ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್‌ಎಸ್‌ಎಸ್‌ನ ಅಂಬೇಡ್ಕರ್‌ ಪ್ರೀತಿ ಮತ್ತು ಮಿಥ್ಯೆ

ಸಂಘದ ನಿಲುವು ಬದಲಾವಣೆಯ ಕಾರಣವನ್ನು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಪ್ರಕಟಿಸಬೇಕು
Last Updated 27 ಸೆಪ್ಟೆಂಬರ್ 2018, 19:45 IST
ಅಕ್ಷರ ಗಾತ್ರ

ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮದಿನವನ್ನು 2016ರಲ್ಲಿ ಆಚರಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೊರಗೆ ತರುವ ಇಂಗ್ಲಿಷ್‍ ನಿಯತಕಾಲಿಕ ‘ಆರ್ಗನೈಸರ್’ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಫೋಟೊವನ್ನು ಮುಖಪುಟದಲ್ಲಿ ಪ್ರಕಟಿಸಿತು. ‘ಪರಮಶ್ರೇಷ್ಠ ಸಂಯೋಜಕ’ ಎಂದು ಅವರನ್ನು ತಾರೀಫು ಮಾಡಿತು. ಆ ಸಂಚಿಕೆಯಲ್ಲಿ (2016ರ ಏಪ್ರಿಲ್‍ 17) ಈ ಶ್ರೇಷ್ಠ ಮನುಷ್ಯನ ಬಗ್ಗೆ ಹಲವು ಲೇಖನಗಳಿದ್ದವು; ‘ರಾಷ್ಟ್ರ ನಿರ್ಮಾಣಕ್ಕೆ ಬೇಕಾಗಿದ್ದ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ’ ತಂದವರು ಅವರು ಎಂದು ಒಂದು ಲೇಖನದಲ್ಲಿ ಹೇಳಿದ್ದರೆ, ‘ಅವರ ದರ್ಶನ ಮತ್ತು ಚಟುವಟಿಕೆಗಳು ಬ್ರಹ್ಮ ಸಮಾಜ, ಪ್ರಾರ್ಥನಾ ಸಮಾಜ, ಆರ್ಯಸಮಾಜ ಮುಂತಾದವುಗಳನ್ನು ಹೋಲುತ್ತಿತ್ತು’ ಎಂದು ಇನ್ನೊಂದು ಲೇಖನ ವಿವರಿಸಿತ್ತು. ಕಾರ್ಮಿಕರ ಹಕ್ಕುಗಳ ಬಗ್ಗೆ ಅವರಿಗಿದ್ದ ಆಸಕ್ತಿಯನ್ನು ಒಂದು ಲೇಖನ ಹೊಗಳಿದರೆ ಮತ್ತೊಂದು ಲೇಖನವು ‘ಬ್ರಾಹ್ಮಣ ವಿರೋಧಿಯಲ್ಲದ ಆದರೆ ಬ್ರಾಹ್ಯಣ್ಯದ ವಿರೋಧಿಯಾಗಿದ್ದ’ ಅವರನ್ನು ‘ಕಾಲಾತೀತ ನಾಯಕ’ ಎಂದು ಶ್ಲಾಘಿಸಿತು.

ಎಲ್ಲ ಲೇಖನಗಳು ಮತ್ತು ಇಡೀ ಸಂಚಿಕೆ ಸಂಪೂರ್ಣವಾಗಿ ಸಂಭ್ರಮಪೂರ್ಣವಾಗಿತ್ತು. ಆದರೆ, ಆರ್‌ಎಸ್‍ಎಸ್‍ ಮತ್ತು ಅದರ ಮುಖವಾಣಿಯು ಅಂಬೇಡ್ಕರ್ ಅವರು ಜೀವಿಸಿದ್ದಾಗ ಅವರ ಬಗ್ಗೆ ಯಾವ ಭಾವನೆ ಹೊಂದಿದ್ದವು? ಇದಕ್ಕೆ ಉತ್ತರ ಹುಡುಕುತ್ತಾ 1949-50ರ ಅವಧಿಗೆ ನಾನು ಗಮನ ಕೇಂದ್ರೀಕರಿಸಿದ್ದೇನೆ. ಈ ದಿನಗಳಲ್ಲಿ ಅಂಬೇಡ್ಕರ್ ಅವರು ಕೇಂದ್ರದ ಕಾನೂನು ಸಚಿವರಾಗಿದ್ದರು. ಅವರು ಸಂವಿಧಾನವನ್ನು ಅಂತಿಮಗೊಳಿಸುವ ಮತ್ತು ಮಹಿಳೆಯರಿಗೆ ಹೆಚ್ಚಿನ ಹಕ್ಕುಗಳನ್ನು ನೀಡುವುದಕ್ಕಾಗಿ ಹಿಂದೂ ವೈಯಕ್ತಿಕ ಕಾನೂನು ಸುಧಾರಣೆಯ ಕೆಲಸದಲ್ಲಿ ನಿರತರಾಗಿದ್ದರು.

ಗಮನಾರ್ಹ ಅಂಶವೆಂದರೆ, ಈ ಎರಡೂ ಕೆಲಸಗಳಿಗೆ ಆರ್‌ಎಸ್‍ಎಸ್‍ನ ವಿರೋಧ ಇತ್ತು. ‘ಆರ್ಗನೈಸರ್‌’ನ 1949ರ ನವೆಂಬರ್ 30ರ ಸಂಚಿಕೆಯಲ್ಲಿ ಸಂವಿಧಾನದ ಬಗ್ಗೆ ಸಂಪಾದಕೀಯ ಇತ್ತು. ಅದಕ್ಕೆ ಸ್ವಲ್ಪ ಮೊದಲು, ಅಂಬೇಡ್ಕರ್ ಅವರು ಸಂವಿಧಾನದ ಅಂತಿಮ ಕರಡನ್ನು ಸಂವಿಧಾನ ರಚನಾ ಸಭೆಯ ಮುಂದೆ ಮಂಡಿಸಿದ್ದರು. ‘ಭಾರತದ ಹೊಸ ಸಂವಿಧಾನದ ಬಗೆಗಿನ ಅತ್ಯಂತ ಕೆಟ್ಟ ವಿಚಾರವೆಂದರೆ ಈ ಸಂವಿಧಾನದಲ್ಲಿ ಭಾರತೀಯವಾದುದು ಯಾವುದೂ ಇಲ್ಲ… ಪ್ರಾಚೀನ ಭಾರತೀಯ ಸಂವಿಧಾನದ ಕಾನೂನುಗಳು, ಸಂಸ್ಥೆಗಳು, ಹೆಸರುಗಳು, ನುಡಿಗಟ್ಟುಗಳ ಸುಳಿವೇ ಇಲ್ಲ’ ಎಂದು ಸಂಪಾದಕೀಯದಲ್ಲಿ ಬರೆಯಲಾಗಿತ್ತು. ‘ಪ್ರಾಚೀನ ಭಾರತದಲ್ಲಿ ನಡೆದ ಸಂವಿಧಾನ ಅಭಿವೃದ್ಧಿಯ ವಿಶಿಷ್ಟ ಯತ್ನಗಳ ಉಲ್ಲೇಖ ಇಲ್ಲ. ಸ್ಪಾರ್ಟಾದ ಲೈಕ್ರೂಗಸ್‌ ಅಥವಾ ಪರ್ಷಿಯಾದ ಸೊಲೊನ್‍ಗಿಂತ ಬಹಳ ಮೊದಲೇ ಮನುವಿನ ಕಾನೂನುಗಳು ರಚನೆಯಾಗಿದ್ದವು.

ಮನುಸ್ಮೃತಿಯಲ್ಲಿ ಅಡಕವಾಗಿರುವ ಈ ಕಾನೂನುಗಳ ಬಗ್ಗೆ ಜಗತ್ತಿನಾದ್ಯಂತ ಇಂದಿಗೂ ಮೆಚ್ಚುಗೆ ವ್ಯಕ್ತವಾಗುತ್ತಿವೆ ಮತ್ತು (ಭಾರತದ ಹಿಂದೂಗಳಿಗೆ) ಇದರ ಬಗ್ಗೆ ನಂಬಿಕೆ ಇದೆ ಮತ್ತು ಅವರು ಅದನ್ನು ಅನುಸರಿಸುತ್ತಿದ್ದಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಇದು ಅರ್ಥವೇ ಆಗಿಲ್ಲ’ ಎಂದು ಕೂಡ ಸಂಪಾದಕೀಯ ಹೇಳಿತ್ತು.

ಅಂಬೇಡ್ಕರ್ ಹೆಸರನ್ನು ಉಲ್ಲೇಖಿಸಿರಲಿಲ್ಲವಾದರೂ ಪ್ರಮುಖ ಸಾಂವಿಧಾನಿಕ ತಜ್ಞರಾಗಿದ್ದ ಅವರೇ ಆರ್‌ಎಸ್‌ಎಸ್‍ನ ಮುಖ್ಯ ಗುರಿ ಎಂಬುದು ಬಹಳ ಸ್ಪಷ್ಟ. ಅಂಬೇಡ್ಕರ್ ಪ್ರತಿಪಾದಿಸಿದ ವೈಯಕ್ತಿಕ ಕಾನೂನು ಸುಧಾರಣೆಗಳ ಬಗ್ಗೆ ಆರ್‌ಎಸ್‍ಎಸ್‍ ಇನ್ನೂ ಹೆಚ್ಚು ವಿಮರ್ಶಾತ್ಮಕವಾಗಿತ್ತು. ಆಗ ಸರಸಂಘಚಾಲಕರಾಗಿದ್ದ ಎಂ.ಎಸ್‍. ಗೊಳವಲ್ಕರ್ ಅವರು 1949ರ ಆಗಸ್ಟ್‌ನಲ್ಲಿ ಮಾಡಿದ್ದ ಭಾಷಣವೊಂದರಲ್ಲಿ ತಮ್ಮ ಆಕ್ಷೇಪಗಳನ್ನು ಹೇಳಿಕೊಂಡಿದ್ದರು: ‘ಇದರಲ್ಲಿ ಭಾರತೀಯತೆಯ ಅಂಶವೇ ಇಲ್ಲ. ಮದುವೆ ಮತ್ತು ವಿಚ್ಛೇದನದಂತಹ ವಿಚಾರಗಳನ್ನು ಅಮೆರಿಕ ಅಥವಾ ಬ್ರಿಟನ್‍ನ ಕಾನೂನುಗಳ ಮಾದರಿಯಲ್ಲಿ ನಮ್ಮಲ್ಲಿ ಪರಿಹರಿಸಿಕೊಳ್ಳುವುದು ಸಾಧ್ಯವಿಲ್ಲ. ಹಿಂದೂ ಸಂಸ್ಕೃತಿ ಮತ್ತು ಕಾನೂನು ಪ್ರಕಾರ ಮದುವೆ ಎಂಬುದು ಒಂದು ಸಂಸ್ಕಾರವಾಗಿದ್ದು, ಅದು ಸಾವಿನ ನಂತರವೂ ಬದಲಾಗುವುದಿಲ್ಲ. ಯಾವುದೇ ಸಂದರ್ಭದಲ್ಲಿ ಮುರಿದುಕೊಳ್ಳಲು ಅದು ‘ಕರಾರು’ ಅಲ್ಲ. ಹಿಂದೂ ಸಮಾಜಕ್ಕೆ ಸೇರಿದ ಕೆಲವು ಕೆಳ ಜಾತಿಗಳು ದೇಶದ ಕೆಲವು ಭಾಗಗಳಲ್ಲಿ ತಮ್ಮ ಪದ್ಧತಿಯಾಗಿಯೇ ವಿಚ್ಛೇದನ ವ್ಯವಸ್ಥೆಯನ್ನು ಒಪ್ಪಿಕೊಂಡಿವೆ ಎಂಬುದು ನಿಜ. ಆದರೆ, ಎಲ್ಲರೂ ಅನುಸರಿಸಬಹುದಾದ ಮಾದರಿ ಎಂದು ಇದನ್ನು ಒಪ್ಪಿಕೊಳ್ಳಲಾಗದು’ (ಆರ್ಗನೈಸರ್, 1949ರ ಸೆಪ್ಟೆಂಬರ್ 6).

ಹಿಂದೂ ಸಂಹಿತೆ ಮಸೂದೆಯನ್ನು ‘ಹಿಂದೂಗಳ ನಂಬಿಕೆಗಳ ಮೇಲೆ ನಡೆದ ನೇರ ದಾಳಿ’ ಎಂದು 1949ರ ನವೆಂಬರ್ 2ರ ‘ಆರ್ಗನೈಸರ್’ ಸಂಚಿಕೆ ಬಣ್ಣಿಸಿದೆ. ಮಹಿಳೆಯರನ್ನು ವಿಚ್ಛೇದನ ನೀಡುವುದಕ್ಕೆ ಶಕ್ತರನ್ನಾಗಿಸುವ ಪ್ರಸ್ತಾವ ಹಿಂದೂ ಸಿದ್ಧಾಂತದ ವಿರುದ್ಧದ ಬಂಡಾಯ’ ಎಂದು ಹೇಳಲಾಗಿದೆ. ಒಂದು ತಿಂಗಳ ಬಳಿಕ ಪ್ರಕಟವಾದ ಸಂಪಾದಕೀಯದ (ದ ಹಿಂದೂ ಕೋಡ್‍ ಬಿಲ್‍, ದ ಆರ್ಗನೈಸರ್, 1949ರ ಡಿಸೆಂಬರ್ 7) ಒಂದು ಪ್ಯಾರಾ ಹೀಗಿತ್ತು: ‘ಹಿಂದೂ ಸಂಹಿತೆ ಮಸೂದೆಯನ್ನು ನಾವು ವಿರೋಧಿಸುತ್ತೇವೆ. ಅನ್ಯ ಮತ್ತು ಅನೈತಿಕ ತತ್ವಗಳ ಮೇಲೆ ಆಧರಿತವಾಗಿರುವ ಈ ಮಸೂದೆ ಅವಮಾನಕರವಾಗಿದೆ ಎಂಬುದು ನಮ್ಮ ವಿರೋಧಕ್ಕೆ ಕಾರಣ. ಇದು ಹಿಂದೂ ಸಂಹಿತೆ ಮಸೂದೆ ಅಲ್ಲವೇ ಅಲ್ಲ, ಇದು ಹಿಂದೂ ಎಂಬುದನ್ನು ಬಿಟ್ಟು ಬೇರೆ ಏನು ಬೇಕಿದ್ದರೂ ಆಗಿರಬಹುದು. ಹಿಂದೂ ಕಾನೂನುಗಳು, ಹಿಂದೂ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮೇಲೆ ನಡೆಸಿದ ಕ್ರೌರ್ಯ ಮತ್ತು ಅವಮಾನ ಎಂಬ ಕಾರಣಕ್ಕೆ ಇದನ್ನು ನಾವು ವಿರೋಧಿಸುತ್ತೇವೆ’.

ಯಾರಿಗಾಗಿ ಈ ಸಂಹಿತೆಯನ್ನು ರೂಪಿಸಲಾಗಿದೆ ಎಂದು ಆರ್‌ಎಸ್ಎಸ್‍ ಭಾವಿಸಿತ್ತೋ ಅವರ ಬಗ್ಗೆಯೂ ಸಂಪಾದಕೀಯದಲ್ಲಿ ಪ್ರಸ್ತಾವ ಇದೆ: ‘ಕೆಲವೇ ಕೆಲವರ ಚಪಲಕ್ಕಾಗಿ ಕೆಲವು ವಿಧವೆಯರು ಮತ್ತು ವಿದುರರು, ಮಕ್ಕಳಿಲ್ಲದ ಮಹಿಳೆಯರು ಮತ್ತು ವೃದ್ಧ ವರರು ನಮ್ಮ ಪ್ರಾಚೀನ ಕಾನೂನನ್ನು ದುರ್ಬಲಗೊಳಿಸುವುದಕ್ಕಾಗಿ ಒಟ್ಟಾಗಿದ್ದಾರೆ’. ನಂತರ, ಈ ಮಸೂದೆಯ ಸೃಷ್ಟಿಕರ್ತರಾದ ಇಬ್ಬರು ವ್ಯಕ್ತಿಗಳ ಮೇಲೆಯೂ ನೇರವಾಗಿ ದಾಳಿ ನಡೆಸಲಾಗಿದೆ. ‘ಆರ್ಗನೈಸರ್’ ಅವರನ್ನು ವ್ಯಂಗ್ಯವಾಗಿ ‘ಋಷಿ ಅಂಬೇಡ್ಕರ್ ಮತ್ತು ಮಹಾಋಷಿ ನೆಹರೂ’ ಎಂದು ಕರೆದಿದೆ. ಇವರ ಸುಧಾರಣೆಗಳು ‘ಸಮಾಜವನ್ನು ಒಡೆಯುತ್ತವೆ ಮತ್ತು ಪ್ರತಿ ಕುಟುಂಬಕ್ಕೆ ಕಳಂಕ, ಶಂಕೆ ಮತ್ತು ಅನೀತಿಯ ಸೋಂಕು ಹರಡುತ್ತವೆ’ ಎಂದು ಪ್ರತಿಪಾದಿಸಿತ್ತು.

ಮಸೂದೆಯು ಕುಟುಂಬಗಳನ್ನು ಒಡೆಯಲಿದೆ ಮತ್ತು ಸೋದರಿಯ ವಿರುದ್ಧ ಸೋದರನನ್ನು ಎತ್ತಿಕಟ್ಟಲಿದೆ (ಆಸ್ತಿ ಉತ್ತರಾಧಿಕಾರದ ವಿಚಾರದಲ್ಲಿ) ಎಂದು ‘ಆರ್ಗನೈಸರ್’ ಭಾವಿಸಿತ್ತು. ಪ್ರಾಚೀನ ಹಿಂದೂ ಕಾನೂನುಗಳನ್ನು ರೂಪಿಸಿದವರು ಮತ್ತು ಋಷಿಗಳನ್ನು ಸಮರ್ಥಿಸುವ ಭರದಲ್ಲಿ ಪುರುಷಪ್ರಧಾನ ವ್ಯವಸ್ಥೆಯ ಎಲ್ಲ ಆಯಾಮಗಳನ್ನೂ ಆರ್‌ಎಸ್‍ಎಸ್‍ ಸಮರ್ಥಿಸಿಕೊಂಡಿತ್ತು. ತಮ್ಮ ವೈವಾಹಿಕ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ, ಕ್ರೂರ ಗಂಡನಿಂದ ವಿಚ್ಛೇದನ ಪಡೆಯುವ ಆಯ್ಕೆ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕುಗಳನ್ನು ಮಹಿಳೆಯರಿಗೆ ನೀಡಲು ಸಂಹಿತೆಯು ಉದ್ದೇಶಿಸಿದ್ದು ಆರ್‌ಎಸ್‍ಎಸ್‍ನ ಕೋಪಕ್ಕೆ ಕಾರಣವಾಗಿತ್ತು (ಅಲ್ಲಿವರೆಗೆ ಮಹಿಳೆಯರಿಗೆ ಈ ಯಾವ ಹಕ್ಕುಗಳೂ ಇರಲಿಲ್ಲ).

ಹಿಂದೂ ಸಂಹಿತೆ ಮಸೂದೆಯ ಮೇಲೆ ಆರ್‌ಎಸ್‍ಎಸ್‍ ಕೂಡ ಪೂರ್ಣಪ್ರಮಾಣದ ದಾಳಿಯನ್ನು ಆರಂಭಿಸಿತು. ಮಸೂದೆಯನ್ನು ಕೈಬಿಡುವಂತೆ ಒತ್ತಡ ಹೇರುವುದಕ್ಕಾಗಿ ನೂರಾರು ಮೆರವಣಿಗೆಗಳು, ಧರಣಿಗಳು, ಹರತಾಳಗಳನ್ನು ನಡೆಸಲಾಯಿತು. ಸಾಧುಗಳು ಮತ್ತು ಸಂತರು ಈ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಮಾತನಾಡಿದರು. ಒಬ್ಬ ಭಾಷಣಕಾರ ಹೀಗೆ ಹೇಳಿದ್ದರು: ‘ಮಸೂದೆಯನ್ನು ರೂಪಿಸಿದ ಬಿ.ಎನ್‍. ರಾವ್‍ ಮತ್ತು ಅದನ್ನು ಶಾಸಕಾಂಗದಲ್ಲಿ ಪ್ರತಿಪಾದಿಸುತ್ತಿರುವ ಅಂಬೇಡ್ಕರ್‌ ಅವರಿಬ್ಬರೂ ತಾವು ಹಿಂದೂಗಳಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಹಿಂದೂಯೇತರ ವಿಧಿ ಪ್ರಕಾರ ಮದುವೆ ಆಗಿದ್ದಾರೆ. ಇಂತಹ ವ್ಯಕ್ತಿಗಳಿಗೆ ಹಿಂದೂ ಧರ್ಮ ಸುಧಾರಣೆಯ ಕೆಲಸವನ್ನು ವಹಿಸಿದ್ದೇ ದುರಂತ ಮತ್ತು ವಿಲಕ್ಷಣವಾದುದಾಗಿದೆ’ (ಆರ್ಗನೈಸರ್, 1949ರ ಡಿಸೆಂಬರ್ 14).

ಮಸೂದೆಯ ವಿರುದ‍್ಧದ ಚಳವಳಿ ತಿಂಗಳುಗಳ ಕಾಲ ನಡೆಯಿತು. ‘ಆರ್ಗನೈಸರ್‌’ನಲ್ಲಿ ಈ ವಿಚಾರದಲ್ಲಿ ಹಲವು ಲೇಖನಗಳು ಪ್ರಕಟವಾದವು. ‘ನೆಹರೂ ಮತ್ತು ಅಂಬೇಡ್ಕರ್ ಅವರು ಕನಸು ಕಾಣಬಹುದಾದುದಕ್ಕಿಂತಲೂ ಹೆಚ್ಚಿನದ್ದು ಹಿಂದೂ ಧರ್ಮ ಮತ್ತು ಅದರ ಸಂಸ್ಥೆಗಳಲ್ಲಿ ಇವೆ’ ಎಂದು ಒಂದು ಲೇಖನದಲ್ಲಿ ಹೇಳಲಾಗಿತ್ತು.

1950ರ ಜನವರಿ 11ರ ‘ಆರ್ಗನೈಸರ್’ ಸಂಚಿಕೆಯಲ್ಲಿ ಕೆ.ಡಿ.ಪಿ. ಶಾಸ್ತ್ರಿ ಎಂಬುವರು ದೀರ್ಘವಾದ ಪತ್ರ ಬರೆದು ‘ಫ್ರೀ ಇಂಡಿಯಾ’ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿದ್ದ ಲೇಖನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಲೇಖನದಲ್ಲಿ ಅಂಬೇಡ್ಕರ್ ಅವರನ್ನು ‘ಆಧುನಿಕ ಭಾರತದ ಮನು’ ಎಂದು ಬಣ್ಣಿಸಲಾಗಿತ್ತು. ‘ಇದು ಪುಟಾಣಿಯನ್ನು ದೈತ್ಯದೇಹಿಗೆ ಹೋಲಿಸಿದಂತೆ. ವಿದ್ವಾಂಸ ಮತ್ತು ದೇವರಂತಹ ಮನುಷ್ಯ ಮನುವಿನೊಂದಿಗೆ ಅಂಬೇಡ್ಕರ್ ಅವರನ್ನು ಹೋಲಿಸುವುದು ಒಂದು ತಮಾಷೆ…’ ‘ಅಂಬೇಡ್ಕರ್ ಅವರು ಹಿಂದೂ ಧರ್ಮಕ್ಕೆ ಮಾಡುತ್ತಿರುವ ಅಪಚಾರ ಎಲ್ಲರಿಗೂ ಗೊತ್ತಿರುವುದೇ ಆಗಿದೆ’ ಎಂದು ಈ ಪತ್ರದಲ್ಲಿ ಆಕ್ರೋಶದಲ್ಲಿ ಹೇಳಲಾಗಿತ್ತು. ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಹೊಂದುವುದಕ್ಕೆ ಮತ್ತು 1947ಕ್ಕೆ ಮೊದಲು, ಪಾಕಿಸ್ತಾನ ಪರವಾಗಿದ್ದ ಬಂಗಾಳಿ ದಲಿತ ನಾಯಕ ಜೋಗೇನ್‍ ಮಂಡಲ್‍ ಜತೆ ಸೇರುವುದಕ್ಕೆ ಅಂಬೇಡ್ಕರ್ ಅವರಿಗೆ ಇದು ಪ್ರೇರಕವಾಗಿದ್ದವು. ‘ಅಂಬೇಡ್ಕರ್ ಅವರು ಈಗ ಒಬ್ಬ ಒಳ್ಳೆಯ ಭಾರತೀಯ ಆಗಿರಬಹುದು, ಆದರೆ ಯಾವುದೇ ಕಾಲದಲ್ಲಿಯೂ ಅವರು ಮನು ಆಗುವುದಕ್ಕೆ ಸಾಧ್ಯವಿಲ್ಲ’ ಎಂದು ಆರ್‌ಎಸ್‍ಎಸ್‍ನ ಈ ಪತ್ರ ಬರಹಗಾರ ಹೇಳಿದ್ದರು.

ವ್ಯಕ್ತಿಗಳಿಗೆ ಇರುವ ಹಾಗೆಯೇ ತಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳುವ ಹಕ್ಕು ಸಂಘಟನೆಗಳಿಗೂ ಇದೆ. ಆದರೆ, ಇಂತಹ ಯಾವುದೇ ಬದಲಾವಣೆಯ ಜತೆಗೆ ಅದು ಯಾಕೆ ಮತ್ತು ಹೇಗೆ ಆಯಿತು ಎಂಬ ಮುಕ್ತ ಮತ್ತು ಪ್ರಾಮಾಣಿಕವಾದ ಗುರುತಿಸುವಿಕೆಯೂ ಇರಬೇಕು. 1949ರ ನವೆಂಬರ್‌ನಲ್ಲಿ ‘ಆರ್ಗನೈಸರ್‌’ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ತಾನು ಪ್ರತಿಪಾದಿಸುವ ಹಿಂದೂ ಸಂಸ್ಕೃತಿ, ಪರಂಪರೆ, ಮೌಲ್ಯ ಮತ್ತು ವ್ಯಾಖ್ಯಾನಗಳ ‘ನಿಷ್ಠೆ ಮತ್ತು ಅನುಸರಣೆ’ಯನ್ನಷ್ಟೇ ಆರ್‌ಎಸ್‍ಎಸ್‍ ಬಯಸುತ್ತದೆ. ಸುಧಾರಣಾವಾದಿ, ಸಮಾನತಾವಾದಿ ಮತ್ತು ಪುರುಷಪ್ರಧಾನ ವ್ಯವಸ್ಥೆ ವಿರೋಧಿಯಾದ ಅಂಬೇಡ್ಕರ್ ಅವರಂತಹ ಸುಧಾರಕರು ಅದನ್ನು ಯಾವತ್ತೂ ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂಬುದು ಸಹಜ.

ಕೆಲವು ಪ್ರಮುಖ ಕಾರಣಗಳಿಂದಾಗಿ ಅಂಬೇಡ್ಕರ್ ಅವರನ್ನು ತಮ್ಮವರನ್ನಾಗಿ ಮಾಡಿಕೊಳ್ಳಲು ಆರ್‌ಎಸ್‍ಎಸ್‍ ಮತ್ತು ಬಿಜೆಪಿ ಬಯಸುತ್ತಿವೆ. ಅಂಬೇಡ್ಕರ್ ಅವರನ್ನು ಅಪಾರವಾಗಿ ಗೌರವಿಸುವ ದಲಿತ ಸಮುದಾಯದ ಮನವೊಲಿಸಿ ಅವರ ಬೆಂಬಲ ಮತ್ತು ಮತ ಪಡೆಯುವುದು ಮುಖ್ಯ ಕಾರಣ. ಆದರೆ, ಅಪ್ಪಟ ಮತ್ತು ಯಾವುದೇ ಬಣ್ಣವಿಲ್ಲದ ಸತ್ಯ ಏನೆಂದರೆ, ದಲಿತ ಸಮುದಾಯದ ಈ ಮಹಾವಿಮೋಚಕ ಜೀವಿಸಿದ್ದಾಗ ಸಂಘ ಪರಿವಾರ ಅವರನ್ನು ಸದಾ ದ್ವೇಷಿಸಿದೆ. ಹಾಗಾಗಿಯೇ ಈಗ ಅಂಬೇಡ್ಕರ್ ಬಗ್ಗೆ ಆರ್‌ಎಸ್‍ಎಸ್‍ ತೋರುವ ಗೌರವದ ಬಗ್ಗೆ ಭಾರಿ ಅನುಮಾನ ಉಂಟಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT