ನಿಮ್ಮೂರ್ ಕಡೆ ಜನ ತುಂಬಾ ಒರಟು ಅಲ್ವಾ?
ಹೌದಾ?
ಯಾಕೆ ಹಾಗಂತೀರಾ?
ಅಯ್ಯೋ, ಮಾತ್ ಮಾತಿಗೂ ಜಗಳಕ್ಕೇ ಬಂದವರ ಹಾಗೆ ಮಾತಾಡ್ತಾರಪ್ಪಾ! ಅಲ್ದೆ ಎಷ್ಟ್ ಬೈಗುಳ ಉಪ್ಯೋಗಿಸ್ತಾರೆ ಅಂತಾ? ನಮ್ಮ ಚಿಕ್ಕಮ್ಮನ ಮಗಳನ್ನು ನಿಮ್ಮೂರಿನ ಕಡೆನೇ ಮದುವೆ ಮಾಡಿದ್ರು. ಆ ಮನೇಲಿ ಬೈಗುಳ ಕೇಳಕ್ಕಾಗಲ್ಲ, ಅಲ್ದೆ ಜನ ಬೇರೆ ಒರಟು ಅಂತ ವಾಪಾಸ್ ಬಂದ್ ಬಿಟ್ಲು.

ಹೌದಾ? ಆಮೇಲೆ?
ಆಮೇಲೇನಿಲ್ಲ. ಅವಳ ಗಂಡ ಬೆಂಗಳೂರಿಗೆ ಕೆಲ್ಸ ನೋಡ್ಕೊಂಡು ಶಿಫ್ಟ್ ಆದ್ರು. ಆಮೇಲೆ ನಮ್ಮಕ್ಕ ಅಲ್ಲಿಗೇ ಹೋದ್ಲು. ಭಾವನ್ ಮಾತ್ ಸುಧಾರಿಸೋಕೂ ಬಹಳ ದಿನ ಬೇಕಾಯ್ತು. ಈಗ ಪರ್ವಾಗಿಲ್ಲ, ನಾಲ್ಕೈದು ವರ್ಷ ಆಯ್ತು...

ದಾವಣಗೆರೆಯಲ್ಲಿ ಪದವಿ ಮುಗಿಸಿ ಓದು ಮುಂದುವರೆಸಲು ಮೈಸೂರಿಗೆ ಬಂದಾಗ ಹಾಸ್ಟೆಲ್ಲಿನಲ್ಲಿ ಪರಿಚಯವಾದ ಮೈಸೂರು ಸೀಮೆಯ ಹುಡುಗಿಯೊಬ್ಬಳ ಜೊತೆಗಿನ ಸಂಭಾಷಣೆ ಇದು.

ದಾವಣಗೆರೆಯ ಬೈಗುಳದ ಐಡೆಂಟಿಟಿ ಅಲ್ಲಿಂದ ಶುರುವಾಗಿ ಕರ್ನಾಟಕದ ಉತ್ತರ ಭಾಗವನ್ನು ಸಂಪೂರ್ಣವಾಗಿ ಮೈ ತಬ್ಬುತ್ತದೆ. ಮೈಸೂರು ಬೆಂಗಳೂರಿನ ಕಡೆಯವರಿಗೆ ಅಥವಾ ಸ್ನಾನ ಮಾಡಿಸಿ ಮಡಿಯುಡಿಸಿದಂತೆ ಸ್ವಚ್ಛ ಕನ್ನಡ ಮಾತಾಡುವವರಿಗೆ ಆ ಕಡೆಯ ಮಾತುಗಳು ಮೈ ಮೇಲೆ ಪೆಟ್ಟು ಬಿದ್ದಂತೆ ಬಾರು ಮೂಡಿಸಿದರೂ ಆಶ್ಚರ್ಯವಿಲ್ಲ. ಅವರ ಕಷ್ಟ ನಮಗೆ ಅರ್ಥವಾಗುತ್ತದಾದರೂ, ನಮ್ಮ ಜನಗಳ ಅಭ್ಯಾಸಬಲ ಮತ್ತು ನಮ್ಮತನವನ್ನೂ ಬೇರೆಯವರು ಅರ್ಥ ಮಾಡಿಕೊಂಡರೆ ಇಲ್ಲಿನ ಜನರ ಗಾಢ ರೀತಿ ವಿಶ್ವಾಸಗಳೂ ದೊರೆಯುವುದರಲ್ಲಿ ಸಂಶಯವೇ ಇಲ್ಲ.

ಬಹು ಮುಖ್ಯವಾದ ವಿಷಯವೆಂದರೆ, ನೇಟಿವಿಟಿ ಅಥವಾ ಸ್ಥಳೀಯ ಸಂಸ್ಕೃತಿ ಗಾಢವಾಗಿ ಜೀವಂತವಿರುವ ಯಾವುದೇ ಊರಿನಲ್ಲೂ ಈ ತೆರನ ಭಾಷಾ ಬಳಕೆ ಸಾಮಾನ್ಯವಾಗಿರುತ್ತದೆ.

ಬೈಗುಳ ಬರೀ ಬೈಗುಳಾಗದೆ ಒಂದು ರೀತಿ ಅಭಿವ್ಯಕ್ತಿಯಾಗಿರುತ್ತದೆ. ಮಾತಿನ ಒಂದು ಬಣ್ಣವಾಗಿರುತ್ತದೆ. ಅದನ್ನು ವ್ಯಾಖ್ಯಾನಿಸಿ ನೋಡುವುದು ಒಂದು ರೀತಿ ಮಾತನ್ನು ಅದರ ಭಾವಾರ್ಥ ಮೀರಿ ವಾಚ್ಯಾರ್ಥದಲ್ಲಿ ತೊಳೆದಂತೆ. ಹಾಗೆ ಮಾಡುವುದು ಮಹಾ ಅಪರಾಧವಾಗುತ್ತದೆ!

ಹಳ್ಳಿ-ನಗರಗಳ ನಡುವೆ ಇರುವ ವ್ಯತ್ಯಾಸಗಳಲ್ಲಿ ಇದೂ ಒಂದು. ಇದು ಬಹಳ ಮುಖ್ಯವಾದ ವ್ಯತ್ಯಾಸ. ನಮ್ಮ ವಾರಗೆಯವರಾದ ರುದ್ರೇಶಿಗೂ ಮಂಜನಿಗೂ ಒಮ್ಮೆ ಹೊಡೆದಾಟಕ್ಕೆ ಬಿತ್ತು. ಹೇಗೆ ಹೊಡೆದಾಡಿಕೊಂಡಿದ್ದರೆಂದರೆ ಮಕ್-ಮಕ ನೋಡದೆ ಒಬ್ಬರಿಗೊಬ್ಬರು ‘ತೋಪಿ’ (ಹೊಡೆತ) ಬಿಟ್ಟುಕೊಂಡಿದ್ದರು.

ಕಾರಣ ಬಹಳ ದಿನ ತಿಳಿಯಲಿಲ್ಲ. ತಿಂಗಳುಗಳು ಕಳೆದವು. ಅವನ ಜೊತೆ ಮಾತಾಡುತ್ತಿದ್ದ ಸ್ನೇಹಿತರನ್ನು ಇವನು ದೂರ ಇಡುತ್ತಿದ್ದ. ಇವನ ಜೊತೆ ಓಡಾಡುತ್ತಿದ್ದ ಸ್ನೇಹಿತರನ್ನು ಅವನು ದೂರ ಇಡುತ್ತಿದ್ದ. ಇದರ ಮಧ್ಯೆ ಮಂಜನ ಅಪ್ಪ ತೀರಿ ಹೋದರು. ಇಬ್ಬರು ಅಕ್ಕಂದಿರ ಒಬ್ಬನೇ ತಮ್ಮನಾದ ಮಂಜನ ಮೇಲೆ ಅಗಾಧ ಹೊರೆ ಬಿತ್ತು. ಸ್ವಲ್ಪ ಸ್ವಲ್ಪವಾಗಿ ಬಿಸಿ ರಕ್ತ ರೂಂ ಟೆಂಪರೇಚರ್ರಿಗೆ ಬಂತು.

ಆಮೇಲೆ ಯಾವಾಗಲೋ ಇಬ್ಬರೂ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿದ ಮೇಲೆ ಕಾರಣ ಕೇಳಲು ಧೈರ್ಯವಾಯಿತು. ಯಾರನ್ನು ಕೇಳುವುದು ಎಂಬುದು ಒಂದು ದೊಡ್ಡ ಪ್ರಶ್ನೆ. ಇಬ್ಬರಲ್ಲಿ ಯಾರು ಉತ್ತಮ ಎಂದು ಪ್ರಶ್ನೆ ಮೂಡುವುದೇ ಅಪ್ರಸ್ತುತ. ಯಾಕೆಂದರೆ, ಕಾರಣ ಹೀಗಿತ್ತು. ರುದ್ರೇಶಿ ಸ್ವಲ್ಪ ಜಾಸ್ತಿ ಮುಂಗೋಪಿ. ಮಂಜ ಸ್ವಲ್ಪ ಕಡಿಮೆ ಮುಂಗೋಪಿ. ಸಿಟ್ಟು ಎನ್ನುವುದು ಇಬ್ಬರಿಗೂ ಆಸಿಡಿಟಿ ಇದ್ದಷ್ಟೇ ಸಾಮಾನ್ಯ ಸಂಗತಿಯಂತೆ ಇರುವಾಗ ಯಾರನ್ನು ಅಂತ ಮಾತಾಡಿಸುವುದು?

ನಮ್ಮ ‘ಬಾಯ್ಕಟ್’ ಸುಮಾಳನ್ನು ಈ ಕೆಲಸಕ್ಕೆ ನಿಯೋಜಿಸಲಾಯ್ತು. ಸುಮಾ ಕಡಿಮೆ ಏನಲ್ಲ. ಹುಡುಗರ ಹತ್ತಿರ ಮಾತನಾಡಿ ಅವರ ವಿಷಯಗಳನ್ನೆಲ್ಲ ತೆಗೆಯುವುದರಲ್ಲಿ ಎಕ್ಸ್ಪರ್ಟ್. ಅವಳಿಗೆ ಹುಡುಗರ ಎಲ್ಲ ಚಲನವಲನಗಳು ಗೊತ್ತಿದ್ದವು. ಹೊಡೆದಾಟಗಳಾದರೆ ಅದರ ತಿರುಳು ತಿಳಿಯುವ ತನಕ ಅವಳು ಸಮಾಧಾನವಾಗಿ ಕುಳಿತಿರಲು ಸಾಧ್ಯವೇ ಇರಲಿಲ್ಲ. ಹಾಗಾಗಿ ಇಂಥ ಫ್ಯಾಕ್ಟ್ ಫೈಂಡಿಂಗ್ ಕೆಲಸಗಳನ್ನು ಬಹಳ ಉತ್ಸಾಹದಿಂದ ಮಾಡಿ, ಗುಂಪಿನ ತನಕ ತರುವ ಹೊತ್ತಿಗೆ ಅದರ ಸ್ಕ್ರಿಪ್ಟ್ ಸಿದ್ಧ ಮಾಡಿ, ಕಂಪನಿ ನಾಟಕದ ಮಟ್ಟಿಗೆ ಮನರಂಜನೆಯ ಸಾಧ್ಯತೆಗಳನ್ನೆಲ್ಲ ಹೆಚ್ಚಿಸಿರುತ್ತಿದ್ದಳು. ಗುಂಪಿನ ಸಲಹೆ ಮೇರೆಗೆ ಮಂಜನನ್ನು ಮಾತಾಡಿಸುವುದು ಅಂತ ನಿರ್ಧಾರವಾಯ್ತು.

ಆದಷ್ಟು ಜನನಿಬಿಡ ಜಾಗಗಳಲ್ಲಿ ಅವನು ಕಂಡಾಗ ಮಾತಾಡಿಸಬೇಕು ಅಂತ ಪ್ಲಾನ್ ಹಾಕಿಕೊಂಡಳು. ಸ್ವಲ್ಪ ದಿನದಲ್ಲೇ ಮಂಜ ಕಾಲೇಜಿನ ಹತ್ತಿರದ ಕಾಫೀ ಬಾರಿನಲ್ಲಿ ಕಂಡ. ಮಂಜು-ಮಂಜಣ್ಣ-ಮಂಜು ಭಯ್ಯಾ ಅಲಿಯಾಸ್ ರೊಡ್ಡ (ಎಡಚ)ನನ್ನು ನಮ್ಮ ಸುಮಾ ಕೇಳಿದಳು.
‘ಏನೋ ಅಣಾ, ತಿಂಗಳ ಹಿಂದ ಬಸಣ್ಣ ಡಾಕ್ಟ್ರ ಕ್ಲಿನಿಕ್ಕಿಗೆ ಬ್ಯಾಂಡೇಜ್ ತಗಸಾಕ ಬಂದಿದ್ದಿಯಂತೆ?’.

ಇವಳನ್ನು ಮೇಲಿಂದ ಕೆಳಗೆ ನೋಡಿದ. ಇವಳಿಗೆ ಸುದ್ದಿ ಗೊತ್ತಿದೆ ಎನ್ನುವುದು ಅವನ ಸುಪ್ತ ಮನಸ್ಸಿಗೂ ಅರಿವಾಯ್ತು. ಅಲ್ಲದೆ ಏನೂ ಇಲ್ಲ ಹೋಗು ಎಂದರೆ ಉಳಿದ ಹುಡುಗಿಯರ ಥರಾ ಸುಮ್ಮನೆ ಹೋಗುವವಳಲ್ಲ. ಹಾಗೆ ಒಂದು ಪಕ್ಷ ಹೋದರೂ ಒಂದಕ್ಕೆರಡು ಕಟ್ಟಿ ಹೇಳುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಎಣಿಸಿದ.

ಹೇಳಲೇ ಬೇಕು. ಆದರೆ, ಕಡಿಮೆ ಮಟ್ಟದ ಡ್ಯಾಮೇಜ್ ಆಗುವಂತೆ ಹೇಳುವ ಲೆಕ್ಕಾಚಾರದಲ್ಲಿ ತೊಡಗಿದ. ಚೌಕಾಶಿಗೂ ಹರೆಯಕ್ಕೂ ಎಲ್ಲಿಲ್ಲದ ಸಂಬಂಧ. ಆ ವಯಸ್ಸಿನಲ್ಲಿ ದುಡ್ಡಂತೂ ಕಾಣದ ಮಾತೇ ಆದರೂ ಮಾತುಗಳನ್ನು ಲೆಕ್ಕ ಹಾಕಿ ಉದುರಿಸುವ ಕಲೆಯನ್ನು ಕೆಲವರು ಕಲಿತೇ ಬಿಡುತ್ತಾರೆ.

‘ಸುಮ್ಮ್ ಹೋಗವಾ, ನಿಂಗ್ಯಾತಕ ಹುಡುಗ್ರ ಸುದ್ದಿ?’ ಎಂದ.
‘ ಅಲ್ಲೋ ಅಣಾ... ಹೇಳೋ’
‘ಯಾರ್ತಗೂ ಬಾಯ್ ಬಿಡ್ಬಾರ್್ದ್ ಮತ್ತ?’
‘ಇಲ್ಲ್ ಯೇಳಪಾ ಮದ್ಲಿಂಗಿತ್ತಿ (ಮದುವಣಗಿತ್ತಿ) ಮಾಡ್ದಂಗ್ ಮಾಡ್ತೀ’. ಆದದ್ದು ಇಷ್ಟು. ಮಂಜ ರುದ್ರೇಶಿಯ ನಡುವೆ ಮಾತು ಶುರುವಾಗಿತ್ತು. ಸಾಧಾರಣ ಮಟ್ಟದಲ್ಲಿ, ಸ್ವಲ್ಪ ಇನ್ವೆಸ್ಟಿಗೇಷನ್ ರೀತಿಯಲ್ಲಿ ನಡೆದ ಮಾತು ಹೊಡೆದಾಟದಲ್ಲಿ ಮುಕ್ತಾಯವಾಗಿದ್ದಕ್ಕೆ ಕಾರಣ ಅಂಥಾ ಪ್ರಮುಖವಾದದ್ದಲ್ಲ ಎಂದೆನಿಸಿದರೂ; ಅದು ಹಲ್ಲೆಯ ಮಟ್ಟದಲ್ಲಿ ಪರ್ಯವಸಾನಗೊಳ್ಳಲು ಸಾಕಷ್ಟು ಕಾರಣಗಳೂ ಆ ಸಮಯದಲ್ಲಿ ಉದ್ಭವಿಸಿರಲೂ ಸಾಕು.

ರುದ್ರೇಶಿ ಮಂಜನನ್ನು ಆಗಾಗ ಕೀಟಲೆ ಮಾಡುತ್ತಿದ್ದ. ಆವತ್ತೂ ಇಬ್ಬರೂ ಹುಡುಗಿಯರ ಕಾಲೇಜಿನ ಹತ್ತಿರ ಇರುವ ಕಿರಿದಾದ ಕಾಫೀ ಬಾರಿನಲ್ಲಿ ನಿಂತು ಮಾತಾಡಲು ತೊಡಗಿದ್ದರು.

ರುದ್ರೇಶಿ ಮಂಜನನ್ನು ಕೇಳಿದ. ‘ಏನ್ಲೇ ತಾಯಡ್ಕ ಎಲ್ಲೀಗ್ ಹೋಗಿದ್ಯಲೇ? ಕಾಣ್ಲಿಲ್ಲ?’
‘ನಮಪ್ಪ ಹ್ವಲದ್ ಕೆಲ್ಸ ನೋಡ್ಕ್ಯಂಬಾ ಅಂತ ಕಳಿಸಿದ್ನಲೇ. ಅವ್ನವ್ವ್ನ್. ಕ್ಲಾಸ್ ಐತಪ ಅಂದ್ರೂ ಕೇಳ್ಳಿಲ್ಲ. ಅದ್ಯಾವ್ ಸೀಮ್ಯಾಗಿಲ್ಲದ್ ಕ್ಲಾಸ್ ತಗಳಲೇ ನೀ ಕಾಲೇಜಿಗ್ ಹೋಗಿ ದೋಕದ್ (ಕಲಿಯುವುದು, ಕಷ್ಟಪಡುವುದು) ಅಷ್ಟಾರಾಗೇ ಐತಿ ಅಂದ. ಸುಮ್ಮ ಹೋದೆ’.

‘ನಿಮ್ಮಪ್ ಹೇಳಿದ್ದೂ ಸರಿ ಐತಪ. ನೀ
ಒಂದಿನಾನೂ ನಿಮ್ ಕಾಲೇಜಿಗೆ ಹೋಗಿದ್ದು ನೋಡ್ಲಿಲ್ಲ. ಬರೇ ಹುಡ್ಗ್ಯಾರ್ ಕಾಲೇಜಿನ್ ತಾಗೆ ಶರ್ಟ್ ಗುಂಡಿ ಬಿಚ್ಗ್ಯಂಡು ಓಡಾಡಿದ್ದೇ ಬಂತು. ಅಲ್ಲಲೇ ಮಿಂಡ್ರಿ, ಆ ಹುಡಿಗಿಗೆ ಲೈನ್ ಹೊಡಿಯಾಕ್ ಹತ್ತಿದ್ಯಲ್ಲ? ಅದು ಏನಾತಪ?’
‘ಮನ್ನಿ ಮದಿವಿ ಆತಲ್ಲ ಅಕೀದು?’
‘ಆಕಿ ಅಲ್ಲಲೇ. ಇನ್ನೊಂದ್ ಯಾವ್ದೋ ಇತ್ತಲ್ಲ?’
‘ಯಾರಪಾ?’
‘ಯಾವ್ದೋ ಹುಡಿಗಿ, ಸೀರಿ ಉಟ್ಗಂಡು ತಲಿ ಮಕನೆಲ್ಲ ಕವರ್ ಮಾಡ್ಕ್ಯಂಡಿತ್ತು. ನಿಮ್
ಬೈಕಿನ್ಯಾಗ ಟೀವಿ ಸ್ಟೇಷನ್ನಿನ್ ಕಡೀಗ್ ಹ್ವಂಟಿದ್ದ್ ನೋಡ್ದಂಗಾತು ಅಂತ ನಮ್ಮ್ ಮಾವ ಹೇಳಿದ್ನಪಾ’
ರುದ್ರೇಶಿ ತಲೆ ಕೆರೆದುಕೊಂಡ. ನೆನಪಿಗೆ ಬರಲಿಲ್ಲ. ಇತ್ತೀಚಿಗೆ ಯಾವ ಹುಡುಗಿಯನ್ನೂ ವರ್ಕ್ ಇನ್ ಪ್ರೋಗ್ರೆಸ್ ಲಿಸ್ಟಿಗೆ ಸೇರಿಸಿದ್ದು ನೆನಪಾಗಲಿಲ್ಲ. ಹುಡುಗಿಯರ ಸಹವಾಸವೇ ಇತ್ತೀಚಿಗೆ ಕಡಿಮೆ ಆಗಿದೆ. ಧಿಗ್ಗನೆ ತಲೆಯಲ್ಲಿ ಮಿಂಚು ಹೊಳೆಯಿತು.

‘ಯಾವ್ ಸೀಮಿ ಹಡಬೆ ನನ್ ಮಕ್ಳಲೇ! ನಮ್ಮಜ್ಜಿನಾ ಊರಿಗೆ ಬಿಟ್ ಬರಾಕ ಹೊಂಟಿದ್ದೆ. ನಿಮ್ಮಾವನ್ ಕಣ್ಣಾಗ ಗುಡ್ಡಿ (ಗುಡ್ಡೆ) ಅದಾವೋ ಗುಂಡಿ ಅದಾವಲೇ? ಕುಳ್ಡ್ (ಕುರುಡು)... ಮಗನ್ ತಂದು!’

‘ಅಲೈ ನಮ್ಮಾವಗ ಹುಡುಗಿಗೂ, ನಿಮ್ಮಜ್ಜಿಗೂ ವ್ಯತ್ಯಾಸ್ ಕಾಣಂಗಿಲ್ಲೇನಪಾ? ಇರ್ಲಿ ನಮ್ಮತ್ರ ಏನ್ ಮುಚ್ಚಿಡ್ತೀ ಹೊಸಾ ಕೇಸ!’
ಹೀಗೆ ಉಭಯ ಕುಶಲೋಪರಿಯಿಂದತಮಾಷೆಗೆ ಅಂತ ಶುರುವಾಗಿದ್ದು ಮಿತಿ ಮೀರಿದ್ದು ಬೆನ್ನ ಹಿಂದಿನಿಂದ ಯಾರೋ ಬಿದ್ದು ಬಿದ್ದು ನಗುವುದು ಕೇಳಿದಾಗಲೇ.

ಹಿಂದೆ ತಿರುಗಿ ನೋಡಿದರೆ ಮಂಜನ ಎದುರು ಮನೆಯ ಹುಡುಗಿ, ಉಡುಪಿ ಕಡೆಯವಳು ಜೋರು ಜೋರಾಗಿ ನಗುತ್ತಿದ್ದಳು. ತೆಳ್ಳಗೆ, ಬೆಳ್ಳಗೆ ಎತ್ತರಕ್ಕೆ ಇದ್ದ ಹುಡುಗಿ ಮಂಜನ ಮನೆಯ ರೋಡಿನಲ್ಲೇ ವಾಸವಾಗಿದ್ದ ಶಂಕರಭಟ್ಟರ ಅಕ್ಕನ ಮಗಳು. ಸ್ವಾತಿ ಅಂತ ಹೆಸರು.

ನಮ್ಮ ಊರಿಗೆ ಅದು ಬಹಳ ಅಪರೂಪದ ಹೆಸರೇ. ಬಣ್ಣವಂತೂ ಬಿಡಿ, ಹಾಲಿಗೆ ಲೈಟಾಗಿ ಕಾಶ್ಮೀರ ಕೇಸರಿ ಸೇರಿಸಿದ ಬಣ್ಣ. ಗಿಣ್ಣದ ಮೈ. ಪೋರ್ಸಲೇನಿನ ಥರ ಹೊಳೆಹೊಳೆಯುವ ಮೈ. ಕಬ್ಬಿನ ಹಾಲಿನಷ್ಟು ಹಿತವಾದ, ಸಿಹಿಯಾದ ಕನ್ನಡ ಮಾತಾಡುತ್ತಿದ್ದಳು. ನಮ್ಮ ಹುಡುಗರಿಗೆ ಅವಳು ಒಂಥರಾ ಎಕ್ಸಾಟಿಕ್. ಬೋರೆ ಹಣ್ಣು, ಕಾಕಿ ಹಣ್ಣುಗಳ ನಡುವೆ ಸ್ಟ್ರಾಬೆರಿ, ಲಿಚಿ ಅಥವಾ ರಂಬೂಟಾನ್ ಹಣ್ಣು ಇದ್ದ ಹಾಗೆ.
ಅವಳ ಮೇಲೆ ಮಂಜನಿಗೂ, ರುದ್ರೇಶಿಗೂ ಅಂಥಾ ಆಸಕ್ತಿಯೇನೂ ಇಲ್ಲದಿದ್ದರೂ ಅವಳ ಮುಂದೆ ಒಬ್ಬರು ಇನ್ನೊಬ್ಬರನ್ನು ಅವಮಾನ ಮಾಡಿದ್ದು ಮಾತ್ರ ಸಹಿಸಲಸಾಧ್ಯವಾಯಿತು.

ಮಂಜನಿಗೆ ಮೈಯ್ಯೆಲ್ಲ ಉರಿದುಹೋಯಿತು. ತನ್ನನ್ನು ಬೇಕಂತಲೇ ಇಕ್ಕಟ್ಟಿಗೆ ಸಿಗಿಸಲು ರುದ್ರೇಶಿ ಹೀಗೆ ಮಾಡಿದ ಅಂತ ಬಲವಾಗಿ ಅನ್ನಿಸಿತು. ಹುಡುಗಿ ಮುಂದೆ ಹೋದ ಮರ್ಯಾದೆ ಹುಡುಗಿಯ ಎದುರೇ ವಾಪಾಸು ಗಳಿಸಬೇಕೆಂಬ ಹಟದಲ್ಲಿ ಹಲ್ಲು ಕಚ್ಚಿ ರುದ್ರೇಶಿಗೆ ಬೆನ್ನ ಮೇಲೆ ಗುದ್ದಿ,
‘ಮುದ್ಕಿಗೂ ಹುಡುಗಿಗೂ ವ್ಯತ್ಯಾಸ
ಕಾಣಂಗಿಲ್ಲಾ ಅಂದ್ರೆ ನಿಮ್ ಮಾವ ಅನ್ನ ಎಲ್ಲಿಗ್ ಇಟ್ಗಂತಾನಲೇ?’ ಅಂದು ಬಿಟ್ಟ.
ಅಷ್ಟೇ. ಅಲ್ಲಿಂದ ಮಾತು ಪೂರ್ಣ ಹಾದಿ ಬಿಟ್ಟು, ಹೊಡೆದಾಟ ಶುರುವಾಯಿತು. ಇದ್ದವರು ಬಿಡಿಸಿದರು. ಆದರೆ ಅಷ್ಟು ಹೊತ್ತಿಗೆ ಬಹಳಷ್ಟು ಬೈಗುಳ ಚೆಲ್ಲಾಡಿ ಹೋಗಿದ್ದವು.

ಅವರಾಡಿದ ಜಗಳಕ್ಕೆ ಇನ್ನು ಸಾವಿರ ವರ್ಷವಾದರೂ ಇಬ್ಬರೂ ಮಾತನಾಡಿಸುವುದಿಲ್ಲ ಅಂದುಕೊಂಡಿದ್ದರು ಸ್ನೇಹಿತರು. ಆದರೆ, ಇಬ್ಬರೂ ಜೀವದ ಗೆಳೆಯರು. ಇದಾದ ಸ್ವಲ್ಪ ದಿನದಲ್ಲೇ ಮಂಜನ ತಂದೆ ತೀರಿ ಹೋದರು. ಮೊದಲಿಗೆ ಅವನ ಮನೆಗೆ ಬಂದು ವ್ಯವಸ್ಥೆಗಳನ್ನು ಮಾಡಲು ಬೆಂಬಲವಾಗಿ ನಿಂತವನೇ ರುದ್ರೇಶಿ. ಹೆಣವನ್ನು ಆಸ್ಪತ್ರೆಯಿಂದ ಮನೆಗೆ ತರುವುದು, ಅಂತ್ಯಕ್ರಿಯೆಗೆ ಬೇಕಾದ ಸಾಮಾನುಗಳು, ಜನ ಎಲ್ಲರನ್ನೂ ಹೊಂದಿಸಲು ಮುಂದೆ ಓಡಾಡಿದ. ಮಂಜನೇ ಹೇಳುವ ಹಾಗೆ ಹಣದ ಸಹಾಯವನ್ನೂ ಲೆಕ್ಕವಿಲ್ಲದೆ ಮಾಡಿದ. ಅದರ ಬಗ್ಗೆ ಯಾರ ಹತ್ತಿರವೂ ಕೊಚ್ಚಿಕೊಳ್ಳಲಿಲ್ಲ.

ಇದು ಇವರಿಬ್ಬರ ಕಥೆಯಲ್ಲ. ಊರಿನಲ್ಲಿದ್ದ ಬಹಳ ಸ್ನೇಹಿತರ, ಸ್ನೇಹಗಳ ಕಥೆ. ಸಮಯದ ಸವಾಲುಗಳನ್ನು ಎದುರಿಸಿ, ಯಾವ ಲೋಭಕ್ಕೂ ಬಗ್ಗದೇ ಸಂತೃಪ್ತಿಯಿಂದ ಊರಿನಲ್ಲಿ ನೆಲೆಸಿರುವ ಜನ ಈಗಲೂ ಇದ್ದಾರೆ. ಅದರ ಸಂತೋಷ, ಸುರಕ್ಷಾ ಭಾವ ಬೇರೆ ತೆರನದ್ದು. ದುಡ್ಡಿನಿಂದ ಅಥವಾ ದೊಡ್ಡ ಜನರ ಸಾಂಗತ್ಯದಿಂದ ದೊರಕುವಷ್ಟು ತೆಳುವಾದ ಮನಃಶಕ್ತಿಯಲ್ಲ.

ಊರಿನ ಒಂದು ಶಕ್ತಿ ಮತ್ತು ನಮ್ಮೊಳಗೆ ನೆಲೆಸಿರುವ ಊರು ನಾವು ಅಲ್ಲಿಂದ ಹೊರ ಬಂದಾಗಲೇ ತಿಳಿಯುವುದು. ಹಾಗೇ, ನನಗೂ ದಾವಣಗೆರೆಯಿಂದ ಹೊರಬಂದ ಮೇಲೆ ಊರು ಸಾಕಷ್ಟು ಅರ್ಥವಾಯಿತು. ಅದು ವೈರುಧ್ಯಗಳ ಇಡುಗಂಟಾದರೂ, ನನ್ನೊಳಗೆ ನನ್ನಂಥ ಲಕ್ಷೋಪಲಕ್ಷ ಜನರೊಳಗೆ ಮಿಡಿಯುತ್ತಿರುವ ದಾವಣಗೆರೆ ಆಪ್ತವೂ ಹೌದು, ದೂರವೂ ಹೌದು.

ಆಗ ಹಳೇ ಬಸ್ ಸ್ಟಾಂಡು ಮಾತ್ರ ಇತ್ತು. ಹೊಸ ಬಸ್ ಸ್ಟಾಂಡ್ ನಿರ್ಮಾಣವಾಗಿ ಈಗ ವರ್ಷಗಳೇ ಕಳೆದಿವೆ. ಆದರೆ, ಆಗ ಪೂನಾ-ಬೆಂಗಳೂರು ರಸ್ತೆಯಲ್ಲಿದ್ದ ಬಸ್ ಸ್ಟಾಂಡಿನಲ್ಲಿ ಇಳಿದ ಕೂಡಲೇ ಕಾಣುತ್ತಿದ್ದುದು ಸುತ್ತಲಿನ ಪುಟ್ಟ ಪುಟ್ಟ ಅಂಗಡಿಗಳು, ಕೊಚ್ಚೆ, ಜನ ಸಂದಣಿ, ಹೂವು ಮಾರುವವರ ಕಿರುಚಾಟ, ಅದೆಲ್ಲದರ ನಡುವೆ ಧೈರ್ಯವಾಗಿ ನಿಂತಿದ್ದ ಮತ್ತು ಆಗಿನ ಕಾಲಕ್ಕೆ ಸ್ವಲ್ಪ ದೊಡ್ಡದೇ ಅನಿಸಿದ್ದ ಕಾವೇರಿ ಬೇಕರಿ, ಕಾಫೀ ಬಾರುಗಳು, ತಿಂಡಿ ಹೋಟೆಲ್ಲುಗಳು, ಬಟ್ಟೆ ಅಂಗಡಿಗಳು, ಕಿರಿದಾದ ರಸ್ತೆಗಳು, ಅದರಲ್ಲೇ ಓಡುತ್ತಿರುವ ನೂರಾರು ಬೈಕು-ಸ್ಕೂಟರು–ಕಾರು-ಲಾರಿಗಳು, ಸಿನಿಮಾ ಥಿಯೇಟರು, ಮದುವೆ ಛತ್ರ.

ಆಗ ತೊಂಬತ್ತನೇ ದಶಕದ ಮಧ್ಯಂತರ.
ದೇಶದಲ್ಲಿ ಸಾಕಷ್ಟು ರಾಜಕೀಯ ಬದಲಾವಣೆಗಳು ಆಗುತ್ತಿದ್ದವು. ಆಗ ತಾನೇ ತಂತ್ರಜ್ಞಾನ ಕ್ಷೇತ್ರ, ಐಟಿ ಅಥವಾ ಇನ್ಫರ್ಮೇಷನ್ ಟೆಕ್ನಾಲಜಿ ಮೈ ಮುರಿಯುತ್ತಿತ್ತು. ಭಾರತ ಆ ಹಾದಿಯಲ್ಲಿ ಮುನ್ನುಗ್ಗಲು ಹುರಿಕಟ್ಟಾಗಿ ನಿಂತಿತ್ತು. ಸುತ್ತಮುತ್ತಲಿನಲ್ಲಿ ಕೆಲವರು ಆಗಲೇ ಅಮೆರಿಕ, ಇಂಗ್ಲೆಂಡುಗಳಿಗೆ ಹಾರಿಯಾಗಿತ್ತು. ಅಂಥವರ ಅಪ್ಪ-ಅಮ್ಮನಿಗೆ ವಿಶೇಷ ಮರ್ಯಾದೆ ದೊರಕುತ್ತಿತ್ತು.

ಅಂಥ ಕಾಲದಲ್ಲಿ ದಾವಣಗೆರೆಯಲ್ಲೂ ಅಲ್ಲಲ್ಲಿ ಕಂಪ್ಯೂಟರ್ ಟ್ರೇನಿಂಗ್ ಇನ್ಸ್ಟಿಟ್ಯೂಟ್ಗಳು ಕಾಣುತ್ತಿದ್ದವು. ಆದರೆ, ಅಲ್ಲಿಗೆ ಹೋಗುತ್ತಿದ್ದವರಲ್ಲಿ ಸ್ಥಳೀಯರು ಕಡಿಮೆ. ಹೊರಗಿನಿಂದ ಓದಲು ಬಂದ ಹುಡುಗರೇ ಜಾಸ್ತಿ. ಲೋಟಸ್, ಡಾಸ್ ಅಂತೆಲ್ಲ ಪ್ರೋಗ್ರಾಮುಗಳನ್ನು ಕಲಿಯಲು, ಬರೀ ಕಂಪ್ಯೂಟರನ್ನು ಆನ್ ಮಾಡಿ ಆಫ್ ಮಾಡುವುದನ್ನು ಹೇಳಿಕೊಡಲು ಎಳೆ ವಯಸ್ಸಿನ ಮೇಷ್ಟ್ರುಗಳು ಇದ್ದರು. ಬೂಟ್ ರೀ ಬೂಟ್ ಅನ್ನುವ ಮಾತುಗಳನ್ನು ಕೇಳಿದಾಗಲೆಲ್ಲ ಒಂದು ರೀತಿಯ ತಬ್ಬಲಿತನದ ಭಾವನೆ ಮೂಡುತ್ತಿತ್ತು.

ಇಂಥ ಕ್ರಾಂತಿಕಾರೀ ಬದಲಾವಣೆಗೆ ನನ್ನ ಊರು ತೆರೆದುಕೊಳ್ಳುತ್ತಿಲ್ಲವಲ್ಲ ಎಂತಲೇನೋ ಅಥವಾ ಇದನ್ನ ಒಪ್ಪಲೇ ಬೇಕಾದ ಅನಿವಾರ್ಯತೆ ಬಂದರೆ ಕೈ ಹಿಡಿದು ನಡೆಸುವ ಜನ ನನ್ನವರಲ್ಲ ಎನ್ನುವ ಒಂದು ರೀತಿಯ ಪರಕೀಯ ಭಾವ. ಅಲ್ಲಿದ್ದಾಗ ಅನ್ನಿಸದ, ಆದರೆ ಈಗ ತೀವ್ರವಾಗಿ ಹರಳುಗಟ್ಟುವ ಭಾವ: ಬಿಟ್ಟ ಊರು ನನ್ನದು. ಇದ್ದ ಊರು ನನ್ನದಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.