ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಡ್ಗದಿಂದ ಸಾಧ್ಯವಾಗದ್ದು ಪ್ರೀತಿಯಿಂದ ಸಾಧ್ಯ

Last Updated 16 ಜೂನ್ 2018, 9:20 IST
ಅಕ್ಷರ ಗಾತ್ರ

ಚೀನಾ ದೇಶದ ಬೀಜಿಂಗ್ ಪ್ರಾಂತ್ಯದ ಬಳಿ ಒಂದೂರಿನಲ್ಲಿ ಒಬ್ಬ ರೈತನಿದ್ದ. ಅವನು ಎಷ್ಟು ಒಳ್ಳೆಯವನೆಂದರೆ ಎಲ್ಲರೂ ಅವನನ್ನು ಸಂತನಂತೇ ಕಾಣುತ್ತಿದ್ದರು. ಆತ ತನ್ನ ಕಾರ್ಯವನ್ನು ಮನಸಿಟ್ಟು ಮಾಡುತ್ತಿದ್ದ. ತನ್ನಿಂದ ಯಾರಿಗೂ ಅನ್ಯಾಯವಾಗದಂತೆ ಎಚ್ಚರ ವಹಿಸುತ್ತಿದ್ದ. ಆತನ ಜೀವನ ಅತ್ಯಂತ ಸಾತ್ವಿಕ, ಸರಳ. ಆತ ಮನಸ್ಸಿನಲ್ಲಿಯೂ ಮತ್ತೊಬ್ಬರ ಬಗ್ಗೆ ಕೆಟ್ಟ ವಿಚಾರ ಮಾಡಲಾರ.

ಯಾರಾದರೂ ಅವನ ಬಳಿಗೆ ಸಹಾಯ ಕೇಳಿ ಬಂದರೆ ಅವನ ನಗುಮೊಗದ ಸಹಾಯಹಸ್ತ ಸಿದ್ಧವಾಗಿಯೇ ಇರುತ್ತಿತ್ತು. ಆ ರೈತ ಜನರ ಪಾಲಿಗೆ ಆಶಾದೀಪವಾಗಿದ್ದ, ಬಂಧುವಾಗಿದ್ದ, ಗುರುವಾಗಿದ್ದ. ಅದೇ ಊರಿನಲ್ಲಿ ಮತ್ತೊಬ್ಬ ಶ್ರೀಮಂತ ರೈತನಿದ್ದ. ಅವನಿಗೆ ಬಹಳ ವಿಸ್ತಾರವಾದ ಜಮೀನಿತ್ತು. ಅವನ ಕೈ ಕೆಳಗೆ ಕೆಲಸ ಮಾಡಲು ನೂರಾರು ಕೂಲಿಯಾಳುಗಳು. ಅವನು ಗಳಿಸಿಟ್ಟ ಆಸ್ತಿಗೆ ಲೆಕ್ಕವೇ ಇಲ್ಲ.
ಆದರೆ ಆತ ದರ್ಪದ ಮನುಷ್ಯ, ಅಹಂಕಾರಿ. ಅವನಿಗೆ ಎಲ್ಲರ ಮೇಲೆ ಆಡಳಿತ ನಡೆಸುವುದರಲ್ಲಿಯೇ ಸಂತೋಷ. ಯಾರ ಬಗ್ಗೆಯೂ ಪ್ರೀತಿಯಿಲ್ಲ ಆತನಿಗೆ. ಊರಿನ ಜನರೆಲ್ಲ ಅವನ ದುಡ್ಡಿನಿಂದಾಗಿ ಅವನಿಗೆ ಮರ್ಯಾದೆ ನೀಡುತ್ತಿದ್ದರೇ ವಿನಾ ಯಾರೂ ಅವನಿಗೆ ಪ್ರೀತಿ ತೋರಿಸುತ್ತಿರಲಿಲ್ಲ.

ಶ್ರೀಮಂತ ರೈತ ತನ್ನ ಪಾಡಿಗೆ ತಾನು ಸುಮ್ಮನಿರಬಹುದಿತ್ತು. ಆದರೆ ಮನದಲ್ಲಿಯ ಅಸೂಯೆ ಸುಮ್ಮನೆ ಕೂಡ್ರಗೊಡುತ್ತದೆಯೇ? ಊರ ಜನರೆಲ್ಲ ಆ ಬಡ ರೈತನಿಗೆ ಅಷ್ಟೊಂದು ಮರ್ಯಾದೆಯನ್ನು, ಪ್ರೀತಿಯನ್ನು ನೀಡುವುದು ಅವನಿಗೆ ನುಂಗಲಾರದ ತುತ್ತಾಗಿತ್ತು.ಆ ದರಿದ್ರ ರೈತನಿಗೆ ದೊರಕುವ ಗೌರವ ತನಗೆ ದೊರಕುತ್ತಿಲ್ಲವಲ್ಲ ಎಂದು ಸಂಕಟಪಡುತ್ತಿದ್ದ. ಸಮಯ ದೊರೆತಾಗಲೆಲ್ಲ ಬಡರೈತನಿಗೆ ಅವಮಾನವಾಗುವ ಹಾಗೆ ನಡೆದುಕೊಳ್ಳುತ್ತಿದ್ದ. ಇದರಿಂದಾಗಿ ಜನರ ಕೋಪ ಹೆಚ್ಚಾಯಿತೇ ವಿನಾ ಯಾವ ಪ್ರಯೋಜನವೂ ಆಗಲಿಲ್ಲ.

ವಿಚಿತ್ರವೆಂದರೆ ಆ ಬಡರೈತ ಮಾತ್ರ ತನಗೆ ಅಪಮಾನವಾಯಿತೆಂದು ಒಂದು ಬಾರಿಯೂ ಗೊಣಗಲಿಲ್ಲ, ಮುಖ ಗಂಟಿಕ್ಕಿಕೊಳ್ಳಲಿಲ್ಲ, ಬದಲಾಗಿ ಶ್ರೀಮಂತ ರೈತನ ಪರವಾಗಿ ಒಳ್ಳೆಯ ಮಾತನ್ನೇ ಆಡುತ್ತಿದ್ದ.ಇದು ಹೀಗೆಯೇ ಬೆಳೆದು ಶ್ರೀಮಂತ ರೈತನಿಗೆ ತಡೆದುಕೊಳ್ಳಲಾರದಷ್ಟರ ಮಟ್ಟಿಗೆ ಹೋಯಿತು. ಹೊಟ್ಟೆ ಕಿಚ್ಚಿನ ಬೆಂಕಿಯೇ ಹಾಗೆ. ಅದು ಅಸೂಯೆ ಪಡುವವನನ್ನೇ ಮೊದಲು ಸುಡುತ್ತದೆ. ಶ್ರೀಮಂತ ರೈತ ತೀರ್ಮಾನ ಮಾಡಿದ, ಇನ್ನು ಆ ಸಣ್ಣ ರೈತ ಬದುಕಬಾರದು. ಬೇರೆ ಯಾರಿಗಾದರೂ ಹೇಳಿ ಅವನನ್ನು ಕೊಲ್ಲಿಸಿದರೆ ಒಂದಲ್ಲ ಒಂದು ದಿನ ಸತ್ಯ ಹೊರಗೆ ಬರುತ್ತದೆ.

ಆ ಕೆಲಸವನ್ನು ತಾನೇ ಮಾಡಿ ಮುಗಿಸಿದರೆ ಯಾರಿಗೂ ತಿಳಿಯುವುದಿಲ್ಲ ಎಂದು ಯೋಜಿಸಿದ. ಮುಂದಿನ ತಿಂಗಳು ಊರ ಮುಂದಿರುವ ಬೆಟ್ಟದ ಮೇಲೆ ಊರ ಜಾತ್ರೆ ನಡೆಯುವುದಿತ್ತು. ಆ ಸಮಯಕ್ಕಾಗಿ ಕಾಯ್ದ,ಊರ ಜನರೆಲ್ಲ ಜಾತ್ರೆಗೆ ಹೋಗಿದ್ದಾಗ ತಾನು ಮುಖ ಮುಚ್ಚಿಕೊಂಡು, ಬಗಲಲ್ಲಿ ಹರಿತವಾದ ಮಚ್ಚನಿಟ್ಟುಕೊಂಡು ಸಣ್ಣ ರೈತನ ಗುಡಿಸಲಿಗೆ ಹೋದ. ಕಿಟಕಿಯಿಂದ ಇಣುಕಿ ನೋಡಿದ. ರೈತ ಮಲಗಲು ತಯಾರಿ ಮಾಡುತ್ತಿದ್ದು ಮಲಗುವ ಮೊದಲು ಪ್ರಾರ್ಥನೆ ಮಾಡಿದ, ‘ದೇವರೇ ಎಲ್ಲರಿಗೂ ಸದ್ಬುದ್ಧಿ ಕೊಡು. ನಮ್ಮ ಊರಿನ ಜನ ಯಾಕೋ ನಮ್ಮ ಶ್ರೀಮಂತ ರೈತನ ಬಗ್ಗೆ ಒಳ್ಳೆಯ ಮಾತನಾಡುತ್ತಿಲ್ಲ.

ಆದರೆ ಆತ ನಿಜವಾಗಿಯೂ ಒಳ್ಳೆಯ ಮನುಷ್ಯ. ಜನರಿಗೆ ಅವನ ಬಗ್ಗೆ ಸರಿಯಾದ ಕಲ್ಪನೆ ಇಲ್ಲ. ಭಗವಂತಾ, ದಯವಿಟ್ಟು ಅವನಿಗೆ ಒಳ್ಳೆಯ ಮನಸ್ಸು ಕೊಡು, ಅವನಿಗೆ ಐಶ್ಚರ್ಯ ಕೊಡು, ಅವನ ಮನೆಯ ಮಂದಿಗೆ ಆಯಸ್ಸು, ಸಂತೃಪ್ತಿಕೊಡು’ ಎಂದು ಭಕ್ತಿಯಿಂದ ಕೈಮುಗಿದ. ಹೊರಗೆ ನಿಂತಿದ್ದ ಶ್ರೀಮಂತನಿಗೆ ಆಘಾತ. ತಾನು ಯಾರನ್ನು ಕೊಲ್ಲಬೇಕೆಂದು ಬಂದಿದ್ದೆನೋ ಅವನು ತನ್ನ ಶ್ರೇಯಸ್ಸಿಗೆ ಪ್ರಾರ್ಥನೆ ಮಾಡುತ್ತಿದ್ದಾನೆ. ಅವನ ಪ್ರೀತಿಗೆ ಶರಣಾದ. ಮಚ್ಚನ್ನು ಎಸೆದು, ಗುಡಿಸಲಿನ ಒಳಗೆ ಹೋಗಿ ರೈತನ ಕಾಲು ಹಿಡಿದುಕೊಂಡು ಅತ್ತ.

ಅಕಾರಣವಾದ ಪ್ರೀತಿ ಬಹುದೊಡ್ಡ ಅಸ್ತ್ರ. ಅದು ಯಾರನ್ನಾದರೂ, ಯಾವುದನ್ನಾದರೂ ಗೆಲ್ಲುತ್ತದೆ. ಖಡ್ಗದಿಂದ ಆಗದ್ದು ಪ್ರೀತಿಯ ಒರತೆಯಿಂದ ಸಾಧ್ಯವಾಗುತ್ತದೆ. ಇದು ಪ್ರಪಂಚದ ಇತಿಹಾಸ ಕಲಿಸಿದ ಬಹುದೊಡ್ಡ ಪಾಠ. ಇದುವರೆಗೂ ಜಗತ್ತನ್ನು ಬರೀ ಬಲದಿಂದ ಗೆದ್ದವರು ಇಲ್ಲ. ಗೆದ್ದವರೆಲ್ಲ ಪ್ರೇಮದಿಂದಲೇ ಗೆದ್ದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT