೂ ನಡೆಯಿತು.

ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರು ನನಗೆ ಓಟು ಕೊಡಬೇಕಾದವರು ಜನತಾ ಪಕ್ಷದ ಪ್ರಣಾಳಿಕೆಯನ್ನು ಬರೆದವರಲ್ಲಿ ನಾನೊಬ್ಬನೆಂದು ನನಗೆ ಓಟು ಹಾಕಲಿಲ್ಲ. ಆದ್ದರಿಂದ ಹೀಗೆ ಹಲವರು ಅನಾವರಣಗೊಳ್ಳುವಂತೆ ಮಾಡಿದ ನನ್ನ ಸ್ಪರ್ಧೆ ಸಾಂಕೇತಿಕವೆಂದು ಕೆಲವರಿಗೆ ತೋರಿದರೂ ಅದು ಸಾಂಕೇತಿಕವಾಗಿರಲಿಲ್ಲ. ಈಗ ಎಂ.ಪಿ. ಆಗಿರುವ ರಾಜೀವ್ ಚಂದ್ರಶೇಖರ್ ಅವರು ನಾನು ಅಭ್ಯರ್ಥಿಯಾಗಿ ನಿಲ್ಲುತ್ತಿದ್ದಂತೆಯೇ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಇನ್ನೊಂದು ನಾಮಪತ್ರ ಸಲ್ಲಿಸಿದರು. ಇವೆಲ್ಲಾ ಈಗ ಎಲ್ಲರೂ ಮರೆಯುತ್ತಿರುವ, ನಾನೂ ಮರೆತುಬಿಡಬಹುದಾದ ಚರಿತ್ರೆ.

ನನಗಿರುವ ಅನುಮಾನ ನಾನು ಗೆಲ್ಲುವ ಸಾಧ್ಯತೆ ಇದ್ದಿದ್ದರಿಂದಲೇ ನನಗೆ ಹಲವರಿಂದ ವಿರೋಧ ಬಂತು. ಆ ದಿನಗಳಲ್ಲಿ ನಾನು ಅಸೆಂಬ್ಲಿಯ ಪಡಸಾಲೆಯಲ್ಲಿ ಓಡಾಡುತ್ತಿದ್ದಾಗ ಹಲವು ಸಾಮಾನ್ಯ ನೌಕರರು ಬಂದು ‘ನೀವು ಇವರ ರಾಜಕಾರಣಕ್ಕೆ ಬಲಿಯಾಗಬಾರದು’ ಎನ್ನುತ್ತಿದ್ದರು. ಇನ್ನು ನನ್ನ ಹಲವು ಇತರ ಸ್ನೇಹಿತರು ‘ನೀವು ನಿಲ್ಲಲು ಹೋಗಿ ನಿಮಗಿರುವ ಒಳ್ಳೆಯ ಹೆಸರನ್ನು ಕೆಡಿಸಿಕೊಂಡಿರಿ’ ಎಂದು ಬೇಸರ ಮಾಡಿಕೊಂಡರು.

ಈ ಬಗೆಯ ಟೀಕೆಗಳು ನನಗೆ ನಿಜವಾದ ಬೇಸರವನ್ನು ತಂದಿರಲಿಲ್ಲ. ನಾನು ಯಾರ ಜೊತೆ ಸೇರಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದ್ದೆನೋ ಅದರ ದೊಡ್ಡ ನಾಯಕನಾದ ಜಾರ್ಜ್ ಫರ್ನಾಂಡಿಸ್ ನಿಷ್ಕ್ರಿಯನಾದದ್ದು, ದೇವೇಗೌಡರು ತಾನು ಏನನ್ನೂ ಮಾಡಲಾರೆ ಎಂದು ತಮ್ಮ ಮಗ ಕುಮಾರಸ್ವಾಮಿಯವರ ಸರ್ಕಾರವನ್ನು ಬೆಂಬಲಿಸಿದ್ದು  ನಮ್ಮ ರಾಜಕಾರಣದ ತಾತ್ವಿಕತೆಯ ಟೊಳ್ಳನ್ನು ದಾಖಲಿಸಿವೆ ಎಂದು ಮಾತ್ರ ನಾನು ಹೇಳಲೇಬೇಕು. ಆದರೆ ಮರುಳಸಿದ್ಧಪ್ಪನವರ ಸ್ಪರ್ಧೆಯಿಂದ ಇಂಥ ಯಾವ ಮೋಸ ಬಯಲು ಮಾಡುವ ಸಾಧ್ಯತೆಗಳೂ ನನಗೆ ಕಾಣಿಸುತ್ತಿಲ್ಲ. ಅವರನ್ನು ಸ್ಪರ್ಧೆಗಿಳಿಸಿರುವ ಕಾಂಗ್ರೆಸ್ಸಿನ ಪ್ರಯತ್ನ ಗಂಭೀರವಾದ ರಾಜಕಾರಣ ಎನಿಸುವುದರ ಬದಲು ಒಂದು ಚೇಷ್ಟೆಯಂತೆ ನನಗೆ ಕಾಣಿಸುತ್ತಿದೆ. ಈ ಚೇಷ್ಟೆಗೆ ಅವರು ಒಬ್ಬ ಧೀಮಂತ ಲೇಖಕನನ್ನು ಬಳಸಿಕೊಂಡಿರುವುದು ನಮ್ಮ ದುರದೃಷ್ಟ.

ಇದರಿಂದ ನಾವು ಕಲಿಯಬೇಕಾದ ಪಾಠ ಇದೆ. ನಾವು ಲೇಖಕರು, ಯಾವತ್ತೂ ಯಾವ ರಾಜಕೀಯ ಪಕ್ಷದ ವಕ್ತಾರರಾಗುವುದೂ ಈ ದಿನಗಳಲ್ಲಿ ಅಪಾಯಕಾರಿ. ಚುನಾವಣೆಯಲ್ಲಿ ನಾನು ಕೂಡಾ ಒಬ್ಬ ಕಮ್ಯುನಿಸ್ಟನಿಗೋ ಒಬ್ಬ ಕಾಂಗ್ರೆಸ್‌ನವನಿಗೋ ಓಟು ಕೊಡಬಹುದು. ಆದರೆ ಈ ಪಕ್ಷಗಳೂ ಕೂಡಾ ಡೆವಲಪ್‌ಮೆಂಟಿನ ಬೆನ್ನುಹತ್ತಿ ಬಡವರ ದುಡಿಮೆಯ ಕೃಷಿಗೂ ಮಾರಕವಾಗಿವೆ ಎಂದು ನಾನು ಲೇಖಕನಾಗಿ ಹೇಳದೇ ಇರಲಾರೆ.

ಯಾರು ಯಾವಾಗ ಯಾವ ಪಕ್ಷದಲ್ಲಿರುತ್ತಾರೆ ಎಂಬುದನ್ನೇ ಹೇಳಲಾರದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವು ಖಿನ್ನರಾಗಿದ್ದೇವೆ. ಮಲ್ಯ, ರಾಮಸ್ವಾಮಿ, ಅಂಬಾನಿ, ರಾಜೀವ್ ಚಂದ್ರಶೇಖರ್ ಇಂಥವರೆಲ್ಲರೂ ರಾಜ್ಯಸಭೆಗೆ ಆಯ್ಕೆಯಾಗುತ್ತಿರುವ ಸಂದರ್ಭದಲ್ಲಿ ಜನಬಲವೆಂದರೆ ಏನು ಎಂಬುದಕ್ಕೆ ಒಂದು ಉದಾಹರಣೆಯನ್ನು ಇಲ್ಲಿ ಹೇಳಲೇ ಬೇಕು. ಬಿಜೆಪಿ ಮತ್ತು ಕುಮಾರಸ್ವಾಮಿಯವರು ಕೂಡಿ ರಾಜೀವ್ ಚಂದ್ರಶೇಖರ್ ಅವರನ್ನು ಗೆಲ್ಲಿಸಿದಾಗಲೇ  ಪಕ್ವ ರಾಜಕಾರಣಿ ರಾಜಶೇಖರ ಮೂರ್ತಿ ಕೂಡಾ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆದರೆ ಅವರಿಗೆ ರಾಜೀವ್ ಚಂದ್ರಶೇಖರ್‌ಗಿಂತ ಕಡಿಮೆ ಓಟು ಬಂದಿತ್ತು. ನಾನು ಗೌರವಿಸುತ್ತಿದ್ದ ರಾಜಶೇಖರ ಮೂರ್ತಿಗಳಿಗೆ ‘ನಾನು ಸೋತಿದ್ದು ದೊಡ್ಡ ವಿಷಯವಲ್ಲ, ನಿಮಗೆ ಕಡಿಮೆ ಓಟು ಬಂದಿದ್ದು ವಿಷಾದಕರ’ ಎಂದು ಹೇಳಿದ್ದೆ.

ಈಗ ಅವರ ಕಾಲಾನಂತರ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಜನರಿಗೆ ಮಂಕುಬೂದಿ ಎರಚುವಂತೆ ಸುಂದರ ನಟಿಯೊಬ್ಬಳನ್ನು ಬಿಜೆಪಿ ನಿಲ್ಲಿಸಿದೆ. ಇದೇ ಮಂಕುಬೂದಿಯನ್ನು ಶಾಸ್ತ್ರಕ್ಕಾಗಿ ಎಸೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಬುದ್ಧಿಜೀವಿಯೊಬ್ಬರನ್ನು ನಿಲ್ಲಿಸಿದೆ. ಹೇಮಮಾಲಿನಿಗೆ ಇದರಿಂದ ಪ್ರಯೋಜನವಿದೆ; ಡಾ.ಮರುಳಸಿದ್ದಪ್ಪನವರಿಗೆ ಯಾವ ಪ್ರಯೋಜನವೂ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಮಡಿಸಿದ ತೋಳಿನ ಮೇಲಿನ ಸೆಕ್ಯುಲರ್ ಮಚ್ಚೆಯನ್ನು ಸುದ್ದಿ ಮಾಧ್ಯಮಗಳಲ್ಲಿ ತೋರಿ ಮೆರೆಯುವುದು ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT